ಸಾಗರ: ಕಾರ್ಮಿಕರಿಗೆ ಹಂಚಲು ಬಳಕೆಯಾಗಬೇಕಿದ್ದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 250 ಸುರಕ್ಷಾ ಕಿಟ್‌ಗಳು ತಾಲೂಕಿನ ಆವಿನಹಳ್ಳಿಯ ಬಿಜೆಪಿ ಕಾರ್ಯಕರ್ತೆಯ ಮನೆಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಫಿಯಾ ಭಾನು, ಗ್ರಾಪಂ ಸದಸ್ಯರು ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ನಂತರ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸುರಕ್ಷಾ ಕಿಟ್‌ಗಳು ಆವಿನಹಳ್ಳಿಯ ರೂಪಾ ರಮೇಶ್ ಎನ್ನುವವರ ಮನೆಯಲ್ಲಿ ಇರುವ ಕುರಿತು ಮಾಹಿತಿ ಪಡೆದ ಸಫಿಯಾ, ಇತರರು ಅಲ್ಲಿಗೆ ತೆರಳಿ ಮುತ್ತಿಗೆ ಹಾಕಿದಾಗ ಮನೆಯೊಳಗೆ ಕಿಟ್‌ಗಳು ಇದ್ದುದು ಕಂಡುಬಂದಿದೆ. ಈ ಸಂಬಂಧ ಮಾತನಾಡಿರುವ ಸಫಿಯಾ, ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಿಟ್‌ಗಳು ಖಾಸಗಿ ವ್ಯಕ್ತಿಯ ಮನೆಯಲ್ಲಿರುವುದು ಸರಿಯಲ್ಲ. ಆವಿನಹಳ್ಳಿ ಭಾಗದಲ್ಲಿ ಹಂಚುವ ಉದ್ದೇಶದ್ದಾಗಿದ್ದರೆ ಅದು ಗ್ರಾಮ ಪಂಚಾಯ್ತಿ ಸುಪರ್ದಿಯಲ್ಲಿರಬೇಕಿತ್ತು. ಈ ರೀತಿಯ ಸಂಗ್ರಹ ಆಕ್ಷೇಪಾರ್ಹ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಎನ್.ರಾಜು ಪಟೇಲ್ ಮಾತನಾಡಿ, ಇಲ್ಲಿ ಸಂಗ್ರಹಿಸಿದ ಕಿಟ್‌ಗಳನ್ನು ತಮಗೆ ಬೇಕಾದವರಿಗೆ ಹಂಚಲು ಬಿಜೆಪಿ ಪಕ್ಷ ನಡೆಸಿದ ಕ್ರಮ. ಇದು ಕಾರ್ಮಿಕರಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ವರ್ಗೀಕರಿಸಿ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಎಂ.ಶ್ರೀನಿವಾಸ, ಪ್ರಶಾಂತ, ರಾಮು, ದೇವರಾಜ, ಶ್ರೀಕಾಂತ ಮುಂತಾದವರು ಇದ್ದರು.
ಇದನ್ನೂ ಓದಿ:ಪಂಜಾಬ್ ಕಾಂಗ್ರೆಸ್ ಹೈ ಡ್ರಾಮಾ | ಸಿಧು,ರಜಿಯಾ,ಯೋಗಿಂದರ್ ನಂತರ ಗೌತಮ್ ರಾಜೀನಾಮೆ
ಕಿಟ್ ಸಂಬಂಧ ಸ್ಪಷ್ಟೀಕರಣ ನೀಡಿದ ರೂಪಾ ಸುರೇಶ್, ನಾನು ಜನಶಕ್ತಿ ಎಂಬ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷೆ. ನಮ್ಮ ಸಂಸ್ಥೆ ಶೈಶವಾವಸ್ಥೆಯಲ್ಲಿದ್ದು ಇನ್ನೂ ನಗರದಲ್ಲಿ ಯಾವುದೇ ಕಚೇರಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಎರಡನೆ ಹಂತದಲ್ಲಿ ನೀಡಿದ 500 ಕಿಟ್‌ಗಳನ್ನು ನಮ್ಮ ಸಂಸ್ಥೆಯಿಂದ ವಿತರಿಸುವ ಜವಾಬ್ದಾರಿ ಹೊತ್ತು ಪಡೆದುಕೊಂಡಿದ್ದೆವು. ಸೋಪು, ಸ್ಯಾನಿಟೈಸರ್‌ನಂತಹ ಸುರಕ್ಷಾ ವಸ್ತುಗಳನ್ನು ಒಳಗೊಂಡ ಇದನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿಲ್ಲ. ನಿಜವಾದ ಕಾರ್ಮಿಕರಿಗೆ ವಿತರಿಸುವ ಉದ್ದೇಶ ಹೊಂದಿದ್ದು, ಸಂಗ್ರಹಾಗಾರ ಇಲ್ಲದ ಕಾರಣ ನಮ್ಮ ಮನೆಯಲ್ಲಿ ಇಡಲಾಗಿದೆ. ಈಗಾಗಲೇ 250 ಕಿಟ್‌ಗಳನ್ನು ವಿತರಿಸಲಾಗಿದೆ.
ಗೌತಮಪುರದಲ್ಲಿ ಸದ್ಯದಲ್ಲಿಯೇ 100 ಕಿಟ್‌ಗಳನ್ನು ಕಾರ್ಯಕ್ರಮದ ಮೂಲಕ ವಿತರಿಸುವ ಯೋಜನೆ ನಿಗದಿಯಾಗಿತ್ತು. ಇದನ್ನು ಕೇವಲ ಆವಿನಹಳ್ಳಿಯಲ್ಲಿ ಮಾತ್ರ ವಿತರಿಸಲಾಗುತ್ತಿಲ್ಲ. ತಾಲೂಕಿನ ಬೇರೆ ಬೇರೆ ಕಡೆ ಅರ್ಹರಿಗೆ ವಿತರಿಸುತ್ತೇವೆ ಎಂದರು.
ಇಲಾಖೆಯ ವಶಕ್ಕೆ ಕಿಟ್‌ಗಳು: ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಮುತ್ತಿಗೆ ಹಾಕಿ, ಇಲಾಖೆಯ ಕಿಟ್‌ಗಳನ್ನು ಗ್ರಾಪಂ ಸುಪರ್ದಿಗೆ ಒಪ್ಪಿಸಲು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕ ನಿರೀಕ್ಷಕಿ ಶಿಲ್ಪಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಪಂ ಸದಸ್ಯರ ಜತೆ ಸಮಾಲೋಚನೆ ನಡೆಸಿ, ಇಲಾಖೆಯ ಸುರಕ್ಷಾ ಕಿಟ್‌ಗಳನ್ನು ವಾಹನದ ಮೂಲಕ ಕಚೇರಿಗೆ ಸಾಗಣೆ ಮಾಡಿ, ಇಲಾಖೆಯ ವಶಕ್ಕೆ ಪಡೆದುಕೊಂಡಿದ್ದಾರೆ.