ಸಾಗರ: ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಸಾಗರ ಘಟಕದ ಸದಸ್ಯರು ಕುಟುಂಬ ಸಹಿತ ಬಂದು ಶಾಸಕ ಎಚ್. ಹಾಲಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 1.30 ಲಕ್ಷ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತ್ಯಂತ ನಿಷ್ಠೆಯಿಂದ ಸಾರಿಗೆ ಸಂಪರ್ಕ ಕಲ್ಪಿಸಿಕೊಂಡು ಬರುತ್ತಿರುವ ನೌಕರರು ಹಾಗೂ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಮೇಲ್ನೋಟಕ್ಕೆ ನಾವು ಸರ್ಕಾರಿ ಬಸ್ ಚಾಲಕರು, ನಿರ್ವಾಹಕರು ಎಂದು ಕರೆಸಿಕೊಳ್ಳುತ್ತಿದ್ದರೂ ವಾಸ್ತವವಾಗಿ ನಮಗೆ ಸರ್ಕಾರಿ ನೌಕರರಿಗೂ ಸಿಗುವ ವೇತನ, ಯಾವುದೇ ಸೌಲಭ್ಯವೂ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ನಾವು ಸರ್ಕಾರಿ ನೌಕರರ ಯಾದಿಯಲ್ಲಿ ಬರದೇ ಇರುವುದರಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆಯಲು ಹೋದರೆ ನೀವು ಸರ್ಕಾರಿ ನೌಕರರಲ್ಲ ಎಂಬ ಹಣೆಪಟ್ಟಿ ಹಚ್ಚುತ್ತಿದ್ದಾರೆ. ಈಗ ನಮಗೆ ಕೊಡುತ್ತಿರುವ ಸಂಬಳ ತೀರಾ ಕಡಿಮೆ ಇದ್ದು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುವುದು ಸೇರಿದಂತೆ ಯಾವುದಕ್ಕೂ ಸಾಕಾಗುತ್ತಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡಿದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಪ್ರತಿಭಟನಾನಿರತರು ಹೇಳಿದರು.
ಹಿಂದಿನ ಸರ್ಕಾರದ ಬಳಿ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಗಳಾದ ಮೇಲೆ ನಮ್ಮ ಮನವಿಗೆ ಸ್ಪಂದಿಸಿ ಈ ಸಂಬಂಧ ವರದಿ ತರಿಸಿಕೊಳ್ಳಲು ಸಮಿತಿ ರಚಿಸಿರುವುದು ಸ್ವಲ್ಪ ಆಶಾದಾಯಕ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಸದನದಲ್ಲಿ ನಮ್ಮ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯುವ ಮೂಲಕ ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ಸದನದಲ್ಲಿ ಚರ್ಚೆ ಮಾಡುವ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹಾಲಪ್ಪ, ನಮ್ಮೂರಿನ ಕೆಎಸ್‌ಆರ್‌ಟಿಸಿ ನೌಕರರು ಕುಟುಂಬ ಸಹಿತವಾಗಿ ಬಂದು ಮನವಿ ಸಲ್ಲಿಸಿ, ಸಮಸ್ಯೆಯನ್ನು ಗಮನಕ್ಕೆ ತಂದಿದ್ದೀರಿ. ಈ ಬಗ್ಗೆ ಶಾಸಕ ಮಿತ್ರರ ಜೊತೆ ಸೇರಿ ಸಮಾಲೋಚನೆ ನಡೆಸಲಾಗುತ್ತದೆ. ಸದನದಲ್ಲಿ ನಿಮ್ಮ ಬೇಡಿಕೆಯನ್ನು ಸರ್ಕಾರದ ಎದುರು ಇರಿಸುವ ಜೊತೆಗೆ ಕೆಎಸ್‌ಆರ್‌ಟಿಸಿಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಅಧ್ಯಕ್ಷ ಕೆ.ಆರ್. ಗಣೇಶಪ್ರಸಾದ್, ಆರ್.
ಶ್ರೀನಿವಾಸ್, ಅರುಣ ಕುಗ್ವೆ, ನಾಗರಾಜ್, ಕೆಎಸ್‌ಆರ್ ಟಿಸಿ ನೌಕರರ ಘಟಕದ ಚಂದ್ರಶೇಖರ್, ನಾಗರಾಜ್ ಹಕ್ಕಾಡಿ, ಹರೀಶಕುಮಾರ್, ಎನ್.ಎಸ್. ಹೂಗಾರ್, ಮುರುಗೇಂದ್ರಪ್ಪ ನ್ಯಾಸಣಗಿ, ಲಂಕೇಶ್, ಗುರುಸ್ವಾಮಿ ಗಂಟಿನಮಠ್ ಮತ್ತಿತರರು ಇದ್ದರು.