Advertisement
ಶರಾವತಿ ಕಣಿವೆಯ ಸಂರಕ್ಷಿತ ಅರಣ್ಯ ಪ್ರದೇಶದ ಮುಪ್ಪಾನೆ ಕಾರ್ಗಲ್‌ನಿಂದ 14 ಕಿಮೀ ದೂರದಲ್ಲಿದೆ. ಮುಖ್ಯವಾಗಿ ಸಾಗರ- ಭಟ್ಕಳ ರಸ್ತೆಯಿಂದ ಕೇವಲ ಎರಡೂವರೆ ಕಿಮೀ ದೂರದಲ್ಲಿ ಈ ಮುಪ್ಪಾನೆ ಲಾಂಚ್ ನಿಲ್ಲುವ ಶರಾವತಿ ಹಿನ್ನೀರಿನ ದಡವಿದೆ. ಇಲ್ಲಿಂದ ತುಮರಿ ಗ್ರಾಪಂನ ಹಲ್ಕೆ ಎಂಬಲ್ಲಿನ ದಡಕ್ಕೆ ಕೇವಲ 10 ನಿಮಿಷಗಳಲ್ಲಿ ಲಾಂಚ್ ಮೂಲಕ ಹೋಗಬಹುದು. ಕಾರ್ಗಲ್‌ನಿಂದ ಸಾಗರಕ್ಕೆ ಬಂದು ಅಲ್ಲಿಂದ ಆವಿನಹಳ್ಳಿ ರಸ್ತೆಯಲ್ಲಿ ಸಿಗಂದೂರು ತಲುಪಲು 80 ಕಿಮೀ ಸಾಗಬೇಕಾದಲ್ಲಿ ಈ ಲಾಂಚ್ ಮೂಲಕ ಪಯಣಿಸಿದರೆ ಬರೋಬ್ಬರಿ 45 ಕಿಮೀನ ಪ್ರಯಾಣ ಉಳಿಸುತ್ತದೆ. ಅಷ್ಟೇ ಅಲ್ಲ, ಶಿರಸಿ, ಸಿದ್ಧಾಪುರದಿಂದ ಸಿಗಂದೂರು ಅಥವಾ ಕೊಲ್ಲೂರಿಗೆ ಹೋಗುವವರು ಕೂಡ ಈ ಮಾರ್ಗವನ್ನು ಬಳಸಿದರೆ ಅವರಿಗೆ ಗರಿಷ್ಠ ಅನುಕೂಲಗಳಾಗುತ್ತವೆ.
Related Articles
Advertisement
ಸದ್ಯ ಮಾಹಿತಿ ಕೊರತೆ ಪ್ರಸ್ತುತ ವಿಶೇಷವಾದ ಜನಸಂಚಾರ ಇಲ್ಲದಿರುವುದರಿಂದ ಕಾಂಕ್ರೀಟ್ ಫ್ಲ್ಯಾಟ್ ಫಾರಂ ಇಲ್ಲದಿದ್ದರೂ ನಡೆಯುತ್ತಿದೆ. ಅಲ್ಲದೆ ನಾಲ್ಕು ಚಕ್ರದ ವಾಹನಗಳು ಸಾಗುವ ದಾರಿಯಲ್ಲಿ ಮುಪ್ಪಾನೆ ಐಬಿ ಎಂದು ಕರೆಸಿಕೊಳ್ಳುವ ಅರಣ್ಯ ಇಲಾಖೆ ಹೋಂ ಸ್ಟೇ ವ್ಯವಸ್ಥೆ ಇರುವುದರಿಂದ ಇಲಾಖೆ ಗೇಟ್ ನಿರ್ಮಿಸಿ ಬೀಗ ಹಾಕಿದೆ. ಅದನ್ನು ದಿನದ ನಿರ್ದಿಷ್ಟ ಸಮಯದಲ್ಲಾದರೂ ತೆಗೆಸುವ ಕೆಲಸ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಇಲ್ಲದಿರುವುದರಿಂದ ಸಾಧ್ಯವಾಗಿಲ್ಲ. ಪ್ರವಾಸಿಗರಿಗೆ ಕೂಡ ಈ ಪರ್ಯಾಯ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎನ್ನಬಹುದು.
