ಸಾಗರ: ಎದುರಿನಿಂದ ನೋಡಿದರೆ ಸಾಕಷ್ಟು ಸುಸಜ್ಜಿತವಾದ ಕಟ್ಟಡ. ಒಳಗೆ ಸೋರುವ ನೀರಿಗೆ ಬಕೆಟ್ ಇಟ್ಟ ದೃಶ್ಯ. ಕಟ್ಟಡದೊಳಗೆ ನುಗ್ಗಿ ಹಿಂದಿನ ಬಾಗಿಲಿಗೆ ಹೋದರೆ ಆಧುನಿಕ ಕಟ್ಟಡ ಶೈಲಿಯ ಸಾಮರ್ಥ್ಯ ಸೌಧ ಕಟ್ಟಡವನ್ನು ನೋಡಬಹುದಾದ ಸಾಗರದ ತಾಪಂ ಕಟ್ಟಡ ಜನಸಾಮಾನ್ಯರಿಗೆ ಚಕ್ರವ್ಯೂಹದಂತೆ ಕಾಣಿಸಿದರೆ ಅಚ್ಚರಿಯಿಲ್ಲ!
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಪಂ ಸದಸ್ಯ ಭೀಮನೇರಿ ಶಿವಪ್ಪ ಸೇರಿದಂತೆ ಅನೇಕರು ರಾಜಕೀಯ ಪ್ರವೇಶಿಸಿ ಜನಪ್ರತಿನಿಧಿಯಾಗಿ ಕಾರ್ಯ ಮಾಡಿದ ತಾಪಂ ಕಟ್ಟಡ ಹಲವು ಬಾರಿ ದುರಸ್ತಿಗೊಳಗಾಗಿದೆ. ಹೆಚ್ಚುವರಿ ಕೊಠಡಿಗಳ ಸೇರ್ಪಡೆಯಾಗಿದೆ. ಹಲವು ಸಂದರ್ಭಗಳಲ್ಲಿ ಸುಣ್ಣಬಣ್ಣ ಕಂಡಿದೆ. ಹೊಸ ಕಟ್ಟಡ, ಹಳೆ ನಿರ್ಮಾಣಗಳ ಮಧ್ಯೆ ಸಂಪೂರ್ಣ ತಾಪಂ ಕಟ್ಟಡವನ್ನು ಕೆಡವಿ ಹೊಸ ಕಟ್ಟಲು ಸಮಯ ಬಂದಿಲ್ಲ.
ಆದರೆ ಆಡಳಿತವನ್ನಾದರೂ ಸರಿಪಡಿಸಬಹುದು. ಕಟ್ಟಡವನ್ನು ದುರಸ್ತಿ ಮಾಡುವ ಹಂತ ದಾಟಿದೆ ಎಂಬುದು ತಾಪಂ ಅಧಿಕಾರಿಗಳ ಅಭಿಮತ. ತಾಪಂ ಕಾರ್ಯ ನಿರ್ವಹಣಾಧಿಕಾರಿಯ ಕೊಠಡಿಯ ಪಕ್ಕದಲ್ಲಿಯೇ ಒಂದು ವಿಐಪಿ ಕೋಣೆ ಇದೆ. ಹೊರಗಿನಿಂದ ಗಾಜಿನ ಬಾಗಿಲು, ಆಕರ್ಷಕ ಕರ್ಟನ್ ಇತ್ಯಾದಿಗಳಿಂದ ಶೃಂಗಾರ ಮಾಡಲಾಗಿದೆ. ಆದರೆ ಒಳಹೊಕ್ಕ ಅತಿಥಿ ಗಾಬರಿಯಿಂದ ಹೊರಬಂದರೆ ಅಚ್ಚರಿಪಡಬೇಕಿಲ್ಲ!
