Advertisement

ಶಾಂತಿಯುತ ಬಂದ್‌ಗೆ ತೀರ್ಮಾನ

12:49 PM Jul 03, 2019 | Naveen |

ಸಾಗರ: ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಕರೆ ನೀಡಿರುವ ಜು. 10ರ ಶಿವಮೊಗ್ಗ ಜಿಲ್ಲೆ ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಸಾಗರದ ಎಲ್ಲ ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಬಂದ್‌ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ, ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಂದ್‌ ಆಚರಿಸಲು ಒಮ್ಮತದ ಅಭಿಪ್ರಾಯ ಕೇಳಿಬಂದಿತು.

Advertisement

ಶರಾವತಿ ನದಿಯನ್ನು ಉಳಿಸಿಕೊಳ್ಳಬೇಕು ಎನ್ನುವ ವಿಷಯ ಕೇಂದ್ರಿತವಾಗಿರುವ ಬಂದ್‌ ಆ ನಿಟ್ಟಿನಲ್ಲಿ ಆಳುವ ಸರ್ಕಾರದ ಮೇಲೆ ಒತ್ತಡ ತರುವ ದೃಷ್ಟಿಯಿಂದ ಸಮಗ್ರವಾದ ಹೋರಾಟವಾಗಬೇಕು. ಇದಕ್ಕೆ ಸಾಗರದ ಗ್ರಾಮಾಂತರ ಪ್ರದೇಶಗಳ ಸಂಘಟನೆಗಳ ಬೆಂಬಲವನ್ನೂ ಪಡೆಯುವ ಸಲಹೆ ಕೇಳಿಬಂದಿತು. ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ನಡೆದಿರುವ ಜಾಗೃತಿ ಸಭೆಗಳಿಗೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಹಳ್ಳಿಗರನ್ನು ಬಂದ್‌ನಲ್ಲಿ ಭಾಗವಹಿಸುವಂತೆ ಮಾಡಬೇಕು. ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚುವುದಲ್ಲದೆ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ಒಕ್ಕೂಟದ ಪ್ರಮುಖ ಹರ್ಷಕುಮಾರ್‌ ಕುಗ್ವೆ ಮಾತನಾಡಿ, ಇದು ಶಿವಮೊಗ್ಗ ಜಿಲ್ಲೆ ಬಂದ್‌ ಆದರೂ ಇದರ ಶಕ್ತಿ ಕೇಂದ್ರ ಸಾಗರವೇ ಆಗಿದೆ. ಈ ದೃಷ್ಟಿಯಿಂದ ಪ್ರತಿಭಟನೆಯನ್ನು ಇಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿಸಬೇಕಿದೆ. ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯುವ ಬಂದ್‌ನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು. ಪಟ್ಟಣದ ಗಾಂಧಿ ಮೈದಾನದಿಂದ ಆರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆ ಪುನಃ ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಭೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಮೆರವಣಿಗೆಯಲ್ಲಿ ಸಾಗರದ ಎಲ್ಲ ಸಂಘಟನೆಗಳು ತಮ್ಮ ಸಂಘಟನೆಯ ಬ್ಯಾನರ್‌ನೊಂದಿಗೆ ಭಾಗವಹಿಸಬೇಕು. ಒಕ್ಕೂಟ ನಿಗದಿಪಡಿಸಿದ ಘೋಷಣೆಗಳನ್ನು ಕೂಗಬೇಕು ಹಾಗೂ ಘೋಷಣಾ ಫಲಕವನ್ನು ಮಾತ್ರ ಪ್ರದರ್ಶಿಸಬೇಕು. ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಕಾಲೇಜು ಮುಖ್ಯಸ್ಥರ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

ಒಕ್ಕೂಟದ ಗೌರವಾಧ್ಯಕ್ಷ ನಾ.ಡಿಸೋಜ ಮಾತನಾಡಿ, ನಮ್ಮ ಶರಾವತಿ ನದಿಯನ್ನು ನಾವೇ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಜನಜಾಗೃತಿಯಾಗಿದೆ. ಬಂದ್‌ ಮೂಲಕ ಇದು ಇನ್ನಷ್ಟು ಗಟ್ಟಿಯಾಗಬೇಕು. ಒಕ್ಕೂಟದ ಹೋರಾಟಕ್ಕೆ ಈಗಾಗಲೇ ಸಾಕಷ್ಟು ಬೆಂಬಲ ದೊರಕಿದೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಸಾಕಷ್ಟು ಬೆಂಬಲ ನೀಡಿವೆ ಎಂದು ಹೇಳಿದರು.

ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌ ಮಾತನಾಡಿ, ಈ ಪ್ರತಿಭಟನೆ ಜನಾಂದೋಲನದ ರೂಪದಲ್ಲಿ ನಡೆಯುವಂತಾಗಬೇಕು. ಹತ್ತು ಸಾವಿರ ಜನರಿಗೆ ಕಡಿಮೆ ಇಲ್ಲದಂತೆ ಜನ ಭಾಗವಹಿಸುವಂತಾಗಬೇಕು. ಒಕ್ಕೂಟದಿಂದ ಪ್ರತಿ ಮನೆ ಮನೆಗಳಿಗೆ, ಅಂಗಡಿಗಳಿಗೆ ತೆರಳಿ ಬಂದ್‌ ಯಶಸ್ವಿಗೆ ಮನವಿ ಮಾಡಿಕೊಳ್ಳಬೇಕು. ಪ್ರತಿಭಟನೆಯಲ್ಲಿ ಶಿಸ್ತು ಬದ್ಧತೆ ಇರಬೇಕು. ಎಲ್ಲಿಯೂ ಅಹಿತಕರ ಘಟನೆಗೆ, ಅಸಂಬದ್ಧತೆಗೆ ಅವಕಾಶ ನೀಡಬಾರದು ಎಂದು ಹೇಳಿದರು.

Advertisement

ಪುರಸಭೆ ಮಾಜಿ ಅಧ್ಯಕ್ಷೆ ನಂದಾ ಗೊಜನೂರು ಮಾತನಾಡಿ, ಸಾಗರದ ಎಲ್ಲಾ ಮಹಿಳಾ ಸಂಘಟನೆಗಳ ಪ್ರಮುಖರು ಅವರವರ ಹಂತದಲ್ಲಿ ವ್ಯಾಪಕ ಪ್ರಚಾರ ಮಾಡಿ ಬಂದ್‌ನಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು. ನಾಗರಾಜಸ್ವಾಮಿ ಜು. 9ರಂದು ಪಾದಯಾತ್ರೆಯ ಮೂಲಕ ಪಟ್ಟಣದಲ್ಲಿ ಪ್ರಚಾರ ನಡೆಸಬೇಕು ಎಂದು ಸಲಹೆ ನೀಡಿದರು.

ಬಂದ್‌ನ ರೂಪುರೇಷೆ ಬಗ್ಗೆ ಎಚ್.ಬಿ. ರಾಘವೇಂದ್ರ ಮಾತನಾಡಿದರು. ಬೇರೆ ಬೇರೆ ಸಂಘಟನೆಗಳ ಪ್ರಮುಖರಾದ ದಾನಪ್ಪ ದಳವಾಯಿ, ಐ.ವಿ. ಹೆಗಡೆ, ನ್ಯಾಯವಾದಿ ಪ್ರವೀಣ, ಬಸವರಾಜ್‌, ಎಚ್.ಎನ್‌. ಉಮೇಶ್‌, ಜಯರಾಮ್‌, ಕೆರೆಕೈ ಪ್ರಸನ್ನ, ಬಿ.ಎಚ್. ರಾಘವೇಂದ್ರ, ಶೋಭಾ ಲಂಬೋದರ್‌, ಚೂಡಾಮಣಿ ರಾಮಚಂದ್ರ, ಎಸ್‌. ಬಸವರಾಜ್‌, ಪ್ರಭಾ ವೆಂಕಟೇಶ್‌ ಮತ್ತಿತರರು ಮಾತನಾಡಿದರು.

ಸವಿತಾ ಸಮಾಜ, ಪ್ರಾಂತ್ಯ ಹೊಟೇಲ್ ಮಾಲೀಕರ ಸಂಘ, ತಾಲೂಕು ಪಿಗ್ಮಿ ಸಂಗ್ರಹಕಾರರ ಸಂಘ, ನಿವೃತ್ತ ನೌಕರರ ಸಂಘ, ಸಾಗರ ಟೌನ್‌ ಮಹಿಳಾ ಸಮಾಜ, ಶಿವಪ್ಪ ನಾಯಕ ಯುವಜನ ಸಂಘ ಮೊದಲಾದ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಶಶಿ ಸಂಪಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next