Advertisement

ಸಾಗರ: ಸಸಿ ನೆಟ್ಟು ಟಿ. ಮೋಹನದಾಸ ಪೈ ಅವರಿಗೆ ನುಡಿ ನಮನ

03:12 PM Aug 03, 2022 | Vishnudas Patil |

ಸಾಗರ: ಆಧುನಿಕ ಮಣಿಪಾಲದ ವಾಸ್ತುಶಿಲ್ಪಿ ಎಂದೇ ಖ್ಯಾತರಾಗಿದ್ದ ಟಿ. ಮೋಹನದಾಸ ಪೈ ಅವರು ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದು ಪ್ರೆಸ್ ಟ್ರಸ್ಟ್ ಆಫ್ ಸಾಗರದ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಅಣಲೆಕೊಪ್ಪದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಟಿ. ಮೋಹನದಾಸ್ ಪೈ ಅವರ ಸ್ಮರಣಾರ್ಥ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದ ಸಂದರ್ಭದಲ್ಲಿ ಸಸಿ ನೆಟ್ಟು ಅವರು ಮಾತನಾಡಿ, ಉದಯವಾಣಿ ದಿನಪತ್ರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಸ್ವಾಭಿಮಾನದ ಸಂಕೇತವಾಗಿ ಅವರು ಬೆಳೆಸಿದರು. ಅಲ್ಲಿನ ಪ್ರತಿಮನೆಯಲ್ಲೂ ಪತ್ರಿಕೆಯನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದಾರೆ. ಮೊದಲು ತಾಯಿಬೇರನ್ನು ಗಟ್ಟಿಗೊಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆರಂಭದಲ್ಲಿ ಅವರು ಬೇರೆಲ್ಲೂ ತಮ್ಮ ಪತ್ರಿಕೆಯ ಆವೃತ್ತಿಯನ್ನು ಆರಂಭಿಸಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಎಲ್ಲೇ ಇರಲಿ ಉದಯವಾಣಿಯನ್ನು ಪ್ರೀತಿಯಿಂದ ಕೊಂಡು ಓದಿ ಸಂಸ್ಥೆಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಪತ್ರಿಕೆ ಮೂಲಕ ಮಣಿಪಾಲನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಆಸ್ಪತ್ರೆಯ ಮೂಲಕ ಮಣಿಪಾಲ ಹೆಸರು ಸಂಪಾದಿಸಿದಂತೆ ಉದಯವಾಣಿ ಪತ್ರಿಕೆ ಮೂಲಕವೂ ಉತ್ತಮ ಹೆಸರು ಗಳಿಸಿದೆ. ಪ್ರತಿ ಗ್ರಾಮಕ್ಕೂ ಪತ್ರಿಕೆ ತಲುಪಿಸಿ ಓದುಗರ ಮನ ಗೆದ್ದಿದ್ದಾರೆ. ಶ್ರದ್ಧಾಂಜಲಿ ಸುದ್ದಿ ಹಾಗೂ ಯಕ್ಷಗಾನ ಪ್ರಚಾರದ ಮೂಲಕವೂ ಪತ್ರಿಕೆ ಜನಪ್ರಿಯವಾಗಿದೆ. ಅಲ್ಲಿನವರಿಗೆ ಬೆಳಗಿನ ಕಾಫಿ ಜೊತೆ ಉದಯವಾಣಿ ಬೇಕು ಎಂಬ ಮನಸ್ಥಿತಿಯನ್ನು ರೂಢಿಸಿದ ಹೆಗ್ಗಳಿಕೆ ಪೈ ಅವರದ್ದಾಗಿತ್ತು ಎಂದರು.
ಹಿರಿಯ ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಡಾ. ಟಿಎಂಎ ಪೈ ಅವರ ಹಿರಿಯ ಪುತ್ರರಾಗಿದ್ದ ಮೋಹನದಾಸ್ ಪೈ ಟಿಎಂಎ ಪೈ ಫೌಂಡೇಶನ್ ಮತ್ತು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಜೊತೆಗೆ ಎಂಜಿಎಂ ಕಾಲೇಜು ಟ್ರಸ್ಟ್ ಮತ್ತು ಐಸಿಡಿಎಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದರು. ಮಣಿಪಾಲ ಮುದ್ರಣಾಲಯದ ಆಧುನೀಕರಣಕ್ಕೆ ಮಹತ್ತರ ಕೊಡುಗೆ ನೀಡಿದ್ದಲ್ಲದೆ, ಅದನ್ನು ರಾಷ್ಟ್ರೀಯವಾಗಿ ಮನ್ನಣೆ ಪಡೆದ ಮುದ್ರಣ ಸಂಸ್ಥೆಯಾಗಿ ಕಟ್ಟಿದ್ದರು ಎಂದರು.

ಗ್ರಾಮೀಣ ಪ್ರದೇಶದಲ್ಲೂ ಒಂದು ಪತ್ರಿಕೆಯನ್ನು ಕಟ್ಟಿ ಯಶಸ್ಸು ಗಳಿಸಬಹುದು ಎಂಬುದನ್ನು ತೋರಿಸಿದ ಸಾಹಸಿ ಅವರು. ಕಲೆ, ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದ ಅವರು, ಪತ್ರಿಕೆಯಲ್ಲಿ ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಬೇರೆ ಪತ್ರಿಕೆಗಳು ದರ ಸಮರ ಸಾರಿದಾಗಲೂ ತಮ್ಮ ನಿಶ್ಚಲ ನಿಲುವಿನಿಂದ ಓದುಗರ ಮನ ಗೆದ್ದಿದ್ದರು ಎಂದರು.

ಸಂಘದ ಗಣಪತಿ ಶಿರಳಗಿ, ರಾಜೇಶ್ ಭಡ್ತಿ, ರಮೇಶ್ ಎನ್., ಶೈಲೇಂದ್ರ, ಧರ್ಮರಾಜ್, ಉದಯವಾಣಿ ಪತ್ರಿಕಾ ವಿತರಕ ಕೆ.ಎನ್.ರಾಘವೇಂದ್ರ, ಸಾಮಾಜಿಕ ಕಾರ್ಯಕರ್ತ ಸುಭಾಷ್ ಕೌತಳ್ಳಿ, ಸುರೇಶ್ ಆಚಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next