ಸಾಗರ: ಸಂಸದ ಬಿ.ವೈ. ರಾಘವೇಂದ್ರ ಅವರ ಹಿಂದಿನ ಅವಧಿಯಲ್ಲಿ ಡಿಜಿಟಲ್ ಗ್ರಾಮ ಎಂದು ಘೋಷಣೆಗೆ ಪಾತ್ರವಾಗಿರುವ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶದ ತುಮರಿ ಗ್ರಾಮದಲ್ಲೀಗ ಜನ ಬಿಎಸ್‌ಎನ್‌ಎಲ್ ಟವರ್ ಕಾರ್ಯಾಚರಣೆಯ ಸೇವಾ ವ್ಯತ್ಯಯದಿಂದ ಮೊಬೈಲ್ ಸಿಗ್ನಲ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ದೇಶಾದ್ಯಂತ ಡಿಜಿಟಲ್ ಗ್ರಾಮಗಳನ್ನು ನಿರ್ಮಿಸುವ ಕಾರ್ಯಯೋಜನೆ ರೂಪಿಸಲಾಗಿತ್ತು. ಇದರನ್ವಯ ಗ್ರಾಪಂ ವ್ಯಾಪ್ತಿಯಲ್ಲಿ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಅಭಿವೃದ್ಧಿಪಡಿಸಿ ನಾಲ್ಕು ಎಂಬಿಪಿಎಸ್ ವೇಗದ ಇಂಟರ್‌ನೆಟ್, ಅಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸುವ ಸೌಲಭ್ಯ, ಆನ್‌ಲೈನ್ ಬ್ಯಾಂಕಿಂಗ್, ಕಂಪ್ಯೂಟರ್ ಸಾಕ್ಷರತಾ ಅಭಿಯಾನ ಮೊದಲಾದವುಗಳು ತುಮರಿಯ ಜನಕ್ಕೆ ಲಭ್ಯವಾಗಬೇಕಿತ್ತು. ಆದರೆ ಒಂದೆಡೆ ಸಂಪನ್ಮೂಲದ ಕೊರತೆಯ ಹಿನ್ನೆಲೆಯಲ್ಲಿ ಡಾಟಾ ಸೌಲಭ್ಯ ಒದಗಿಸಬೇಕಿರುವ ಬಿಎಸ್‌ಎನ್‌ಎಲ್ ವಿದ್ಯುತ್ ಇಲ್ಲದ ಸಮಯದಲ್ಲಿ ಡೀಸೆಲ್ ಹಾಕಿ ಜನರೇಟರ್ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಶನಿವಾರದಿಂದ ಕೈ ಚೆಲ್ಲಿದೆ.
ಈ ಕಾರಣದಿಂದ ರಾಜ್ಯದ ಎರಡನೇ ಡಿಜಿಟಲ್ ಗ್ರಾಮ ತುಮರಿ ನಾಗರಿಕ ಸೌಲಭ್ಯಗಳಿಂದ ವಂಚಿತವಾಗುವ ತನ್ನ ಹೆಗ್ಗಳಿಕೆಯನ್ನು ಮುಂದುವರಿಸಿದೆ. ಅರ್ಧ ಶತಮಾನದ ಹಿಂದೆ ರಾಜ್ಯದ ವಿದ್ಯುತ್ ಉತ್ಪಾದನೆಗಾಗಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯದ ಕಾರಣ ಮಾನವ ನಿರ್ಮಿತ ದ್ವೀಪವಾಗಿ ನಾಗರಿಕ ಸೌಲಭ್ಯಗಳಿಂದ ದೂರವಾಗಿ ನರಕ ಅನುಭವಿಸುತ್ತಿರುವ ಇಲ್ಲಿನ ಜನರ ಡಿಜಿಟಲ್ ಕನಸು ಕೂಡ ಹುಸಿಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏನಿದು ಡಿಜಿಟಲ್ ಗ್ರಾಮ?: ಕಳೆದ ಫೆಬ್ರವರಿ 23ರಂದು ತುಮರಿಯನ್ನು ಸ್ಥಳೀಯ ಸಂಸದ ಬಿ.