Advertisement

ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

05:09 PM Mar 08, 2020 | Naveen |

ಸಾಗರ: ಮಾ. 10ಕ್ಕೆ ತಾಲೂಕು ಪಂಚಾಯತ್‌ ಅಧ್ಯಕ್ಷರ ಮೇಲೆ ಸಲ್ಲಿಕೆಯಾಗಿರುವ ಅವಿಶ್ವಾಸದ ಗೊತ್ತುವಳಿಯನ್ನು ಮಂಡಿಸುವ ಸಭೆ ಕರೆಯಲಾಗಿದೆ. ಮಲ್ಲಿಕಾರ್ಜುನ ಹಕ್ರೆ ಅವರನ್ನು ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ಎಲ್ಲರೂ ಸಂಬಂಧಪಟ್ಟ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು ಎಂದು ಜೆಡಿಎಸ್‌ ಪ್ರಮುಖ, ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ ಹೇಳಿದರು.

Advertisement

ನಗರದ ಬ್ರಾಸಂ ಸಭಾಭವನದಲ್ಲಿ ಶನಿವಾರ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಅವಿಶ್ವಾಸ ಮಂಡಿಸಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕರೆದಿದ್ದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ರಾಜ್ಯದಲ್ಲಿಯೇ ಸಾಗರ ತಾಪಂ ನಂ.1 ಸ್ಥಾನಕ್ಕೆ ಬರಲು ಹಕ್ರೆ ಅವರು ಮಾಡಿದ ಜನಪರ ಕೆಲಸ ಕಾರಣವಾಗಿದೆ. ಕಳೆದ ಒಂದು ವರ್ಷದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎನ್ನುವ ಪಿತೂರಿ ನಡೆಯುತ್ತಿದೆ. ಇದಕ್ಕೆ ಸ್ವತಃ ಕಾಂಗ್ರೆಸ್‌ ಪಕ್ಷದ ಸದಸ್ಯರು ಮತ್ತು ಕೆಲವು ಮುಖಂಡರು ಬೆಂಬಲ ನೀಡುತ್ತಿದ್ದಾರೆ. 11 ಜನ ಸದಸ್ಯರು ಅವಿಶ್ವಾಸಕ್ಕೆ ಸಹಿ ಹಾಕಿದ್ದಾರೆ. ಕಾಗೋಡು ತಿಮ್ಮಪ್ಪ ಅವರ ಸೂಚನೆಯಂತೆ ಮಾ. 15ಕ್ಕೆ ಹಕ್ರೆ ಅವರು ರಾಜಿನಾಮೆ ನೀಡುತ್ತೇನೆ ಎಂದು ಲಿಖೀತವಾಗಿ ಬರೆದು ಕೊಟ್ಟಿದ್ದರೂ ಕೆಲವರು ಇದನ್ನು ಪರಿಗಣಿಸಲಿಲ್ಲ ಎಂದರು.

ಕಾಗೋಡು ಎದುರು ಅವಿಶ್ವಾಸವನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿದವರು ನಂತರ ಉಲ್ಟಾ ಹೊಡೆದಿದ್ದಾರೆ. ಮಾ. 7ಕ್ಕೆ ಹಕ್ರೆ ರಾಜಿನಾಮೆ ನೀಡುವಂತೆ ಕೇಳಿದ್ದರು. ಅದಕ್ಕೂ ಹಕ್ರೆ ಅವರು ಕಾಗೋಡು ಸಲಹೆಯಂತೆ ಒಪ್ಪಿಕೊಂಡಿದ್ದರು. ಆದರೆ ಕೆಲವರು ಹಕ್ರೆ ಅವರನ್ನು ಪದಚ್ಯುತಗೊಳಿಸುವ ಮೂಲಕ ತೇಜೋವಧೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ ಎಂದರು.

ಜಿಪಂ ಸದಸ್ಯೆ ಹಾಗೂ ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ ಮಾತನಾಡಿ, ಹಕ್ರೆ ಅವರ ಜನಪರ ಕಾಳಜಿ ಪ್ರಶ್ನಾತೀತವಾಗಿದೆ. ಕಾಗೋಡು ಸಚಿವರಾಗಿದ್ದ ಸಂದರ್ಭದಲ್ಲಿ ಹಕ್ರೆ ಅವರನ್ನು ರಾಜಕೀಯವಾಗಿ ಬೆಳೆಸುವಲ್ಲಿ ಹೆಚ್ಚು ಪ್ರಯತ್ನ ನಡೆಸಿದ್ದರು. ತ್ತೈಮಾಸಿಕ ಸಭೆಗಳಲ್ಲಿ ಸಹ ಹಕ್ರೆ ಅವರಿಗೆ ಸಮಸ್ಯೆ ಕುರಿತು ಮಾತನಾಡುವ ಅವಕಾಶವನ್ನು ನೀಡುತ್ತಿದ್ದರು.

