ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕವಾಗಿದ್ದು, ಇಂತಹ ಯೋಜನೆಗೆ ಡಿಪಿಆರ್ ತಯಾರಿಸುವ ನಿರ್ಧಾರವನ್ನು ಕೈ ಬಿಡುವಂತೆ ಒತ್ತಾಯಿಸಿ ಮಂಗಳವಾರ ಶಾಸಕ ಎಚ್. ಹಾಲಪ್ಪ ಬೆಂಗಳೂರಿನಲ್ಲಿ ಜಲಮಂಡಳಿಯ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿಯಾಗಿ ಮನವಿ ಮಾಡಿದರು.
ಉದ್ದೇಶಿತ ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ಯೋಜನೆ ಬಗ್ಗೆ ಶಿವಮೊಗ್ಗ ಜಿಲ್ಲಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜು. 10ರಂದು ಈ ಸಂಬಂಧ ಬಂದ್ ಸಹ ಘೋಷಣೆ ಮಾಡಲಾಗಿದೆ. ಶರಾವತಿ ನದಿ ನೀರಿನೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇಂತಹ ಯೋಜನೆಗಳನ್ನು ಕೈಗೊಳ್ಳುವುದರಿಂದ ಜನರ ಭಾವನೆಗೆ ಘಾಸಿಯುಂಟಾಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ಶರಾವತಿ ನದಿ ನೀರು ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಇದೆ. ಜೊತೆಗೆ ನಾಡಿಗೆ ಬೆಳಕು ನೀಡಲು ಈ ಭಾಗದ ಜನರು ಸರ್ವಸ್ವವನ್ನು ತ್ಯಾಗ ಮಾಡಿ ಮುಳುಗಡೆಯಾಗಿ ನಿರಾಶ್ರಿತ ಬದುಕು ನಡೆಸುತ್ತಿದ್ದಾರೆ. ಇವರಿಗೆ ಪುನರ್ ವಸತಿ ಕಲ್ಪಿಸುವ ಕೆಲಸ ಈತನಕ ನಡೆದಿಲ್ಲ. ಜನರು ತಮ್ಮ ನೋವು ನುಂಗಿಕೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಮತ್ತೂಂದು ಯೋಜನೆ ಮೂಲಕ ಜನರು ಆಕ್ರೋಶಕ್ಕೆ ಒಳಗಾಗುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ಇದು ಸಾಧುವಲ್ಲದ ಯೋಜನೆ. 400 ಕಿಮೀ ದೂರ ಇರುವ ಬೆಂಗಳೂರಿಗೆ ನೀರು ಎತ್ತಲು ವಿದ್ಯುತ್ ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ಲಿಂಗನಮಕ್ಕಿ ಅಣೆಕಟ್ಟಿನ ನಾಲ್ಕು ವಿದ್ಯುದಾಗಾರಗಳಿಂದ ಉತ್ಪತ್ತಿಯಾಗುವ ವಿದ್ಯುತ್ ನೀರು ಮೇಲೆತ್ತಲು ಬೇಕಾಗುತ್ತದೆ ಎನ್ನುವ ಅಂದಾಜು ಇದೆ. ನೀರು ಬೆಂಗಳೂರಿಗೆ ಹರಿಸಿದರೆ ವಿದ್ಯುತ್ ಉತ್ಪಾದನೆಗೆ ಸಹ ನೀರು ಕೊರತೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡಬೇಕು ಎಂದು ಶಾಸಕರು ಮುಖ್ಯ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಟ್ಟರು.
ಮೌಖೀಕ ಆದೇಶ ಬಂದಿದೆ: ಶಾಸಕರ ಮನವಿ ಆಲಿಸಿದ ನಂತರ ಮಾತನಾಡಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ರಮೇಶ್, ಬೆಂಗಳೂರಿಗೆ ಶರಾವತಿ ನೀರು ತರುವ ಸಂಬಂಧ ಪ್ರಸ್ತಾಪವಾಗಿರುವುದು ನಿಜ. ನಮಗೆ ಯೋಜನೆಗೆ ಸಂಬಂಧಪಟ್ಟಂತೆ ಡಿಪಿಆರ್ ತಯಾರಿಸಲು ಮೌಖೀಕ ಆದೇಶ ಬಂದಿದೆಯೇ ವಿನಃ ಪತ್ರ ಮೂಲಕ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಮುಖರಾದ ಆನಂದ ಮೆಣಸೆ, ಗಿರೀಶ್ ಗೌಡ, ಮಂಜಪ್ಪ ಮರಸ, ಉಮೇಶ್ ಇನ್ನಿತರರು ಇದ್ದರು.