ಸಾಗರ: ತಾಲೂಕಿನಲ್ಲಿ ಸೋಮವಾರ ಪ್ರೌಢಶಾಲೆಗಳಲ್ಲಿ 9 ಹಾಗೂ 10ನೇ ತರಗತಿಗಳ ಪಾಠಪ್ರವಚನಗಳು ಶಾಂತಿಯುತವಾಗಿ ನಡೆದಿವೆ. ನಗರದ ಒಂದೆರಡು ಖಾಸಗಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದು, ತರಗತಿಯ ಪ್ರವೇಶಕ್ಕೆ ಸಮವಸ್ತ್ರದ ಕಡ್ಡಾಯದ ಸೂಚನೆ ತಿಳಿಸಿದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆ ಮರಳಿದ್ದಾರೆ. ಕೆಲವು ಶಾಲೆಗಳಲ್ಲಿ ಅಂತಹ ವಿದ್ಯಾರ್ಥಿನಿಯರು ಶಾಲಾವರಣಕ್ಕೆ ಬಾರದೆ ಗೈರಾಗಿದ್ದರು. ಕೆಲವೆಡೆ ಶಿಕ್ಷಕರ ಸೂಚನೆಯ ನಂತರ ಹಿಜಾಬ್ ತೆಗೆದು ತರಗತಿಯಲ್ಲಿ ಪಾಲ್ಗೊಂಡ ಪ್ರಕರಣಗಳೂ ನಡೆದಿವೆ.
ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಕಾವಲಿನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಶಾಲೆಗಳಲ್ಲಿ ಗೇಟ್‌ನಲ್ಲಿಯೇ ಮಕ್ಕಳನ್ನು ಪರಿಶೀಲಿಸಿ ಪ್ರವೇಶ ಅವಕಾಶ ಕೊಡಲಾಗಿದೆ. ಓರ್ವ ವಿದ್ಯಾರ್ಥಿಯ ಚೀಲದಲ್ಲಿ ಕೇಸರಿ ಶಾಲು ಸಿಕ್ಕಿದ ಘಟನೆ ನಡೆದಿದ್ದರೂ, ಆತ ಆಕಸ್ಮಿಕವಾಗಿ ಅದು ತನ್ನ ಚೀಲವನ್ನು ಸೇರಿತ್ತು ಎಂದು ಸಮಜಾಯಿಷಿ ನೀಡಿದ್ದಾನೆ.
ತಾಲೂಕಿನ ಹಲವು ಪ್ರೌಢಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಬಿಂಬ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಪತ್ರಿಕೆಯೊಂದಿಗೆ ಅವರು ಮಾತನಾಡಿ, ನಗರದ 2 ಖಾಸಗಿ ಶಾಲೆಗಳಲ್ಲಿ 18ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದರು. ಸಮವಸ್ತ್ರದ ಕಡ್ಡಾಯ ಸೂಚನೆ ಬಗ್ಗೆ ತಿಳಿಸಿದ ನಂತರ ಒಂದು ಖಾಸಗಿ ಶಾಲೆಯ 8 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಮತ್ತೊಂದು ಖಾಸಗಿ ಶಾಲೆಯ 3 ವಿದ್ಯಾರ್ಥಿನಿಯರು ಮನೆಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಪ್ರತ್ಯೇಕವಾಗಿ ಕೂರಿಸಲಾಗಿತ್ತು. ತರಗತಿಯ ಪ್ರವೇಶ ನೀಡಲಾಗಿಲ್ಲ. ತಾಲೂಕಿನ ಆವಿನಹಳ್ಳಿಯಲ್ಲಿ ಸಹ ಹಿಜಾಬ್ ಧರಿಸಿಕೊಂಡು ಬಂದಿದ್ದರು. ಮನವರಿಕೆಯ ನಂತರ ಹಿಜಾಬ್ ತೆಗೆದು ತರಗತಿಯಲ್ಲಿ ಭಾಗವಹಿಸಿದರು. ಸರಕಾರದ ಸೂಚನೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ನಾಳೆಯೂ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಹಿಜಾಬ್ ಅಥವಾ ಕೇಸರಿ ಶಾಲಿಗೆ ಶಾಲಾವರಣದಲ್ಲಿ ಅವಕಾಶವಿಲ್ಲ ಎಂದರು.
ಇದನ್ನೂ ಓದಿ :ಬೆಳ್ಳಂಬೆಳಗ್ಗೆ ಆಕಾಶದಲ್ಲಿ ವಿಚಿತ್ರ ಬೆಳಕಿನಾಟ : ಬೆರಗಾದ ಜನತೆ