ಪ್ರಸ್ತುತ ದಿನದಲ್ಲಿ ಬೆಳಗ್ಗೆ 8-30, 11-30, ಮಧ್ಯಾಹ್ನ 2-30 ಹಾಗೂ 4-30ಕ್ಕೆ ನಿಗದಿತ ಸಂಚಾರ ಮಾಡುವ ಲಾಂಚ್ ಅಗತ್ಯ ಬಿದ್ದರೆ ವಿಶೇಷ ಟ್ರಿಪ್‌ಗ್ಳನ್ನು ಮಾಡುತ್ತದೆ. ಆಚೆಗಿನ ದಡದಿಂದ 10 ನಿಮಿಷಕ್ಕೆ ಬರಬಹುದಾದ್ದರಿಂದ ಕಾಯುವ ಅಗತ್ಯವಿಲ್ಲ. ಪ್ರಸ್ತುತ ಹಲ್ಕೆಯಿಂದ ತುಮರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಅದರ ಅಭಿವೃದ್ಧಿಗೆ ಶಾಸಕ ಎಚ್. ಹಾಲಪ್ಪ 80 ಲಕ್ಷ ರೂ. ಕಾಮಗಾರಿಯ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯಿದೆ.
ಭಟ್ಕಳ ರಸ್ತೆಯಿಂದ ಮುಪ್ಪಾನೆಗೆ ಮಣ್ಣಿನ ರಸ್ತೆಯಿದ್ದು, ಅರಣ್ಯ ಇಲಾಖೆ ಗೇಟ್‌ನ್ನು ಹಗಲು ವೇಳೆಯಲ್ಲಿ ತೆರೆದಿರಿಸಿದರೆ ಈ ಭಾಗದ ದೊಡ್ಡ ಸಮಸ್ಯೆಯೇ ಇಲ್ಲವಾಗುತ್ತದೆ. ಆಗ ಮಾರ್ಗಸೂಚಿಗಳನ್ನು ಹಾಕಿ ಪ್ರವಾಸಿ ಜನಕ್ಕೆ ಮಾರ್ಗದರ್ಶನ ಮಾಡಲು ಅವಕಾಶವಾಗುತ್ತದೆ. ಜಲಸಾರಿಗೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಅವಕಾಶವನ್ನು ಸರ್ಕಾರಗಳು ಕಳೆದುಕೊಳ್ಳುತ್ತಿವೆ.ಕೆಲವು ದೇಶಗಳಲ್ಲಿ ಜಲಸಾರಿಗೆಯೊಂದೇ ಸಂಪರ್ಕ ವ್ಯವಸ್ಥೆ ಆಗಿರುವುದನ್ನು ಕಾಣುತ್ತೇವೆ. ರಸ್ತೆ ನಿರ್ವಹಣೆಯಂತ ಮರುಕಳಿಸುವ ವೆಚ್ಚಗಳಿಲ್ಲದ, ಅಂತರ ಕಡಿಮೆ ಮಾಡುವ ಈ ಮುಪ್ಪಾನೆ ಹಲ್ಕೆ ಜಲಮಾರ್ಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಪ್ರಸ್ತುತ ತುಮರಿ ಭಾಗದಲ್ಲಿ ನಾಲ್ಕು ಲಾಂಚ್‌ಗಳಿವೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಮೂರು ಲಾಂಚ್ ಬಿಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಎರಡು ಮಾತ್ರ ಓಡಾಟ ನಡೆಸುತ್ತದೆ. ಸುಸ್ಥಿತಿಯಲ್ಲಿರುವ ಒಂದು ಲಾಂಚ್ ಬಳಕೆಯೇ ಆಗುತ್ತಿಲ್ಲ. ವ್ಯವಸ್ಥಿತ ಫ್ಲ್ಯಾಟ್ ಫಾರಂ ಸಿದ್ಧವಾದರೆ ಅದನ್ನೇ ಇಲ್ಲಿ ಬಳಸಿ ಒಂದೇ ಬಾರಿಗೆ ಹೆಚ್ಚು ವಾಹನ, ಜನರನ್ನು ಸಾಗಿಸಬಹುದು. ಸರ್ಕಾರ ತನ್ನದೇ ಇಲಾಖೆಗಳ ಜೊತೆ ಸಮನ್ವಯ ಸೃಷ್ಟಿಸಿ ಇಚ್ಛಾಶಕ್ತಿ ತೋರಿದರೆ ಈಗಿರುವ ಸಿಗಂದೂರು ಮಾರ್ಗದ ಒತ್ತಡವನ್ನೂ ಕಡಿಮೆ ಮಾಡಬಹುದು. ರಸ್ತೆ ಕಾಮಗಾರಿ, ಸೇತುವೆ ನಿರ್ಮಾಣದಂತ ಕೋಟಿ ಕೋಟಿ ರೂ.ಗಳ ಕಾಮಗಾರಿ ಸಂಪಾದನೆಯನ್ನು ತಂದುಕೊಡುವಂತದು. ಹಾಗಾಗಿಯೇ ಜನಪ್ರತಿನಿಧಿ ಗಳಿಗೆ ಜಲಸಾರಿಗೆ ಕೊನೆಯ ಆಯ್ಕೆ ಎಂದು ಜನ ಹೇಳುತ್ತಾರೆ.