ವಿಐಪಿ ಕೊಠಡಿ ಪ್ರವೇಶಿಸುವವರಿಗೆ ಒಳಗೆ ಮೂರು ಬಕೆಟ್‌ಗಳು ಕಣ್ಣಿಗೆ ಬೀಳುತ್ತವೆ. ಸೋರುವ ಛಾವಣಿಯಿಂದ ಸುರಿದ ನೀರು, ಪಾಚಿ ವಿಐಪಿ ರೂಂನ್ನು ಶೌಚಾಲಯದ ನೆನಪು ಬರುವಂತೆ ಮಾಡುತ್ತದೆ. ಅಧಿಕಾರಿಗಳು ವಿಶ್ರಾಂತಿ ಪಡೆಯುವ ಸಲುವಾಗಿ ಸಜ್ಜುಗೊಳಿಸಲಾದ ಈ ಕೋಣೆ ಅವ್ಯವಸ್ಥೆಯ ಆಗರವಾಗಿದೆ. ವಿಐಪಿ ಕೋಣೆ ಹೀನಾಯ ಸ್ಥಿತಿಯಲ್ಲಿರುವ ಸಂಬಂಧ ಜನಪ್ರತಿನಿಧಿಗಳು ಬಹಳಷ್ಟು ಸಲ ಆಕ್ಷೇಪ ಮಾಡಿದ್ದಾರೆ. ಪರಿಸ್ಥಿತಿ ಮಾತ್ರ ಬದಲಾಗಿಲ್ಲ.
ತಾಪಂ ಕಚೇರಿಯ ಆವರಣದಲ್ಲಿ ಸಾಗರ ಹಾಗೂ ಸೊರಬ ಕ್ಷೇತ್ರದ ಶಾಸಕರ ಕಚೇರಿ ಸಹ ಇದೆ. ತಾಲೂಕಿನ ಆಡಳಿತದ ಶಕ್ತಿ ಕೇಂದ್ರವಾದ ತಾಪಂ ಕಚೇರಿಯ ಕೆಲವು ಕೊಠಡಿಗಳು ಸೋರುತ್ತಿದ್ದು, ಸಂಬಂಧಪಟ್ಟವರು ನಿಗಾ ವಹಿಸಬೇಕಾಗಿದೆ. ಅಂದಾಜು 60-70 ವರ್ಷಗಳ ಕಟ್ಟಡ ಇದಾಗಿದೆ. ಬಲವಾದ ಗೋಡೆ, ಸಾಕಷ್ಟು ಸ್ಥಳಾವಕಾಶ ಇದ್ದರೂ ಒಟ್ಟೂ ಕಟ್ಟಡದ ಸದುಪಯೋಗಕ್ಕೆ ಸಣ್ಣಪುಟ್ಟ ತೊಂದರೆಗಳಿವೆ.
ನೂತನ ಕಟ್ಟಡ ನಿರ್ಮಾಣ ಸಂಬಂಧದ ಕಾಗದ ಪತ್ರಗಳನ್ನು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಳಿಸಿಕೊಡಲಾಗಿದೆ. ಮೂರುನಾಲ್ಕು ವರ್ಷಗಳಿಂದ ಈ ಬಗ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಬೆನ್ನು ಹತ್ತಿದ್ದಾರೆ. ಈ ಸಂಬಂಧ 7.8 ಕೋಟಿ ರೂ. ವೆಚ್ಚದ ಕಟ್ಟಡದ ನಿರ್ಮಾಣದ ಅನುಮತಿ ದೊರಕಿದೆ. ಹಣ ಬಿಡುಗಡೆ ಸಂಬಂಧ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಹಲವು ಸಲ ಸಚಿವರನ್ನೂ ಭೇಟಿ ಮಾಡಿದ್ದೇನೆ. ನೂತನ ಕಟ್ಟಡ ನಿರ್ಮಾಣ ಆಗುತ್ತದೆ ಎಂದು ತಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಕ್ರೆ ವಿಶ್ವಾಸ ವ್ಯಕ್ತಪಡಿಸಿದರು.
ದುರಸ್ತಿ ಕಾರ್ಯಕ್ಕಿಂತಲೂ ಹೊಸ ಕಟ್ಟಡ ನಿರ್ಮಾಣ ಸೂಕ್ತ ಎಂಬ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಣ ಬಿಡುಗಡೆಯಾದ ತಕ್ಷಣ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ತಾಪಂನ ಇಒ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.