Advertisement

ಪ್ರತಿಭೆಗೆ ಪ್ರೋತ್ಸಾಹ ಸಿಗಲಿ

01:10 PM Jul 21, 2019 | Naveen |

ಸಾಗರ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ವಾತಾವರಣ ಬೇಕು ಎಂದು 5ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷೆ ಗಾರ್ಗಿ ಸೃಷ್ಟೀಂದ್ರ ಬಂದಗದ್ದೆ ಹೇಳಿದರು.

Advertisement

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜು. 25ರಂದು ಬ್ರಾಸಂ ಸಭಾಭವನದಲ್ಲಿ ನಡೆಯಲಿರುವ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗಾರ್ಗಿ ಅವರ ಸ್ವಗ್ರಾಮ ಬಂದಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಪೋಷಕರೂ ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣ ಕಲಿಸಲು ಆದ್ಯತೆ ನೀಡಬೇಕು. ಶಿಕ್ಷಣ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಅದೇ ಶಿಕ್ಷಣ ನಮ್ಮ ಅಭಿರುಚಿಯನ್ನು ಬೆಳೆಸುತ್ತದೆ. ನನಗೆ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದರು.

ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಮಾತನಾಡಿ, ಗಾರ್ಗಿ ಅವರ ಕುಟುಂಬ ಉದಾತ್ತ ಸಂಸ್ಕೃತಿಯನ್ನು ಹೊಂದಿದೆ. ಸಮಾಜವಾದಿ ಚಿಂತಕರಾಗಿ ಹೆಸರು ಮಾಡಿದ್ದ ಬಂದಗದ್ದೆ ರಮೇಶ್‌ ಈ ಮನೆತನದ ಆದರ್ಶದ ಕುರುಹನ್ನು ಬಿಟ್ಟುಹೋಗಿದ್ದಾರೆ. ಇಂಥ ಕುಟುಂಬದಲ್ಲಿ ಗಾರ್ಗಿ ಬೆಳೆದಿದ್ದಾಳೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಹೆಚ್ಚಿನ ಸಾಧನೆ ಮಾಡಿ ಮುಂದಿನ ತಲೆಮಾರಿಗೆ ಆದರ್ಶಪ್ರಾಯರಾಗಲಿ ಎಂದು ಶುಭ ಕೋರಿದರು.

ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಬಹಳಷ್ಟು ಮಕ್ಕಳು ಅವಕಾಶ ಸಿಗುವುದಿಲ್ಲ ಎಂದು ದೂರುತ್ತಾರೆ. ಪರಿಷತ್ತು ಈ ಕಾರಣಕ್ಕಾಗಿ ಮಕ್ಕಳಿಗಾಗಿ ಇಂಥ ಸಮ್ಮೇಳನ ನಡೆಸುತ್ತಿದೆ. ಗಾರ್ಗಿ ಅವರು ಮಧ್ಯಮ ವರ್ಗದ ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಂಸ್ಕೃತಿ ವಿಚಾರ ಹೆಚ್ಚು ಗೊತ್ತಿರುತ್ತದೆ. ಆಧುನಿಕತೆ ಬಂದಂತೆ ಮಕ್ಕಳು ಸಾಮಾಜಿಕ ಪ್ರಜ್ಞೆ ಮತ್ತು ಕರ್ತವ್ಯ ಮರೆಯುತ್ತಿದ್ದಾರೆ. ಗಾರ್ಗಿ ಅವರಿಗೆ ಹೊಸದನ್ನು ತಿಳಿದುಕೊಳ್ಳುವ ಕುತೂಹಲದ ಮನಸ್ಸಿದೆ. ಅವರ ಅಭಿರುಚಿಯನ್ನು ಪ್ರೋತ್ಸಾಹಿಸಬೇಕು ಎಂದರು.

