Advertisement

ಕುಸಿದು ಬೀಳುವ ದುಸ್ಥಿತಿಯಲ್ಲಿ ಅಂಗನವಾಡಿ ಕಟ್ಟಡ

01:29 PM Aug 02, 2019 | Naveen |

ಸಾಗರ: ನಾಲ್ಕು ವರ್ಷಗಳ ಹಿಂದೆ ಬಸ್‌ವೊಂದು ಅಂಗನವಾಡಿ ಕಟ್ಟಡದೊಳಗೆ ನುಗ್ಗಿದರೂ ಆ ವೇಳೆ ಅಲ್ಲಿ ಮಕ್ಕಳಿಲ್ಲದ ಕಾರಣ ಘೋರ ದುರಂತವೊಂದು ತಪ್ಪಿತ್ತು. ಆದರೆ ಮಕ್ಕಳ ತಲೆ ಮೇಲಿನ ಆ ಅಪಾಯದ ಅಲಗು ಇವತ್ತಿಗೂ ಮಾಯವಾಗಿಲ್ಲ. ಸದ್ಯ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿರುವ ನಗರಸಭೆಯ ವಸತಿ ಗೃಹ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆಯಿದೆ. ಅವತ್ತು ಮಕ್ಕಳ ಕೈ ಹಿಡಿದಿದ್ದ ಅದೃಷ್ಟ ಈಗಲೂ ಕಾಪಾಡಬೇಕು ಎಂಬ ಅಕ್ಷಮ್ಯ ನಿರ್ಲಕ್ಷ್ಯವನ್ನು ಆಡಳಿತ ತೋರಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 276ನೇ ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರವು ಮೂಲತಃ ವಿನೋಬಾನಗರದ ರಾಜ್ಯ ಸರ್ಕಾರಿ ನೌಕರರ ಭವನದ ಪಕ್ಕದಲ್ಲಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ, ಈ ಅಂಗನವಾಡಿ ಕಟ್ಟಡಕ್ಕೆ ಬಸ್‌ ನುಗ್ಗಿ ಚಾವಣಿ, ಗೋಡೆ ಧ್ವಂಸವಾಗಿತ್ತು. ಅವತ್ತು ಅಲ್ಲಿ ಮಕ್ಕಳಿರಲಿಲ್ಲ. ಆದರೆ ಕಟ್ಟಡವೇ ಸಂಪೂರ್ಣ ಹಾನಿಯಾದುದರಿಂದ ತಾತ್ಕಾಲಿಕವಾಗಿ ಅಂಗನವಾಡಿಯನ್ನು ಜೋಸೆಫ್‌ ನಗರದಲ್ಲಿನ ನಗರಸಭೆ ವಸತಿಗೃಹವೊಂದಕ್ಕೆ ಸ್ಥಳಾಂತರಿಸಲಾಗಿತ್ತು.

ಮಕ್ಕಳ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಬಹಳ ಹಳೆಯದಾದ ಕಟ್ಟಡದ ಗೋಡೆಗಳಲ್ಲಿ ನೀರು ಅಸರುತ್ತದೆ. ಗೋಡೆಯ ಸಿಮೆಂಟ್ ಗಿಲಾಯಿ ಉದುರಿ ಬೀಳುತ್ತಿದೆ. ಶೌಚಾಲಯದ ಛಾವಣಿ, ಬಾಗಿಲು, ಗೋಡೆ ಶಿಥಿಲವಾಗಿದೆ. ಎಲ್ಲಕ್ಕಿಂತ ಆಹಾರ ಸಾಮಗ್ರಿ ಇಡುವ ಕೋಣೆಗೆ ಸೂಕ್ತ ಸುರಕ್ಷತೆ ಇಲ್ಲವಾಗಿದೆ. ಕಿಟಕಿಯಿಂದ ನೀರು ಸೋಕುತ್ತಿದ್ದು ಮಕ್ಕಳ ರಕ್ಷಣೆಗೆ ಚೀಲಗಳನ್ನು ಕಟ್ಟಲಾಗಿದೆ. ಗೋಡೆ ಸಹ ಬಿರುಕು ಬಿಟ್ಟಿದೆ. ನೆಲದಲ್ಲಿ, ಗೋಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಒಸರುತ್ತದೆ. ಒದ್ದೆಯಾದ ಗೋಡೆ, ಕಿತ್ತು ಬೀಳುವ ಪ್ಲಾಸ್ಟರ್‌ಗಳ ಕೋಣೆಯಲ್ಲಿ ಮಕ್ಕಳು ದಿನ ಕಳೆಯುತ್ತಿದ್ದಾರೆ.

ಕೇಂದ್ರದಲ್ಲಿ ಸದ್ಯಕ್ಕೆ 24 ಮಕ್ಕಳು ಇದ್ದಾರೆ. ಸಾಕಷ್ಟು ಕಾಳಜಿಯಿಂದ ಶ್ರಮ ವಹಿಸಿ ಇಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸಿ ಅಂಗನವಾಡಿಯನ್ನು ಶೀಘ್ರವಾಗಿ ಸ್ಥಳಾಂತರಿಸದಿದ್ದರೆ ಯಾವುದೇ ರೀತಿಯ ಅಪಾಯವಾಗುವ ಸಾಧ್ಯತೆ ಇದೆ. ಈ ನಡುವೆ ಹಳೆಯ ಕಟ್ಟಡದ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ. ಆರ್‌ಸಿಸಿ ಕಟ್ಟಡ ನಿರ್ಮಾಣವಾಗಿ ಶಾಸಕರಿಂದ ಉದ್ಘಾಟನೆ ಸಹ ಆಗಿದೆ. ಆದರೆ ನೂತನ ಕಟ್ಟಡದಲ್ಲಿ ಅಗತ್ಯ ಮೂಲ ಸೌಕರ್ಯಗಳೇ ಇಲ್ಲವಾಗಿದೆ. ಶೌಚಾಲಯ, ಅಡುಗೆ ಕೋಣೆ, ದಾಸ್ತಾನು ಕೋಣೆ ಇತ್ಯಾದಿ ಯಾವ ಸೌಲಭ್ಯಗಳೂ ಇಲ್ಲ. ಇನ್ನೊಂದು ಅಪಾಯ ಆಗುವ ಮುನ್ನ ನೂತನ ಕಟ್ಟಡಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಂಗನವಾಡಿ ಕೇಂದ್ರವನ್ನು ಶೀಘ್ರವಾಗಿ ಸ್ಥಳಾಂತರಿಸುವ ಕಾಳಜಿಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ತೋರಿಸಬೇಕಾಗಿದೆ ಎಂಬುದೇ ಈ ಭಾಗದ ಜನರ ಒಕ್ಕೊರಲಿನ ಬೇಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next