Advertisement

ಬಿಜೆಪಿ ಸದಸ್ಯತ್ವ ದುಪ್ಪಟ್ಟುಗೊಳಿಸುವ ಗುರಿ: ಹಾಲಪ್ಪ

12:10 PM Jul 06, 2019 | Naveen |

ಸಾಗರ: ಭಾರತೀಯ ಜನತಾ ಪಕ್ಷ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ. ಚೀನಾದ ಕಮ್ಯುನಿಸ್ಟ್‌ ಪಕ್ಷ 4 ಕೋಟಿ ಸದಸ್ಯರನ್ನು ಹೊಂದಿದ್ದರೆ ಬಿಜೆಪಿ ಕಳೆದ ವರ್ಷ 11 ಕೋಟಿ ಸದಸ್ಯರನ್ನು ಹೊಂದಿತ್ತು. ಈ ಸಾಲಿನ ಸದಸ್ಯತ್ವ ಅಭಿಯಾನದ ಮೂಲಕ ಸದಸ್ಯರನ್ನು ಸಂಖ್ಯೆಯನ್ನು ದೇಶವ್ಯಾಪಿ ದುಪ್ಪಟ್ಟುಗೊಳಿಸುವ ಚಿಂತನೆಯನ್ನು ವರಿಷ್ಟರು ನಡೆಸಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.

Advertisement

ನಗರದ ರಾಘವೇಶ್ವರ ಸಭಾಭವನದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕುರಿತ ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ 1 ಕೋಟಿ ಸದಸ್ಯರನ್ನು ಹೊಂದಿದ್ದು, ತಾಲೂಕಿನಲ್ಲಿ 39 ಸಾವಿರ ಸದಸ್ಯರನ್ನು ಹೊಂದಿದೆ. ಈ ಸದಸ್ಯತ್ವ ಅಭಿಯಾನದ ಮೂಲಕ ಇನ್ನೂ ಶೇ. 20ರಷ್ಟು ಸದಸ್ಯತ್ವವನ್ನು ಜಾಸ್ತಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಕಾರ್ಯಕರ್ತರು ಮುಖ್ಯ. ಆದರೆ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಚುನಾವಣೆ ಸಂದರ್ಭದಲ್ಲಿ ದಣಿವರಿಯದೆ ಕೆಲಸ ಮಾಡಿ, ಪಕ್ಷದ, ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದರಿಂದಾಗಿ ಇತರ ರಾಜಕೀಯ ಪಕ್ಷಗಳಿಗಿಂತ ಬಿಜೆಪಿ ದೇಶದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದು, ಕಾರ್ಯಕರ್ತರ ಬಲದ ಮೇಲೆಯೇ ಪಕ್ಷ ಅತ್ಯಂತ ಸದೃಢವಾಗಿ ದೇಶವ್ಯಾಪಿ ಬೆಳೆಯುತ್ತಿದೆ ಎಂದರು.

ಒಂದು ಕಾಲದಲ್ಲಿ ಬಿಜೆಪಿ ದೇಶದಲ್ಲಿ ಸಂಸದರ ಸ್ಥಾನಕ್ಕೆ ಸಂಬಂಧಪಟ್ಟಂತೆ ಖಾತೆ ತೆರೆಯುವುದೇ ಕಷ್ಟವಾಗಿತ್ತು. ಕಳೆದ ಲೋಕಸಭೆ ಚುನಾವಣೆ ಮತ್ತು ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ಸ್ಥಾನಗಳನ್ನು ಪಡೆದಿದೆ. ನರೇಂದ್ರ ಮೋದಿಯವರ ನಾಮಬಲ, ಕಾರ್ಯಕರ್ತರ ಶ್ರಮ ಹಾಗೂ ಹಿಂದಿನಿಂದಲೂ ಪಕ್ಷಕ್ಕಾಗಿ ಸರ್ವಸ್ವವನ್ನು ಸಮರ್ಪಣೆ ಮಾಡಿಕೊಂಡ ಹಿರಿಯರ ಸಹಕಾರದಿಂದ ಪಕ್ಷ ಹೆಚ್ಚು ಸ್ಥಾನ ಗೆಲ್ಲುವಂತೆ ಆಗಿದೆ. ರಾಜ್ಯದಲ್ಲಿ ಸಹ ಯಡಿಯೂರಪ್ಪ ಅವರ ನಾಯಕತ್ವ ಮತ್ತು ನರೇಂದ್ರ ಮೋದಿ ಅವರ ಅಲೆಯಿಂದಾಗಿ ಹಿಂದೆಂದಿಗಿಂತ ಬಿಜೆಪಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಯಿತು. ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಹೆಚ್ಚಿನ ಸದಸ್ಯರ ಅಗತ್ಯವಿದೆ. ಇಂತಹ ಅಭಿಯಾನದ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್‌ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ. ಕಾರ್ಯಕರ್ತರು ಸಕ್ರಿಯವಾಗಿದ್ದಾಗ ಮಾತ್ರ ಪಕ್ಷ ಸದೃಢವಾಗಿ ಇರುತ್ತದೆ. ಬಿಜೆಪಿ ಕಾರ್ಯಕರ್ತರು ಅತ್ಯಂತ ಕ್ರಿಯಾಶೀಲರು ಎನ್ನುವುದಕ್ಕೆ ಈಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಪಕ್ಷ ಅಭೂತಪೂರ್ವ ಜಯ ದಾಖಲಿಸಿರುವುದೇ ಸಾಕ್ಷಿಯಾಗಿದೆ. ಸಂಘಟನಾ ಪರ್ವ ಯಶಸ್ಸಿಗೆ ಪಕ್ಷದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯುವಂತೆ ಆಗಬೇಕು. ಅತಿ ಹೆಚ್ಚು ಸದಸ್ಯರನ್ನು ತಾಲ್ಲೂಕಿನಿಂದ ನೋಂದಾವಣೆ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

Advertisement

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಅಧ್ಯಕ್ಷ ಆರ್‌. ಶ್ರೀನಿವಾಸ್‌ ಮೇಸ್ತ್ರಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್. ರಾಮಪ್ಪ, ಕಾರ್ಯದರ್ಶಿ ಚೇತನರಾಜ ಕಣ್ಣೂರು, ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಸಾಲಕೊಪ್ಪ ರಾಮಚಂದ್ರ ಇದ್ದರು. ದೇವೇಂದ್ರಪ್ಪ ಸ್ವಾಗತಿಸಿದರು. ಕೆ.ಆರ್‌. ಗಣೇಶಪ್ರಸಾದ್‌ ವಂದಿಸಿದರು. ವಿ. ಮಹೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next