Advertisement

ನಗರಸಭೆಯ ಮಳಿಗೆ ಬಳಸಿ ಅಕ್ರಮ ನಾಟಾ ಸಂಗ್ರಹ!

09:00 PM Sep 28, 2021 | Adarsha |

ಸಾಗರ: ಖಾಲಿಯಿದ್ದ ನಗರಸಭೆಯ ಮಳಿಗೆಯ ಅಧಿಕೃತ ಬೀಗವನ್ನು ಒಡೆದು, ಮಳಿಗೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಕಳ್ಳರು ಬೆಲೆಬಾಳುವ ಅಕ್ರಮ ನಾಟಾ ದಾಸ್ತಾನು ಮಾಡಿ ತಮ್ಮದೇ ಬೀಗ ಜಡಿದಿದ್ದ ವಿಚಿತ್ರ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಅಣಲೆಕೊಪ್ಪದ ರಾಜಗುರು ಕಲ್ಯಾಣ ಮಂಟಪ ರಸ್ತೆ ತಿರುವಿನಲ್ಲಿರುವ ನಗರ ಸಭೆಯ ಖಾಲಿ ಮಳಿಗೆ ಯಾರೂ ಹರಾಜು ಹಿಡಿದಿರದ ಕಾರಣ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯಿಂದಲೇ ಬೀಗ ಹಾಕಲಾಗಿತ್ತು. ಆದರೆ ಆ ಬೀಗವನ್ನು ಒಡೆದು ಅಕ್ರಮವಾಗಿ ಬೆಲೆ ಬಾಳುವ ನಾಟಾಗಳನ್ನು ದಾಸ್ತಾನು ಮಾಡಿಕೊಂಡು  ಬೇರೆ ಬೀಗ ಕೂಡ ಹಾಕಲಾಗಿತ್ತು. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಸದಸ್ಯರು ಹಾಗೂ ನಗರಸಭೆಯ ಅಧಿಕಾರಿಗಳು ಮಳಿಗೆಯ ಬಾಗಿಲಿನ ಬೀಗ ಒಡೆದು ಪರಿಶೀಲಿಸಿದಾಗ ಒಳಗೆ ಅಕ್ರಮ ನಾಟಾ ಇರುವುದು ಪತ್ತೆಯಾಗಿದೆ. ಹಳೆಯ ನಾಟಾ ಮತ್ತು ಹೊಸ ನಾಟಾಗಳನ್ನು ದಾಸ್ತಾನು ಇಡಲಾಗಿರುವುದು ಕಂಡುಬಂದಿತು.

ಈ ಸಂಬಂಧ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿ ವಲಯ ಅರಣ್ಯಾಧಿಕಾರಿ ಪ್ರಮೋದ್ ಮತ್ತವರ ತಂಡ ಅಕ್ರಮ ದಾಸ್ತಾನು ಪರಿಶೀಲಿಸಿದ್ದಾರೆ. ಈ ಕುರಿತು ನಗರ ಸಭೆಯ ಅಧ್ಯಕ್ಷೆ ಮಧುರಾ ಶಿವಾನಂದ ಮಾತನಾಡಿ, ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಈ ಕುರಿತು ನಗರ ಸಭೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ.  ಅಕ್ರಮದಾರರು ನಗರಸಭೆಯ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ದ ಕಠಿಣವಾದ ಕ್ರಮ ಮತ್ತು ತನಿಖೆ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ:ಬಿ ಫಾರ್ಮ ಆದವರೆ ಜನೌಷಧಿ ಕೇಂದ್ರ ನಡೆಸಿದರೆ ಹೆಚ್ಚು ಪರಿಣಾಮಕಾರಿ : ಸುನೀಲ ಹೆಗಡೆ

ವಲಯ ಅರಣ್ಯಾಧಿಕಾರಿ ಪ್ರಮೋದ್ ಮಾತನಾಡಿ, ನಗರಸಭೆಗೆ ಸೇರಿದ್ದ ಮಳಿಗೆ ಇದಾಗಿದ್ದು, ಅಧ್ಯಕ್ಷರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಗೆದ್ದಲು ಹಿಡಿದ ಹಳೆಯ ನಾಟಗಳು ಸಹ ಕಂಡುಬಂದಿದ್ದು, ನಗರಸಭೆ ವತಿಯಿಂದ ಅಧಿಕೃತವಾದ ಪತ್ರ, ದೂರು ಬಂದ ನಂತರ ದಾಸ್ತಾನಾಗಿರುವ ನಾಟಾಗಳ ಮೌಲ್ಯಮಾಪನ ಮಾಡಿಕೊಡಲಾಗುವುದು ಎಂದರು.

Advertisement

ಪರಿಶೀಲನೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಶೋಕ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಂ, ಸದಸ್ಯರಾದ ಕೆ.ಆರ್. ಗಣೇಶ್ ಪ್ರಸಾದ್, ಮೈತ್ರಿ ಪಾಟೀಲ್, ಶ್ರೀರಾಮು, ಸತೀಶ್ ಮೊಗವೀರ ಹಾಗೂ ಕಂದಾಯ ಮತ್ತು ನಗರಸಭೆಯ ಅಧಿಕಾರಿಗಳು ಇದ್ದರು. ನಗರಸಭೆಯ ಮಳಿಗೆ ಹರಾಜಾಗದಿರುವುದನ್ನು ಅರಿತು, ರಾಜಾರೋಷವಾಗಿ ಬೀಗ ಒಡೆದು ನಾಟಾ ಸಂಗ್ರಹಿಸಿರುವವರು ಪ್ರಭಾವಿಗಳೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next