ನಿರ್ಮಲಾ ಬಾಲಿಕಾ ಪ್ರೌಢಶಾಲೆ ಪ್ರಬಾರ ಮುಖ್ಯ ಶಿಕ್ಷಕ ಶಂಕರ್‌ ಸಿ.ಎ. ಮಾತನಾಡಿ, ಗಾರ್ಗಿ ಅವರ ಪ್ರತಿಭೆ ನಮಗೆ ಪರಿಚಯವಿದೆ. ಶಾಲಾ ಸ್ಪರ್ಧೆಗಳಲ್ಲಿ ಬಹುಮಾನ ತಂದುಕೊಡುವ ಮೂಲಕ ಶಾಲೆಗೆ ಕೀರ್ತಿ, ಗೌರವ ತಂದುಕೊಟ್ಟಿದ್ದಾಳೆ. ತಾಲೂಕಿನಲ್ಲೇ ಮೊದಲ ಸ್ಥಾನ ಎಂದು ಗುರುತಿಸುವಂಥ ಪ್ರತಿಭೆಯನ್ನು ಪರಿಷತ್ತು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

Advertisement

ಪರಿಷತ್ತಿನ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷತೆಗೆ ಪಾರದರ್ಶಕವಾಗಿ ಸಂದರ್ಶನ ಮಾಡಿ ಗಾರ್ಗಿ ಅವರನ್ನು ಆಯ್ಕೆ ಮಾಡಿದ್ದೇವೆ. ದೊಡ್ಡ ಸಮ್ಮೇಳನದಲ್ಲಿ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಮಕ್ಕಳಿಗಾಗಿಯೇ ಸಮ್ಮೇಳನ ಮಾಡುತ್ತಿದ್ದೇವೆ. ಸಮ್ಮೇಳನ ಮಕ್ಕಳ ಸಾಹಿತ್ಯ ಸ್ಪರ್ಶಕ್ಕೆ ಸ್ಫೂರ್ತಿ ತುಂಬುತ್ತದೆ. ಕೆಳದಿ ಅರಸರು ಆಳಿದ ಈ ಪುಣ್ಯ ನೆಲದಲ್ಲಿ ಗಾರ್ಗಿಯ ಪ್ರತಿಭೆ ಅನಾವರಣಗೊಂಡಿದೆ. ಪರಿಷತ್ತು ನಿಜವಾದ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಿದೆ ಎಂಬ ಸಂತೋಷವಿದೆ ಎಂದರು.

ಗ್ರಾಮಸ್ಥರ ಪರವಾಗಿ ಕೃಷಿಕ ರಾಧಾಕೃಷ್ಣ ಬಂದಗದ್ದೆ, ಉದ್ಯಮಿ ಉಮೇಶ್‌ ಬಂದಗದ್ದೆ ಮಾತನಾಡಿದರು. ಗಾರ್ಗಿ ಅವರ ತಂದೆ ಶೈಲೇಂದ್ರ ಬಂದಗದ್ದೆ, ತಾಯಿ ಸರಸ್ವತಿ ಹೆಗಡೆ, ಪರಿಷತ್ತಿನ ನಿರ್ದೇಶಕರಾದ ಪರಶುರಾಮಪ್ಪ, ಶಿವಾನಂದ ಮಾಸೂರು, ಗಣಪತಿ ಶಿರಳಗಿ, ಹೆಲ್ತ್ ಹನುಮಂತಪ್ಪ, ವಸಂತ ಶೇಟ್, ಜಿ.ಆರ್‌. ಶಿವಶಂಕರ್‌, ಹಿರಿಯ ಪತ್ರಕರ್ತ ಎಚ್.ವಿ. ರಾಮಚಂದ್ರ ರಾವ್‌, ಮೃತ್ಯುಂಜಯ ಚಿಲುಮೆಮಠ, ಗ್ರಾಮದ ನವೀನಕುಮಾರ್‌, ವಿಜಯಶ್ರೀ, ಸಂಧ್ಯಾ, ಅನುರಾಧಾ, ಕಾಂತಿಮತಿ, ಶ್ರೀಮತಿ, ಸಹನಾ, ನಾಗರತ್ನ ಮತ್ತಿತರರು ಇದ್ದರು. ಪರಿಷತ್ತಿನ ಕಾರ್ಯದರ್ಶಿ ಮೇಜರ್‌ ಎಂ. ನಾಗರಾಜ್‌ ಸ್ವಾಗತಿಸಿದರು. ನಿರ್ದೇಶಕಿ ಗಂಗಮ್ಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next