Advertisement

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮ: ವೀಣಾ

09:17 AM Jan 02, 2019 | |

ಸಾಗರ: ಮುಂಬರುವ ದಿನಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಾಗರದ ಕೆನೆಲ್‌ ಕ್ಲಬ್‌ ಹಾಗೂ ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ನಗರಸಭೆಯ ವ್ಯಾಪ್ತಿಯ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌ ತಿಳಿಸಿದರು.

Advertisement

ಸಹ್ಯಾದ್ರಿ ಕೆನೆಲ್‌ ಕ್ಲಬ್‌, ಸಾಗರ ಪಶುಪಾಲನಾ ಇಲಾಖೆ ಮತ್ತು ಕನಾಟಕ ಪಶುವೈದ್ಯರ ಸಂಘ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ ಮಲೆನಾಡು ಪೆಟ್‌ ಶೋ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಯಿ ಸಾಕುವವರಿಗೆ ಪರವಾನಗಿ ನಿಯಮ ಹಾಗೂ ರೇಬಿಸ್‌ ಲಸಿಕೆ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ| ಟಿ.ಎನ್‌. ಸದಾಶಿವ ಇದ್ದರು. ಗೀತಾ ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಡಾ| ಎನ್‌.ಎಚ್‌. ಶ್ರೀಪಾದ ರಾವ್‌ ನಿರೂಪಿಸಿದರು. ನಾಯಿಗಳ ಪ್ರದರ್ಶನ ಹಾಗೂ ಸ್ಪರ್ಧೆಗೆ ಮುನ್ನ ನಾಯಿಗಳ ಪಾಲನೆ, ಪೋಷಣೆ, ಗುಣಲಕ್ಷಣಗಳು, ರೇಬೀಸ್‌ ಮತ್ತು ತರಬೇತಿ ಬಗ್ಗೆ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶ್ವಾನ ಪ್ರದರ್ಶನ: ಇದರಲ್ಲಿ 16 ವಿವಿಧ ತಳಿಯ 192 ನಾಯಿಗಳು ಭಾಗವಹಿಸಿದ್ದವು. ಶ್ವಾನ ಪ್ರಪಂಚದಲ್ಲಿಯೇ ಅತ್ಯಂತ ಆಕರ್ಷಕ ತಳಿಗಳಾದ ಗೋಲ್ಡನ್‌ ರಿಟ್ರೀವರ್‌ನಿಂದ ಹಿಡಿದು ದೈತ್ಯ ತಳಿಗಳಾದ ಗ್ರೇಟ್‌ ಡೇನ್‌, ಸೈಂಟ್‌ ಬರ್ನಾಡ್‌ ಗಮನ ಸೆಳೆದವು. ಲವಲವಿಕೆಯ ಲ್ಯಾಬ್ರಡಾರ್‌ ನಾಯಿಗಳ ಸಂಖ್ಯೆ ಹೆಚ್ಚಿತ್ತು. ಅಪರೂಪದ ತಳಿಗಳಾದ ಸೈಬೀರಿಯನ್‌ ಹಸ್ಕಿ, ಬೀಗಲ್‌, ಅಮೆರಿಕನ್‌ ಬುಲ್‌ ಡಾಗ್‌, ಬುಲ್‌ ಟೆರ್ರಿಯರ್‌, ಲಾಸಾ ಆಪ್ಸೋ, ಶಿಟ್ಟು, ಪಗ್‌, ಕಾಕರ್‌ಸ್ಪೇನಿಯಲ್‌ ಹಾಗೂ ಬಿಜಾಪುರದ ಮುಧೋಳ ಹೌಂಡ್‌ ತಳಿಗಳು ಶ್ವಾನ ಪ್ರೇಮಿಗಳ ಮನ ಸೆಳೆದವು. 

ಮುಖ್ಯ ತೀರ್ಪುಗಾರರಾಗಿ ಮೈಸೂರಿನ ಶ್ವಾನ ತಜ್ಞ ಡಾ| ಸಿ.ಎಸ್‌. ಅರುಣ್‌, ಡಾ| ಜಯರಾಮಯ್ಯ ಜೊತೆಗೆ ಡಾ| ಬಸವೇಶ್ವರ ಹೂಗಾರ್‌, ಡಾ| ಸುನೀಲ್‌ ಕುಮಾರ್‌ ಶಿಕಾರಿಪುರ ಸಹಕರಿಸಿದರು. ಡಾ|ಕೆ.ಎಂ.ನಾಗರಾಜ್‌ ನಾಯಿಗಳ ತಳಿ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮೊದಲ ಬಾರಿಗೆ ಬೆಕ್ಕುಗಳ ಪ್ರದರ್ಶನ ಕೂಡ ನಡೆಯಿತು.

