ಸಾಗರ: ಇಲ್ಲಿನ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಶೋಕ ಬರದವಳ್ಳಿ ಚುನಾಯಿತರಾಗಿದ್ದಾರೆ. ತಾಪಂನಲ್ಲಿ 15 ಜನ ಸದಸ್ಯರಿದ್ದಾರೆ. 6 ಬಿಜೆಪಿ, 3 ಪಕ್ಷೇತರ, 2 ಜೆಡಿಎಸ್ ಹಾಗೂ 4 ಕಾಂಗ್ರೆಸ್ ಸದಸ್ಯ ಬಲವುಳ್ಳ ತಾಪಂನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅಶೋಕ ಬರದವಳ್ಳಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸವಿತಾ ನಟರಾಜ್ ಸ್ಪರ್ಧೆ ಮಾಡಿದ್ದರು.
ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಅಶೋಕ ಬರದವಳ್ಳಿ ಪರವಾಗಿ ಎಂಟು ಮತಗಳು ಬಂದರೆ ಸವಿತಾ ಅವರಿಗೆ ಆರು ಮತ ಲಭಿಸಿದೆ. ಅಶೋಕ್ ಅವರಿಗೆ ನಾಲ್ವರು ಕಾಂಗ್ರೆಸ್, ಓರ್ವ ಬಿಜೆಪಿ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲ ನೀಡಿದರೆ ಸವಿತಾ ನಟರಾಜ್ ಪರವಾಗಿ ನಾಲ್ವರು ಬಿಜೆಪಿ, ಓರ್ವ ಪಕ್ಷೇತರ ಹಾಗೂ ಓರ್ವ ಜೆಡಿಎಸ್ ಸದಸ್ಯರು ಬೆಂಬಲ ನೀಡಿದರು.
ಚುನಾವಣೆಯಲ್ಲಿ ಬಿಜೆಪಿ ತನ್ನ 6 ಜನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದರೂ ಕಲಸೆ ಚಂದ್ರಪ್ಪ ಮೈತ್ರಿ ಅಭ್ಯರ್ಥಿ ಪರವಾಗಿ ಕೈ ಎತ್ತಿ ವಿಪ್ ಉಲ್ಲಂಘನೆ ಮಾಡಿದರು. ಇನ್ನು ಜೆಡಿಎಸ್‌ನ ಸದಸ್ಯ ಅಕ್ಕಿ ಪರಶುರಾಮ್ ತಮ್ಮದೇ ಪಕ್ಷದ ಅಭ್ಯರ್ಥಿ ಅಶೋಕ್ ವಿರುದ್ಧ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಬಿಜೆಪಿಯಿಂದ ಗೆದ್ದಿದ್ದರೂ ಬದಲಾದ ರಾಜಕೀಯದಲ್ಲಿ ಸದ್ಯ ಗ್ರಾಮಾಂತರ ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಸುವರ್ಣ ಟೀಕಪ್ಪ ಬಿಜೆಪಿ ನೀಡಿದ ವಿಪ್ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದರು. ಚುನಾಣಾಧಿಕಾರಿಯಾಗಿ ಸಹಾಯಕ ಆಯುಕ್ತ ದರ್ಶನ್ ಎಚ್.ವಿ. ಕಾರ್ಯನಿರ್ವಹಿಸಿದರು.
ನೂತನ ಉಪಾಧ್ಯಕ್ಷ ಅಶೋಕ ಅವರನ್ನು ಅಭಿನಂದಿಸಿ ಮಾತನಾಡಿದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ಅನೇಕ ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಎಲ್ಲರೂ ಒಟ್ಟಾಗಿ ಇಂತಹ ಸಂದರ್ಭದಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ನೂತನ ಉಪಾಧ್ಯಕ್ಷ ಅಶೋಕ ಮಾತನಾಡಿ, ನಾನು ಜೆಡಿಎಸ್‌ನಲ್ಲಿದ್ದರೂ ನನ್ನ ಪಕ್ಷ ನನ್ನ ಕೈ ಹಿಡಿಯಲಿಲ್ಲ. ನಮ್ಮದೇ ಪಕ್ಷದ ಸದಸ್ಯರೊಬ್ಬರು ಬಿಜೆಪಿ ಪರ ಮತ ಚಲಾಯಿಸಿದ್ದರಿಂದ ನನಗೆ ಕಣ್ಣಲ್ಲಿ ನೀರು ಬಂತು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ನನ್ನ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷ ಕೈ ಹಿಡಿದಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಜತೆ ಸೇರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಸದಸ್ಯರಾದ ಜ್ಯೋತಿ, ಸವಿತಾ ದೇವರಾಜ್, ಆನಂದಿ ಲಿಂಗರಾಜ, ಹೇಮ ರಾಜಪ್ಪ, ಪ್ರಭಾವತಿ ಚಂದ್ರಕಾಂತ್ ಹಾಜರಿದ್ದರು.