ಸಾಗರ: ತಾಲೂಕಿನ ತಾಳಗುಪ್ಪಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚಿಂಗ್ ಟರ್ಮಿನಲ್ ಕೇಂದ್ರವನ್ನು ಕೋಟೆಗಂಗೂರಿಗೆ ಸ್ಥಳಾಂತರಿಸಿರುವುದಕ್ಕೆ ಶನಿವಾರ ನಡೆದ ವಿವಿಧ ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ತಾಳಗುಪ್ಪದಿಂದ ಕೋಟೆಗಂಗೂರಿಗೆ ಟರ್ಮಿನಲ್ ಕೇಂದ್ರ ಸ್ಥಳಾಂತರಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಸ್ವಹಿತಾಸಕ್ತಿಯೇ ಕಾರಣ ಎಂಬ ಒಕ್ಕೊರಲಿನ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಸಾಗರದ ಅಭಿವೃದ್ಧಿಗೆ ಮಾರಕವಾಗುವ ರೀತಿಯಲ್ಲಿ ವರ್ತಿಸುತ್ತಿರುವ ರಾಜಕೀಯ ಮುಖಂಡರ ನಡೆಯನ್ನು ಸಭೆ ತೀವ್ರವಾಗಿ ಖಂಡಿಸಿತು. ಟರ್ಮಿನಲ್ ಕೇಂದ್ರವನ್ನು ಸ್ಥಳಾಂತರಗೊಳಿಸಿರುವುದರ ವಿರುದ್ಧ ಪ್ರಬಲ ಹೋರಾಟ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ತೀ.ನ. ಶ್ರೀನಿವಾಸ್, ಶಿಕಾರಿಪುರಕ್ಕೆ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೊಂಡೊಯ್ಯಲು ಸಾಗರದ ಜನರು ಆಕ್ಷೇಪಿಸುತ್ತಿಲ್ಲ. ಆದರೆ ಸಾಗರಕ್ಕೆ ಮಂಜೂರಾದ ಯೋಜನೆಯನ್ನು ಅಲ್ಲಿಗೆ ಸ್ಥಳಾಂತರಿಸಲು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಮುಂದಾಗಿರುವುದು ಖಂಡನೀಯ ಎಂದರು.
ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ರವಿ ಕುಗ್ವೆ, ಸಾಗರ ಹಾಗೂ ಸೊರಬ ಕ್ಷೇತ್ರದ ಶಾಸಕರು ಯಡಿಯೂರಪ್ಪ ಅವರಿಗೆ ಸ್ವಾಮಿನಿಷ್ಠೆ ತೋರಿಸುವ ಸಲುವಾಗಿ ತಮ್ಮ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಿವಮೊಗ್ಗ ಜಿಲ್ಲೆ ಎಂದರೆ ಶಿವಮೊಗ್ಗ ಹಾಗೂ ಶಿಕಾರಿಪುರ ಮಾತ್ರ ಎನ್ನುವಂತೆ ಯಡಿಯೂರಪ್ಪ ಹಾಗೂ ರಾಘವೇಂದ್ರ ವರ್ತಿಸುತ್ತಿದ್ದಾರೆ ಎಂದರು.
ತಾಪಂ ಸದಸ್ಯ ಕಲಸೆ ಚಂದ್ರಪ್ಪ, ಕೇಂದ್ರ ಸ್ಥಳಾಂತರ ವಿರೋಧಿಸಿ ತಾಳಗುಪ್ಪದಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆ ನಡೆಸಬೇಕಿದೆ ಎಂದು ಸಲಹೆ ನೀಡಿದರು. ಲೇಖಕ ಅ.ರಾ.ಶ್ರೀನಿವಾಸ್ ಮಾತನಾಡಿ, ಸಾಗರಕ್ಕೆ ಆಗುತ್ತಿರುವ ಅನ್ಯಾಯವನ್ನು ಹೀಗೆ ಸಹಿಸಿಕೊಂಡು ಸುಮ್ಮನಿದ್ದರೆ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಯಡಿಯೂರಪ್ಪ ಮುಂದಾಗುವುದು ಖಚಿತ ಎಂದರು.
ರಂಗಕರ್ಮಿ ಎಚ್.ಬಿ. ರಾಘವೇಂದ್ರ ಮಾತನಾಡಿ, ರೈಲ್ವೆ ಟರ್ಮಿನಲ್ ವಿಷಯದಲ್ಲಿ ಸಾಗರಕ್ಕೆ ಅನ್ಯಾಯವಾಗಿದ್ದರೂ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ಮೌನ ವಹಿಸಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ಎನ್.ವೆಂಕಟಗಿರಿ, ಜಯಲಕ್ಷ್ಮೀ ನಾರಾಯಣಪ್ಪ, ವೃಂದಾ ಹೆಗಡೆ, ಮಹ್ಮದ್ ಖಾಸಿಂ, ಅಮೀರ್ ಖಾನ್, ಅಣ್ಣಪ್ಪ ಬಾಳೆಗುಂಡಿ, ಸಿರಿವಂತೆ ಚಂದ್ರಶೇಖರ್, ಸುಧಾಕರ ಕುಗ್ವೆ, ರಿಯಾಜುದ್ದೀನ್ ಮಾತನಾಡಿದರು.