Advertisement

ಶ್ವಾನಮರಿ ವಿಭಾಗದಲ್ಲಿ ಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಹರೀಶ್‌ ವಿ. ಸಾಗರ ಅವರ ಜರ್ಮನ್‌ ಶೆಫರ್ಡ್‌ ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ಪ್ರಶಸ್ತಿಗಳನ್ನು ಅಕ್ಷಯ ಶಿರಸಿ ಅವರ ಗೋಲ್ಡನ್‌ ರಿಟ್ರೀವರ್‌ ಹಾಗೂ ಮಹೇಶ್‌ ಹೆಗಡೆ ಆವಿನಹಳ್ಳಿ ಅವರ ಲ್ಯಾಬ್ರಡಾರ್‌ ಪಡೆಯಿತು. ಶಂಕರ್‌ ಸಾಗರ್‌ ಅವರ ಶೀಡ್‌ದು ಮತ್ತು ಡಾ| ವಾಣಿಶ್ರೀ ಭಟ್‌ ಅವರ ನೈಜೀರಿಯಾದ ಲಾಸ್‌ ಆ್ಯಪ್ಸೋ ಸಮಾಧಾನಕರ ಬಹುಮಾನ ಪಡೆದವು.

ವಯಸ್ಕ ಶ್ವಾನ ವಿಭಾಗದಲ್ಲಿ ಸುಜನ್‌ ಸಿದ್ಧಾಪುರ ಅವರ ಜರ್ಮನ್‌ ಶೆಫರ್ಡ್‌ ಚಾಂಪಿಯನ್‌ ಪಟ್ಟ ಪಡೆದರೆ, ಕಲ್ಕೊಪ್ಪ ಚೈತನ್ಯ ಅವರ ಡಾಬರ್‌ ಮನ್‌ ಮತ್ತು ಸಾಗರದ ರವಿಗೌಡ ಅವರ ಲ್ಯಾಬ್ರಡಾರ್‌ ಮೊದಲಿನೆರಡು ರನ್ನರ್‌ ಅಪ್‌ ಸ್ಥಾನ ಗಿಟ್ಟಿಸಿಕೊಂಡವು. ವರಕೋಡಿನ ಅನಘ ಅವರ ರಾಟ್‌ವೀಲರ್‌ 4ನೇ, ಶಿರಸಿ ಅವಿನಾಶ್‌ ಅವರ ಬುಲ್‌ ಟೆರ್ರಿಯರ್‌ 5ನೇ, ನಗರದ ರತನ್‌ ಅವರ ಬಾಕ್ಸರ್‌ 6ನೇ ಸ್ಥಾನ ಪಡೆಯಿತು. ಮುಂದಿನೆರಡು ಸ್ಥಾನಗಳನ್ನು ಕಿರಣ್‌ರ ಪಗ್‌, ಮಂಜುಸಾಗರ ಅವರ ಡ್ಯಾಷ್‌ಹೌಂಡ್‌ ಪಡೆಯಿತು. ಪ್ರತಿಯೊಂದು ವಿಭಾಗದಲ್ಲಿ ಮೊದಲ ಸ್ಥಾನ ಪಡೆದವು ಚಾಂಪಿಯನ್‌ ಪಟ್ಟಕ್ಕೆ ಸ್ಪರ್ಧಿಸಿದ್ದವು

70 ಸಾವಿರ ವಿಮಾನ ವೆಚ್ಚ!
ಈ ಮುನ್ನ ನೈಜೀರಿಯಾದಲ್ಲಿದ್ದಾಗ ಸಾಕುತ್ತಿದ್ದ ಲಾಸ್‌ ಆ್ಯಪ್ಸೋ  ಪುಟ್ಟ ನಾಯಿಯನ್ನು ಡಾ| ವಾಣಿಶ್ರೀ ಭಟ್‌ ವಿಮಾನದಲ್ಲಿ ತಮ್ಮೊಂದಿಗೆ ಭಾರತಕ್ಕೆ ತರಲು ಅದಕ್ಕೆ ಪಾಸ್‌ಪೋರ್ಟ್‌, ವೀಸಾ ಮಾಡಿಸಿ 70 ಸಾವಿರ ರೂ. ವೆಚ್ಚ ಮಾಡಿದ್ದರು. ಅದು ಇಲ್ಲಿ ಪ್ರದರ್ಶನಗೊಂಡು ಸಮಾಧಾನಕರ ಬಹುಮಾನ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next