ತಾಲೂಕಿನಲ್ಲಿ ಅಧಿಕಾರಿ ವರ್ಗವನ್ನು ನಿಯಂತ್ರಣದಲ್ಲಿ ಇರಿಸುವ ಕೆಲಸ ಹಕ್ರೆ ಅವರ ಜನಸ್ನೇಹಿ ಆಡಳಿತದಿಂದ ನಿರ್ಮಾಣವಾಗಿತ್ತು. ಈಗ ಅಧಿಕಾರಿಗಳು ಯಾರ ಮಾತನ್ನು ಕೇಳದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

Advertisement

ಕೆಲವರು ಅಧಿ ಕಾರದ ಆಸೆಯಿಂದಲೋ, ಬೇರೆಬೇರೆ ಉದ್ದೇಶದಿಂದಲೋ ಹಕ್ರೆ ಅವರನ್ನು ತಾಪಂ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಅವಿಶ್ವಾಸವನ್ನು ಮಂಡಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ. ಅವಿಶ್ವಾಸಕ್ಕೆ ಕಾಂಗ್ರೆಸ್‌ನ ಕೆಲವು ಸದಸ್ಯರು ಸಹ ಸಹಿ ಹಾಕಿದ್ದಾರೆ. ಹಕ್ರೆ ಅವರು ಐದು ವರ್ಷಗಳವರೆಗೂ ತಾಪಂ ಅಧ್ಯಕ್ಷರಾಗಿ ಮುಂದುವರಿದಿದ್ದರೆ ತಾಪಂಗೆ ಇನ್ನಷ್ಟು ಉತ್ತಮ ಹೆಸರು ಬರುತಿತ್ತು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ, ಈ ಸಭೆಯ ನಂತರ ಸಂಖ್ಯಾಶಾಸ್ತ್ರವನ್ನು ಬದಲಾಯಿಸುವ ಭ್ರಮೆಯಲ್ಲಿ ನಾವಿಲ್ಲ. ಆದರೆ ಕೇವಲ ಪ್ರಜಾತಂತ್ರಿಕ ಅವಕಾಶಗಳನ್ನು ಬಳಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡುವವರಿಗೆ ಕೆಳಗಿಳಿಸಲು ಇರುವ ಕಾರಣಗಳನ್ನು ಹೇಳಿ ಎಂದು ಒತ್ತಾಯಿಸಬೇಕಾಗಿದೆ. ತಾಲೂಕಿನ ಕಾರ್ಯಾಂಗದ ಪ್ರಮುಖರಾಗಿ ದತ್ತ ಅಧಿಕಾರವನ್ನು ಸಹೃದಯತೆಯಿಂದ ಬಳಸಿದ ಹಕ್ರೆ ಅವರನ್ನು ಕೆಳಗಿಳಿಸುವವರು
ಹಕ್ರೆಯವರಿಗೆ ಪರ್ಯಾಯ ಯಾರು ಎಂದು ಖಚಿತಪಡಿಸಿಕೊಂಡು ಹೆಜ್ಜೆ ಇರಿಸಬೇಕಿತ್ತು ಎಂದು ಕಾಂಗ್ರೆಸ್‌ ಭಿನ್ನಮತೀಯರನ್ನು ಚುಚ್ಚಿದರು.

ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಲ್‌.ಟಿ. ತಿಮ್ಮಪ್ಪ, ಕಲ್ಮನೆ ಗ್ರಾಪಂ ಅಧ್ಯಕ್ಷ ನರಿ ಮಂಜಪ್ಪ, ಪ್ರಮುಖರಾದ ಕುಂಟಗೋಡು ಸೀತಾರಾಮ್‌, ಪರಮೇಶ್ವರ ದೂಗೂರು, ಗಣಪತಿ ಹೆನಗೆರೆ, ಜಿ.ಕೆ. ಭೈರಪ್ಪ, ಸುಧಾಕರ ಕುಗ್ವೆ, ಎಡಜಿಗಳೇಮನೆ ಗ್ರಾಪಂ ಅಧ್ಯಕ್ಷ ಎಂ.ಡಿ. ರಾಮಚಂದ್ರ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ದೇವರಾಜ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next