Advertisement

Sagara: ಕಾಂತರಾಜ ವರದಿಯ ಜಾರಿಗೆ ಒತ್ತಾಯ; ಹಿಂದುಳಿದ ಜನಜಾಗೃತಾ ವೇದಿಕೆ ಧರಣಿ

03:39 PM Nov 02, 2023 | Team Udayavani |

ಸಾಗರ: ಎಚ್.ಕಾಂತರಾಜ ವರದಿಯನ್ನು ಜಾರಿಗೆ ತರಲು ಆಗ್ರಹಿಸಿ ನ.2ರ ಗುರುವಾರ ಹಿಂದುಳಿದ ಜನಜಾಗೃತಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಲು ಕಾಂತರಾಜ ವರದಿ ಪೂಕರವಾಗಿದೆ. ಈ ಹಿನ್ನೆಲೆಯಲ್ಲಿ ಜಾತಿಗಣತಿ ಹೊರಗೆ ಬಂದರೆ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ. ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರನ್ನು ವೋಟ್‌ಬ್ಯಾಂಕ್ ಎಂದು ಪರಿಗಣಿಸುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಶಾಶ್ವತ ಹಿಂದುಳಿದ ವರ್ಗವನ್ನು ಸುಪ್ರೀಂಕೋರ್ಟ್ ಆದೇಶದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಚಿಸಿದ್ದರು. ಇದಕ್ಕೆ ಶಾಸನಬದ್ಧ ಸ್ಥಾನಮಾನವನ್ನು ಸಹ ನೀಡಲಾಗಿದೆ. ಆದರೆ ಆಯೋಗ ನೀಡಿದ ವರದಿಯನ್ನು ಜಾರಿಗೆ ತರದಿರುವ ಕ್ರಮ ಕಾನೂನುಬಾಹಿರವಾಗಿದೆ ಎಂದರು.

ಸುಮಾರು 165 ಕೋಟಿ ರೂ. ಸಮೀಕ್ಷೆಗಾಗಿ ಖರ್ಚು ಮಾಡಲಾಗಿದೆ. ಐದಾರು ವರ್ಷ ಕಷ್ಟಪಟ್ಟು ಸಮೀಕ್ಷೆ ನಡೆಸಿ, ರಾಜ್ಯದ ಜನರ ದುಡ್ಡಲ್ಲಿ ಆಯೋಗ ಕೆಲಸ ಮಾಡಿದೆ. ೧೫ ಸಾವಿರ ನೌಕರರು ಮನೆಮನೆಗೆ ಹೋಗಿ ಕೆಲಸ ಮಾಡಿದ್ದಾರೆ. ಕಾಂತರಾಜ ವರದಿ ಸಾಮಾಜಿಕ ಮತ್ತು ಶೈಕ್ಷಣಿಕ ಜೊತೆಗೆ ಆರ್ಥಿಕ ಸ್ಥಿತಿಗತಿಗಳನ್ನು ಎತ್ತಿ ಹಿಡಿದಿದೆ. ಕಳೆದ ಐದಾರು ತಿಂಗಳಿನಿಂದ ವರದಿ ಜಾರಿಗೆ ಒತ್ತಾಯಿಸಿ ವೇದಿಕೆ ಪ್ರತಿಭಟನೆ ನಡೆಸುತ್ತಿದೆ. ಕೆಲವರು ಮಠದ ಸ್ವಾಮಿಗಳನ್ನು ಮುಂದಿಟ್ಟುಕೊಂಡು ವರದಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಕಾಂತರಾಜ ವರದಿಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಪ್ರೊ. ಎಚ್.ರಾಚಪ್ಪ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಮೀಕ್ಷೆಗೆ ಆದೇಶ ಮಾಡಿದ್ದರು. ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಯಾರೂ ವರದಿಯನ್ನು ಜಾರಿಗೆ ತರುವ ಪ್ರಯತ್ನ ನಡೆಸಿಲ್ಲ. ಎಲ್ಲರೂ ಸಮೀಕ್ಷೆಯನ್ನು ಶೈತ್ಯಾಗಾರದಲ್ಲಿ ಇರಿಸಿದ್ದರು. ಹಿಂದುಳಿದ ವರ್ಗದವರು ಶೇ. 65ರಷ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸಿಕ್ಕಿದೆ. ನಮ್ಮ ಹಕ್ಕೊತ್ತಾಯ ಶಾಸಕ ಮತ್ತು ಸಂಸದ ಸ್ಥಾನಕ್ಕೂ ಮೀಸಲಾತಿ ಬೇಕು ಎನ್ನುವುದಾಗಿದೆ ಎಂದರು.

ಧರಣಿಯಲ್ಲಿ ಅಮೃತರಾಸ್, ಪರಮೇಶ್ವರ ದೂಗೂರು, ಮಹ್ಮದ್ ಖಾಸಿಂ, ಸುಂದರ ಸಿಂಗ್, ರೇವಪ್ಪ ಹೊಸಕೊಪ್ಪ, ಕನ್ನಪ್ಪ, ಜನಮೇಜಿರಾವ್, ವಿಲ್ಸನ್, ವಸಂತ ಶೇಟ್, ಬಸವರಾಜ್, ವಕ್ವಾಡಿ ಗಣೇಶ್ ಆಚಾರ್, ಮಂಜುನಾಥ ಆಚಾರ್,  ನಾರಾಯಣ ಅರಮನೆಕೇರಿ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next