Advertisement

Sagara: ಹಲ್ಲೆ ಪ್ರಕರಣ… ಆರೋಪಿಗಳ ಮೇಲೆ ಶೀಘ್ರ ಕ್ರಮಕ್ಕೆ ಹವ್ಯಕ ಪ್ರಮುಖರಿಂದ ಆಗ್ರಹ

05:03 PM Nov 07, 2023 | Team Udayavani |

ಸಾಗರ: ತಾಲೂಕಿನ ಕಸಬಾ ಹೋಬಳಿ ಮೆಳವರಿಗೆ ಗ್ರಾಮದ ಸೂರ್ಯನಾರಾಯಣ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳವಾರ ತಾಲೂಕು ಬ್ರಾಹ್ಮಣ ಸಮಾಜ, ರಾಮಚಂದ್ರಾಪುರ ಮಠದ ಸಾಗರ ಪರಿಷತ್ ಮೊದಲಾದ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ, ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

Advertisement

ಡಿವೈಎಸ್‌ಪಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಳದಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ರಮೇಶ್, ನ. ೫ರಂದು ಸೂರ್ಯನಾರಾಯಣ ಅವರು ರಾತ್ರಿ 7- 45ರ ಸುಮಾರಿಗೆ ಡೈರಿಗೆ ಹೋಗಿ ವಾಪಾಸ್ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ದೀಪಕ್, ರಮೇಶ್, ಅಮಿತ್, ನಾಗರಾಜ್ ಮತ್ತು ಅಣ್ಣಪ್ಪ ಎಂಬುವವರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಮೆಳವರಿಗೆಯಲ್ಲಿ ಸೂರ್ಯನಾರಾಯಣ ಅವರು 7.5 ಎಕರೆ ಜಮೀನು ಹೊಂದಿದ್ದು ಅಲ್ಲಿ ಕೃಷಿ ಮಾಡಲು ಗ್ರಾಮದ ಕೆಲವರು ತೊಂದರೆ ಕೊಟ್ಟಿದ್ದಾರೆ. ಈ ಕಾರಣ ಸೂರ್ಯನಾರಾಯಣರು ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟ ಮಾಡಿದ್ದೇ ತಪ್ಪು ಎನ್ನುವಂತೆ ಕೆಲವರು ವರ್ತನೆ ಮಾಡಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ಕೊಟ್ಟರೂ ಕ್ಷಿಪ್ರವಾಗಿ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಹಲ್ಲೆ ಮಾಡಿದವರಿಂದಲೇ ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸೂರ್ಯನಾರಾಯಣ ಅವರ ಕುಟುಂಬಕ್ಕೆ ಗ್ರಾಮದಲ್ಲಿ ರಕ್ಷಣೆ ಇಲ್ಲದಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಮನವಿ ಮಾಡಿದರು.

ಸೂರ್ಯನಾರಾಯಣ ಅವರ ಪತ್ನಿ ರೂಪ ಮಾತನಾಡಿ, ಗ್ರಾಮದ ಕೆಲವರ ದೌರ್ಜನ್ಯದಿಂದ ನಮ್ಮ ಜಮೀನು ಸಾಗುವಳಿ ಮಾಡಲು ಸಾಧ್ಯವಾಗದೆ ಬೇರೆಯವರಿಗೆ ಮಾರಾಟ ಮಾಡಿದ್ದೇವೆ. ಇದನ್ನು ಪ್ರಶ್ನಿಸಿ ನ. 5ರಂದು ಕೆಲವರು ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ವಿಡಿಯೋ ಮಾಡಲು ಹೋದಾಗ ಗಂಡ ಮತ್ತು ಮಗನನ್ನು ತೆಗೆದು ಬಿಡುತ್ತೇವೆ ಎಂದು ಬೆದರಿಕೆ ಹಾಕಿ ನನ್ನ ಮೇಲೂ ಹಲ್ಲೆ ನಡೆಸಿದ್ದಾರೆ. ನಮಗೆ ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು ಪೊಲೀಸರು ಸೂಕ್ತ ರಕ್ಷಣೆ ನೀಡುವ ಜೊತೆಗೆ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ಪೊಲೀಸರು ಮೃಧು ಧೋರಣೆಯನ್ನು ಕೈಬಿಟ್ಟು ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಸೂರ್ಯನಾರಾಯಣ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವಾಗ ಪೊಲೀಸರು ತಾರತಮ್ಯ ನೀತಿ ಅನುಸರಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಕ್ಷಣ ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಈ ವಿಷಮತನ ವೈರಸ್‌ನಂತೆ ಹಬ್ಬುತ್ತದೆ ಎಂದು ಆಗ್ರಹಿಸಿದರು.

ರಕ್ಷಣೆಯ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ತಾಲೂಕಿನಲ್ಲಿ ಯಾವುದೇ ಜನಾಂಗಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಘಟನೆ ನನ್ನ ಗಮನಕ್ಕೆ ಬಂದ ತಕ್ಷಣ ಸೂಕ್ತ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಸೂರ್ಯನಾರಾಯಣ ಅವರ ಕುಟುಂಬಕ್ಕೆ ಎಲ್ಲ ರೀತಿಯ ರಕ್ಷಣ ಕೊಡಲಾಗುತ್ತದೆ. ತಪ್ಪಿತಸ್ತರಿಗೆ ಕಾನೂನುಪ್ರಕಾರ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು.

Advertisement

ಬ್ರಾಹ್ಮಣ ಸಮುದಾಯದ ಪ್ರಮುಖರಾದ ಅ.ಪು.ನಾರಾಯಣಪ್ಪ, ಎಲ್.ಟಿ.ತಿಮ್ಮಪ್ಪ, ಎಂ.ಜಿ.ರಾಮಚಂದ್ರ, ಹು.ಭಾ.ಅಶೋಕ್, ವೆಂಕಟರಾವ್, ಗಣೇಶ್ ಪ್ರಸಾದ್, ಕೆ.ಸಿ.ದೇವಪ್ಪ, ಗಿರೀಶ್ ಹಕ್ರೆ, ಕೃಷಿ ಇಲಾಖೆಯ ಅಧಿಕಾರಿಯಾದ ಬಿ.ಆರ್. ವಿನಾಯಕರಾವ್, ವಿ.ಜಿ.ಶ್ರೀಧರ್, ವೆಂಕಟರಾವ್ ಕಾನುಗೋಡು, ಶ್ರೀಧರ ಸಾಗರ್ ರಾಜಶೇಖರ್ ಹಂದಿಗೋಡು, ರಾಧಾಕೃಷ್ಣ ಬಂದಗದ್ದೆ, ದೇವೇಂದ್ರ ಬೆಳೆಯೂರು, ಶ್ರೀಪಾದ ಎಂ.ಎನ್., ಪ್ರಸನ್ನ ಚಿಪ್ಳಿ, ಸುಬ್ರಮಣ್ಯ ಸಿ.ಎನ್. ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Timed Out ಇದೇ ಮೊದಲಲ್ಲ; ಸಂಧಿವಾತದಿಂದ ಬಳಲುತ್ತಿದ್ದ ಬ್ಯಾಟರ್ ಗೆ ಔಟ್ ಕೊಟ್ಟಿದ್ದ ಅಂಪೈರ್

Advertisement

Udayavani is now on Telegram. Click here to join our channel and stay updated with the latest news.

Next