Advertisement

Sagara: ರೈತರ ಭೂಮಿ ಹಕ್ಕು ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಸರಕಾರ ಬದ್ಧ: ಜಿ.ಪರಮೇಶ್ವರ್

10:25 PM Oct 26, 2024 | Esha Prasanna |

ಸಾಗರ: ಮಲೆನಾಡು ರೈತರ ಭೂಮಿ ಹಕ್ಕು ಹೋರಾಟ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಹಂತ ಹಂತವಾಗಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ನಾವು ಒಂದೇ ಹಂತದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಯಾವತ್ತೂ ನೀಡಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

Advertisement

ಪಟ್ಟಣದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನಿವಾಸಕ್ಕೆ ಶನಿವಾರ ಭೇಟಿಯ ಬಳಿಕ ಮಾತನಾಡಿ, ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ 12 ಸಾವಿರ ಎಕರೆ ಭೂಮಿ ಕಳೆದುಕೊಂಡಿರುವ ಮಾತಿದೆ. ಆದರೆ ಸುಮಾರು 5 ಸಾವಿರ ಎಕರೆ ಪ್ರದೇಶಕ್ಕೆ ಈ ವರೆಗೂ ನೀರಿನಲ್ಲಿ ಮುಳುಗಡೆಯಾಗಿಲ್ಲ. ಈಗಲೂ ಜಮೀನನ್ನು ಅನುಭವಿಸುತ್ತಿರುವ ಮೂಲ ನಿವಾಸಿಗಳು ಅಲ್ಲೇ ಇದ್ದಾರೆ. ಅದೆಲ್ಲವನ್ನೂ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ವಿಧಾನಸಭೆ ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲೂ ಮಲೆನಾಡು ರೈತರ ಭೂ ಹಕ್ಕಿನ ಹೋರಾಟದ ಬಗ್ಗೆ ಉಲ್ಲೇಖಿಸಿದ್ದು, ರೈತರ ಪ್ರತಿಭಟನೆಯ ವಿಚಾರ ಮುಖ್ಯಮಂತ್ರಿ, ಅರಣ್ಯ ಸಚಿವರ ಗಮನಕ್ಕೆ ತರುವುದಲ್ಲದೆ, ಸಮಸ್ಯೆ ಪರಿಹಾರಕ್ಕೆ ಈಗಲೂ ಬದ್ಧರಿದ್ದೇವೆ ಎಂದು ಭರವಸೆ ನೀಡಿದರು.

ಜಾತಿ ಗಣತಿ ವರದಿ ಬಹಿರಂಗಕ್ಕೆ ಬದ್ಧ
ಜಾತಿ ಗಣತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ರಾಜ್ಯದ ತೆರಿಗೆದಾರರ 160 ಕೋಟಿ ರೂ. ವೆಚ್ಚದಲ್ಲಿ ಜಾತಿ ಗಣತಿ ನಡೆಸಲಾಗಿದ್ದು, ಇದನ್ನು ಸಾರ್ವಜನಿಕಗೊಳಿಸುವುದು ಸರಕಾರದ ಆದ್ಯತೆ. ಈ ತೀರ್ಮಾನದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಯಾವುದೇ ಸ್ವಾಮೀಜಿಯವರೂ ಚುನಾವಣೆ ಗೆದ್ದು, ಅಧಿಕಾರ ನಡೆಸುವುದಿಲ್ಲ. ಹೀಗಾಗಿ ಅವರ ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಈ ಸಂಬಂಧ ಪಕ್ಷದ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದನ್ನು ಗೌರವಿಸಬೇಕು, ಅಪಾರ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಮಜಾಯಿಷಿ ನೀಡಿದರು.

ರಾಜಧಾನಿಗೆ ಶರಾವತಿ ಒಯ್ಯುವ ಪ್ರಸ್ತಾವನೆ ನಿಜ!
ಬೆಂಗಳೂರು ನಗರ ನಿರಂತರ  ಬೆಳೆಯುತ್ತಿದ್ದು, ಈಗಾಗಲೇ 5ನೇ ಹಂತದಲ್ಲಿ ಕಾವೇರಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನದಲ್ಲಿ ಕಾವೇರಿ ನೀರು ಪಡೆಯಲು 6ನೇ ಹಂತದ ಯೋಜನೆಗೆ ಅವಕಾಶವಿಲ್ಲದ ಕಾರಣಕ್ಕೆ, ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹೊಸ ಮಾರ್ಗೋಪಾಯ ಅವಲೋಕಿಸುತ್ತಿದ್ದೇವೆ. ಎಲ್ಲಿಂದಲಾದರೂ ಬೆಂಗಳೂರಿಗೆ ನೀರು ತರಬೇಕೆನ್ನುವ ಸಲಹೆ ಬಂದಾಗ ಶರಾವತಿ ನದಿ ನೀರಿನ ವಿಚಾರವೂ ಪ್ರಸ್ತಾಪವಾಗಿದ್ದು, ಪರಿಶೀಲನೆ ನಡೆಸಿದ್ದೇವೆ. ಮತ್ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ನಗರ ಘಟಕದ ಅಧ್ಯಕ್ಷ ಸುರೇಶ್ ಬಾಬು, ಡಿ. ದಿನೇಶ್, ಅನಿತಾ ಕುಮಾರಿ, ವೆಂಕಟೇಶ್ ಮೆಳವರಿಗೆ, ಅನೀಸ್ ಖಾನ್, ವಿಲ್ಸನ್ ಗೊನ್ಸಾಲ್ವಿಸ್, ಅಶೋಕ್ ಬೇಳೂರು, ಸೋಮಶೇಖರ್ ಲ್ಯಾವಿಗೆರೆ, ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next