Advertisement

ನಕಲಿ ವೈದ್ಯರ ತಡೆಗೆ ಕ್ರಮ ವಹಿಸಿ

06:16 PM Nov 09, 2019 | Naveen |

ಸಾಗರ: ತಾಲೂಕಿನಲ್ಲಿ 42 ಜನ ಎಂಬಿಬಿಎಸ್‌ ಆಗದೆ ಇರುವ ನಕಲಿ ವೈದ್ಯರನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. ನಕಲಿ ವೈದ್ಯರಿಂದ ಜನರ ಆರೋಗ್ಯಕ್ಕೆ ಅಪಾಯವಿದೆ. ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ಸ್ಪಷ್ಟ ಸೂಚನೆ ನೀಡಿದರು.

Advertisement

ನಗರದ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ತಾಪಂ ವ್ಯಾಪ್ತಿಯ ವಿವಿಧ ಇಲಾಖೆ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ 35 ಗ್ರಾಪಂನಲ್ಲೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಿ. ಪ್ರಸ್ತುತ ರಕ್ತದ ಕೊರತೆ ವಿಪರೀತವಾಗಿದೆ. ಗ್ರಾಪಂ ಹಂತದಲ್ಲಿ ರಕ್ತದಾನ ಶಿಬಿರ ನಡೆಸಿದರೆ ಪ್ರತಿ ಪಂಚಾಯತ್‌ನಿಂದ ಕನಿಷ್ಟ 150 ಯೂನಿಟ್‌ ರಕ್ತ ಸಂಗ್ರಹಿಸಲು ಸಾಧ್ಯವಿದೆ. ಸಾಗರದ ರೋಟರಿ ರಕ್ತನಿಧಿ  ಕೇಂದ್ರ ನಿಮಗೆ ಅಗತ್ಯ ನೆರವು ನೀಡುತ್ತದೆ ಎಂದರು.

ನಗರವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಜಾಸ್ತಿಯಾಗುತ್ತಿದೆ. ಅತಿಮುಖ್ಯವಾಗಿ ಪ್ರೌಢಶಾಲೆಗೆ ಹೋಗುವ 8ರಿಂದ 10ನೇ ತರಗತಿಯೊಳಗಿನ ಮಕ್ಕಳು ಗಾಂಜಾ ಸೇವನೆಯಲ್ಲಿ ತೊಡಗಿರುವ ಮಾಹಿತಿ ಇದೆ. ಶಾಲಾ- ಕಾಲೇಜು ಅಕ್ಕಪಕ್ಕ ಇಂತಹ ಕೃತ್ಯ ನಡೆಯುತ್ತಿದ್ದರೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್‌ ಇಲಾಖೆಯ ವೈಫಲ್ಯದ ಕುರಿತು ಡಿಐಜಿ, ಐಜಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದರು.

ತಾಲೂಕಿನಾದ್ಯಂತ ಕಳ್ಳತನ ಪ್ರಕರಣ ಜಾಸ್ತಿಯಾಗುತ್ತಿದೆ. ಪೊಲೀಸರು ಕಳ್ಳರನ್ನು ಹಿಡಿದು ಕಳ್ಳತನವಾಗಿರುವ ವಸ್ತುಗಳನ್ನು ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳ್ಳತನ ಪ್ರಕರಣ ಹೆಚ್ಚುತ್ತಿರುವುದು ಮತ್ತು ಕಳ್ಳರನ್ನು ಹಿಡಿಯುವಲ್ಲಿ ಪೊಲೀಸ್‌ ಇಲಾಖೆ ವೈಫಲ್ಯ ಅನುಭವಿಸಿರುವ ಕುರಿತು ಈಗಾಗಲೆ ನಾನು ಮುಖ್ಯಮಂತ್ರಿಗಳಿಗೆ, ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

Advertisement

ತಾಲೂಕಿನ ಅಕ್ಷರ ದಾಸೋಹ ಕೊಠಡಿಯಲ್ಲಿ 2005ರಿಂದ ಈತನಕ 35 ಕಳ್ಳತನ ಪ್ರಕರಣ ದಾಖಲಾಗಿದೆ. 60ಕ್ಕೂ ಹೆಚ್ಚು ಸಿಲಿಂಡರ್‌ ಕಳ್ಳತನ ನಡೆದಿದೆ. ಅಕ್ಷರ ದಾಸೋಹ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕೆಲವು ಸರ್ಕಾರಿ ಕಚೇರಿಯಲ್ಲಿ ಸಹ ಕಳ್ಳತನ ನಡೆದಿದೆ. ಪದೇಪದೇ ಘಟನೆಗಳು ನಡೆಯುತ್ತಿರುವುದನ್ನು ನೋಡಿದರೆ ಪೊಲೀಸರೇ ಇದರಲ್ಲಿ ಶಾಮೀಲಾಗಿದ್ದಾರಾ ಎನ್ನುವ ಅನುಮಾನ ಸಹ ಮೂಡುತ್ತಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆಯುವಂತೆ ತಾಪಂ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ 122 ಹಿರಿಯ ಪ್ರಾಥಮಿಕ ಹಾಗೂ 6 ಪ್ರೌಢಶಾಲೆಗಳ ಮೇಲ್ಚಾವಣಿ ದುರಸ್ತಿಗಾಗಿ ತಲಾ 3 ಲಕ್ಷ ರೂ. ಸರ್ಕಾರ ಮಂಜೂರು ಮಾಡಿದೆ. ಜಿಪಂ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಮೇಲ್ಚಾವಣಿಗೆ ಬಿಡುಗಡೆಯಾದ ಹಣವನ್ನು ಬೇರೆ ಕಾಮಗಾರಿಗೆ ಉಪಯೋಗಿಸಿಕೊಳ್ಳಬಾರದು. ಶಿಕ್ಷಣ ಇಲಾಖೆ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವಾಗ ಅಕ್ಕಪಕ್ಕ ಸರ್ಕಾರಿ ಶಾಲೆಗಳಿದ್ದರೆ ಕೊಡಬಾರದು ಎಂದು ಸೂಚಿಸಿದರು.

ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಕಾರ್ಯನಿರ್ವಾಹಣಾ ಧಿಕಾರಿ ಮಂಜುನಾಥಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next