ವೈ. ರಾಘವೇಂದ್ರ ಘೋಷಿಸಿ ಇಲ್ಲಿನ ಜನರಲ್ಲಿ ಹೊಸ ಭರವಸೆಗಳನ್ನು ಮೂಡಿಸಿದರು. ರಾಜ್ಯದಲ್ಲಿ ಉತ್ತರ ಕನ್ನಡದ ಹಡಿನಬಾಳ ಬಿಟ್ಟರೆ ಡಿಜಿಟಲ್ ಎನ್ನಿಸಿಕೊಳ್ಳುವ ಅಪರೂಪದ ಅವಕಾಶ ಪಡೆದ ತುಮರಿ ಹೈ ಸ್ಪೀಡ್ ಇಂಟರ್‌ನೆಟ್ ಮೂಲಕ ನಾಗರಿಕ ಸೌಲಭ್ಯ ಪಡೆಯಲಿದೆ ಎನ್ನಲಾಗಿತ್ತು. ತುಮರಿಯ ಸುತ್ತಮುತ್ತ 2.5 ಕಿಮೀ ಭಾಗದಲ್ಲಿ ಒಎಫ್‌ಸಿ ತಂತಿಗಳನ್ನು ಎಳೆಯಲಾಗುತ್ತದೆ. ಪ್ರತಿ ಕುಟುಂಬದ ಒಬ್ಬರಂತೆ 300 ಜನ ನಾಗರಿಕರಿಗೆ ಕಂಪ್ಯೂಟರ್ ಬಳಕೆಯ ಶಿಕ್ಷಣ ಒದಗಿಸಲಾಗುತ್ತದೆ. ಬ್ಯಾಂಕ್ ಖಾತೆ ತೆಗೆಯುವುದು, ಸಾಲದ ಅರ್ಜಿ, ಮರುಪಾವತಿ ಮೊದಲಾದವನ್ನು ಜನರಿಗೆ ಕಲಿಸಿಕೊಡಲಾಗುವುದು ಎಂಬ ಇಂಗಿತ ವ್ಯಕ್ತವಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ 370 ಸೇವೆಗಳನ್ನು ಒದಗಿಸಲು ಡಿಜಿಟಲ್ ಇಂಡಿಯಾ ನೆರವಾಗಲಿದೆ ಎಂಬ ಮಾತಿತ್ತು.
ತುಮರಿಯಲ್ಲಿರುವ ಬಿಎಸ್‌ಎನ್‌ಎಲ್ ಟವರ್ ವಿದ್ಯುತ್ ಆಧಾರಿತವಾಗಿದ್ದು, ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಗಾಳಿ ಕಾರಣದಿಂದ ವಿಪರೀತ ವಿದ್ಯುತ್ ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್ ವಿನಿಮಯ ಕೇಂದ್ರದ ಬ್ಯಾಟರಿಗಳಿಗೆ ವಿದ್ಯುತ್ ಸಾಕಾಗುತ್ತಿಲ್ಲ. ಪರ್ಯಾಯ ವಿದ್ಯುತ್ ಉತ್ಪಾದಿಸಲು ಬಿಎಸ್‌ಎನ್‌ಎಲ್ಗೆ ಡೀಸೆಲ್ ಖರೀದಿಸಬೇಕಾಗುತ್ತದೆ. ಆದರೆ ಆದಾಯ ಕಡಿಮೆಯಿರುವ ಕಾರಣ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಬಿಎಸ್‌ಎನ್‌ಎಲ್ನ ಕೇಂದ್ರ ಕಚೇರಿ ಖರೀದಿಗೆ ಅನುಮತಿ ನೀಡಿಲ್ಲ. ಪರಿಣಾಮ ಶನಿವಾರದಿಂದ ವಿದ್ಯುತ್ ಇರುವ ಸಂದರ್ಭದಲ್ಲಿ ಮಾತ್ರ ಮೊಬೈಲ್ ಟವರ್ ಕೆಲಸ ಮಾಡಿ ಸಿಗ್ನಲ್ ಜನರಿಗೆ ಲಭಿಸುತ್ತದೆ. ಸಿಗ್ನಲ್ನ ಕೊರತೆಯಿಂದ ಅಂತರ್ಜಾಲ ಅಸ್ತವ್ಯಸ್ತಗೊಂಡಿದ್ದು ಡಿಜಿಟಲೀಕರಣದ ಸೌಲಭ್ಯದ ಕನಸಿನ ಗುಳ್ಳೆ ಒಡೆದಿದೆ. ಸ್ಥಳೀಯ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಈ ಕುರಿತು ಗಮನ ಸೆಳೆಯುತ್ತ, ಬಿಎಸ್‌ಎನ್‌ಎಲ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದರೆ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ವಿದ್ಯುತ್ ಇದ್ದಾಗ ಮಾತ್ರ ಸೇವೆ ಲಭ್ಯ ಎಂದು ದೃಢಪಡಿಸಿದ್ದಾರೆ. ಗ್ರಾಹಕರ ಹಕ್ಕುಗಳು, ಸೇವಾ ನಿಯಮ ಇತ್ಯಾದಿ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮಾತಾಡಿದರೆ, ನಾವೇನು ಮಾಡುವುದು ಎನ್ನುತ್ತಿದ್ದಾರೆ ಎಂದರು.