ಸಾಗರ: ಆರೋಗ್ಯ ಇಲಾಖೆಯ ಯಡವಟ್ಟಿನಿಂದ ಕೋವಿಡ್ ಮೃತರಿಗೆ ಸರ್ಕಾರ ಒದಗಿಸುವ ಪರಿಹಾರ ಧನಕ್ಕೆ ಜೀವಂತವಿರುವವನಿಗೆ ಫೋನ್ ಮಾಡಿ, ಸತ್ತಿರುವ ನಿಮ್ಮ ಬಗ್ಗೆ ಮಾಹಿತಿ ಕೊಡಿ ಎಂದು ಕೇಳುವಂತಹ ವಿಚಿತ್ರ ಸನ್ನಿವೇಶ ಸಾಗರದಲ್ಲಿ ನಡೆದಿರುವುದು ತುಸು ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ಘೋಷಿಸಿರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ತಹಶೀಲ್ದಾರರ ಕಚೇರಿಗೆ ಕೋವಿಡ್ 19 ಸೋಂಕಿತ ಮೃತರ ಪಟ್ಟಿಯನ್ನು ಕೊಟ್ಟಿದೆ. ಇದರಲ್ಲಿ ಮೃತಪಟ್ಟವರ ಹೆಸರು, ವಿವರ ಹಾಗೂ ಕುಟುಂಬದ ಫೋನ್ ನಂಬರ್ ಹೊರತಾದ ಹೆಚ್ಚಿನ ವಿವರಗಳಿಲ್ಲ. ಈ ಕಾರಣ ತಹಶೀಲ್ದಾರರ ಕಚೇರಿಯ ಸಿಬ್ಬಂದಿ ಕುಟುಂಬಕ್ಕೆ ಮಾಹಿತಿ ನೀಡುವುದು ಹಾಗೂ ಡೆತ್ ಸರ್ಟಿಫಿಕೇಟ್ ಮೊದಲಾದ ದಾಖಲೆ ಸಹಿತ ಅಧಿಕೃತವಾದ ಅರ್ಜಿ ಸ್ವೀಕರಿಸಬೇಕಿರುವುದರಿಂದ ದೂರವಾಣಿ ಕರೆ ಮಾಡಿದಾಗ ಮೇಲಿನ ಯಡವಟ್ಟು ನಡೆದಿದೆ.
ತಾಲೂಕಿನ ಸೂರನಗದ್ದೆಯ ರುದ್ರೇಶ್ (ಹೆಸರು ಬದಲಾಯಿಸಲಾಗಿದೆ) ಕಳೆದ ವರ್ಷ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ನಂತರದಲ್ಲಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರೂ ಆಗಿದ್ದರು. ತಹಶೀಲ್ದಾರರ ಕಚೇರಿಯಿಂದ ಸಿಬ್ಬಂದಿ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಕರೆ ಮಾಡಿ, ನಿಮ್ಮ ಕುಟುಂಬದ ರುದ್ರೇಶ್ ಹೆಸರಿನವರು ಮೃತಪಟ್ಟಿರುವುದರಿಂದ ರಾಜ್ಯ ಸರ್ಕಾರ ಒಂದು ಲಕ್ಷ ಹಾಗೂ ಕೇಂದ್ರ ಸರ್ಕಾರ 50 ಸಾವಿರ ರೂ.ಗಳನ್ನು ಕೊಡುತ್ತಿದೆ. ಈ ಮೊತ್ತವನ್ನು ಪಡೆಯಲು ನೀವು ಮೃತರ ಡೆತ್ ಸರ್ಟಿಫಿಕೇಟ್ ಸೇರಿದಂತೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಮೃತ ವ್ಯಕ್ತಿಯ ಹೆಸರು ಹೇಳಿ ಮಾಹಿತಿ ಪಡೆದುಕೊಳ್ಳುವ ಉದ್ದೇಶವನ್ನೂ ವಿವರಿಸಿದ್ದಾರೆ.
ಇದನ್ನೂ ಓದಿ : ಪಿಡಿಓ ಕಿರುಕುಳ ; 2ನೆ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ
ಕರೆ ಸ್ವೀಕರಿಸಿದ ವ್ಯಕ್ತಿ ಮಾಹಿತಿ ಕೊಡುವ ಬದಲು ಏಕಾಏಕಿ ರೇಗಾಡಿದ್ದಾರೆ. ರುದ್ರೇಶ್ ಕುಟುಂಬದವರಿಗೆ ಎಂದು ಮಾಡಲಾದ ಕರೆ ನೇರವಾಗಿ ರುದ್ರೇಶ್ ಅವರಿಗೇ ಹೋಗಿದೆ. ಅವರೇ ಕರೆ ಸ್ವೀಕರಿಸಿ ತಮ್ಮ ಸಾವಿನ ಸುದ್ದಿ ಕೇಳುವಂತಾಗಿದೆ! ಮೃತಪಟ್ವರಿಗೆ ಪರಿಹಾರ ಮೊತ್ತ ಕೊಡುವ ಸುದ್ದಿ ಹೇಳಿದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಸಂಪೂರ್ಣವಾಗಿ ಸುಸ್ತಾಗಿದ್ದಾರೆ. ನಂತರದಲ್ಲಿ ಮಾಹಿತಿಗಳನ್ನು ವಿಶ್ಲೇಷಿಸಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಾಡಿದ ತಪ್ಪನ್ನು ಅರಿತು, ದಾಖಲೆಗಳಲ್ಲಿ ಮೃತ ಎಂದಿದ್ದ ವ್ಯಕ್ತಿಯನ್ನು ‘ಅಲೈವ್’ ಎಂದು ಘೋಷಿಸಲಾಗಿದೆ!