ಸಾಗರ: ರಾಜ್ಯದ ವಿವಿಧೆಡೆ ಕೋವಿಡ್ ಕಾರಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಲವು ಪೋಷಕರು ಹಿಂದೇಟು ಹಾಕುವ ಪ್ರಕರಣ ನಡೆಯುತ್ತಿದ್ದರೆ, ಸಾಗರದಲ್ಲಿ ಹೊಸದಾಗಿ ಆರಂಭವಾಗಿರುವ ಎಂಎಸ್‌ಐಎಲ್ ಮದ್ಯದಂಗಡಿಯ ಕಾರಣಕ್ಕೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ನೇರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ತಿಳಿಸಿದ ಘಟನೆ ಸಾಗರದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳಿಕೊಪ್ಪ ಗ್ರಾಮದಲ್ಲಿ ಶಾಲಾ ಸಂಪರ್ಕ ರಸ್ತೆಯಲ್ಲಿ ಎಂಎಸ್‌ಐಎಲ್ ಮದ್ಯದಂಗಡಿಯನ್ನು ಗಣಪತಿ ಹಬ್ಬದ ದಿನದಿಂದ ಆರಂಭಿಸಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ಗ್ರಾಮದ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ತೀರ್ಮಾನ ಮಾಡಿರುವುದನ್ನು ಶನಿವಾರ ಸಾಗರಕ್ಕೆ ಭೇಟಿ ನೀಡಿದ್ದ ಬಿ.ಸಿ.ನಾಗೇಶ್ ಅವರಿಗೆ ಮನವಿ ರೂಪದಲ್ಲಿ ಪರೋಕ್ಷ ಬೆದರಿಕೆಯನ್ನು ಗ್ರಾಮಸ್ಥರು ಮುಟ್ಟಿಸಿದರು.
ಇದನ್ನೂ ಓದಿ:ಮೂಷಿಕನಿಗೆ ವಿಶೇಷ ಪ್ರಾರ್ಥನೆ| ನೇಕಾರರಿಂದ ಹಿಂದಿನಿಂದಲೂ ಇಲಿಗಳಿಗೆ ಪೂಜೆ |
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ಬೆಳ್ಳಿಕೊಪ್ಪ ಗ್ರಾಮದಲ್ಲಿ ಮದ್ಯದಂಗಡಿ ಸ್ಥಾಪನೆಯನ್ನು ವಿರೋಧಿಸಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘಗಳು ಹಿಂದೆ ಪ್ರತಿಭಟನೆ ಮಾಡಿ ಪಂಚಾಯ್ತಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದರು. ಆದರೆ ಅಂದಿನ ಉಪವಿಭಾಗಾಧಿಕಾರಿ ಪ್ರಸನ್ನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮದ್ಯದಂಗಡಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಭೂ ಪರಿವರ್ತನೆ ಆಗದ ಆ ಜಾಗದಲ್ಲಿ ಮದ್ಯದಂಗಡಿಯ ಸ್ಥಾಪನೆ ಕಾನೂನುಬಾಹಿರವೂ ಹೌದು. ಆದರೆ ನಮ್ಮ ಎಲ್ಲಾ ರೀತಿಯ ಮನವಿಗಳು ನಿಷ್ಪಲವಾಗಿರುವುದರಿಂದ ಮದ್ಯದಂಗಡಿಯನ್ನು ಮುಚ್ಚುವವರೆಗೆ ಗ್ರಾಮದ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ್, ರವಿಚಂದ್ರ ಮುಂತಾದವರು ಹಾಜರಿದ್ದರು.