ಸಾಗರ : ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಗಳನ್ನು ವಿವಿಧ ಆಪ್‌ಗಳ ತಂತ್ರಾಂಶಗಳ ಮೂಲಕ ತುಂಬಿಸಲು ಸಮಸ್ಯೆಯಾಗುತ್ತಿದ್ದು, ಶಿಕ್ಷಕರನ್ನು ಹೆಚ್ಚುವರಿ ಕರ್ತವ್ಯಗಳಿಂದ ಮುಕ್ತಗೊಳಿಸಿ, ಬೋಧನಾ ಕಾರ‍್ಯಕ್ಕೆ ಸೂಕ್ತ ಸಮಯಾವಕಾಶ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪದಾಧಿಕಾರಿಗಳು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ಶನಿವಾರ ಮನವಿ ಸಲ್ಲಿಸಿದರು.
2021- 22 ನೇ ಶೈಕ್ಷಣಿಕ ಸಾಲಿನಲ್ಲಿ ಓದು ಕರ್ನಾಟಕ, ನೂರು ದಿನಗಳ ಓದುವ ಆಂದೋಲನ, ಎಸ್‌ಡಿಎಂಸಿ ಸಭೆಗಳು, ಡಿಬಿಟಿ ಮುಂತಾದ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಗಳನ್ನು ಹೊಸ ಹೊಸ ಆಪ್ ಮುಖಾಂತರ ಇಲಾಖೆಗೆ ಮುಖ್ಯ ಶಿಕ್ಷಕರು ರವಾನಿಸಬೇಕಾಗಿದೆ. ಈ ಕಾರ‍್ಯದ ನಿರ್ವಹಣೆಗೆ ಮುಖ್ಯಶಿಕ್ಷಕರಿಗೆ ಹಲವು ತಾಂತ್ರಿಕ ಮತ್ತು ಭೌತಿಕ ತೊಂದರೆಗಳಾಗುತ್ತಿವೆ. ಇಂತಹ ಹೆಚ್ಚುವರಿ ಕಾರ‍್ಯ ನಿರ್ವಹಣೆಯಿಂದಾಗಿ ತರಗತಿಯ ಬೋಧನಾ ಮತ್ತು ಕಲಿಕಾ ಸಮಯದ ಮೇಲೆ ಅತೀವ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಂತ್ರಿಕ ಕಾರ‍್ಯಭಾರಗಳನ್ನು ಮುಖ್ಯಶಿಕ್ಷಕರಿಂದ ಮುಕ್ತಗೊಳಿಸಿ, ಶಿಕ್ಷಕರು ನೀಡುವ ಹಾರ್ಡ್ ಕಾಪಿ, ಸಾಫ್ಟ್ ಕಾಪಿಗಳ ಆಧಾರದ ಮೇಲೆ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಗೆ ಅಥವಾ ಸಮೂಹ ಸಂಪನ್ಮೂಲ ಕೇಂದ್ರಗಳಿಗೆ ಇಂತಹ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಯನ್ನು ಕೊಡಬೇಕು. ಈ ಸಂಬಂಧ ಕೇಂದ್ರಗಳಿಗೆ ಅಗತ್ಯ ತಾಂತ್ರಿಕ, ಆರ್ಥಿಕ ಸೌಲಭ್ಯ ಒದಗಿಸಬೇಕು. ಸಿಆರ್‌ಪಿ, ಬಿಆರ್‌ಸಿ ವ್ಯಾಪ್ತಿಗೆ ತಂದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಕಲಿಕಾ ಸಮಯದ ಸದುಪಯೋಗ ಆಗುವಂತೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ : ಪ್ರಧಾನಿಯಿಂದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ
ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಎಂ.ವೈ.ಮೂರ್ತಿ, ಶಾರದ, ಕೆ.ಜಗನ್ನಾಥ್, ತಿಮ್ಮಪ್ಪ, ಮಂಜುಳ, ಮಾಲತೇಶಪ್ಪ, ಸತೀಶ್ ನಾಯ್ಕ್ ಮತ್ತಿತರ ಶಿಕ್ಷಕರು ಹಾಜರಿದ್ದರು.