Advertisement
ನಗರದ ಬಹುತೇಕ ಮತಗಟ್ಟೆಯ ಹೊರಗೆ ಮತದಾರರಿಗಿಂತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರೇ ಜಮಾಯಿಸಿಕೊಂಡಿದ್ದು ಕಂಡು ಬಂದಿತ್ತು. ಬರುವ ಮತದಾರರ ಬಳಿ ಅಭ್ಯರ್ಥಿಗಳು ಮತಗಟ್ಟೆ ಬಳಿಯೇ ನಿಂತು ಮತಯಾಚನೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿತ್ತು. ಚುನಾವಣಾ ಆಯೋಗದ ಅಧಿಕಾರಿಗಳು ಹಿಂದಿನ ದಿನಗಳಲ್ಲಿಯೇ ಮನೆಬಾಗಿಲಿಗೆ ಮತದಾನದ ಚೀಟಿ ವಿತರಿಸಬೇಕು ಎಂದು ಹೇಳಲಾಗಿದ್ದರೂ ಬಹುತೇಕ ಕಡೆ ಮತಗಟ್ಟೆಯ ಹೊರಭಾಗದಲ್ಲಿ ಚೀಟಿ ವಿತರಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Related Articles
Advertisement
ಇನ್ನು ಕೆಲವು ಮತಗಟ್ಟೆಗಳಲ್ಲಿ ಅಂಗವಿಕಲ ಮತದಾರರು ಮತದಾನ ಮಾಡಲು ವೀಲ್ಚೇರ್‌ಗಳನ್ನು ಇರಿಸಲಾಗಿತ್ತಾದರೂ ಮತಗಟ್ಟೆ ಪ್ರವೇಶ ಮಾಡುವ ಮೆಟ್ಟಿಲುಗಳಿಗೆ ಸರಿಯಾದ ರ್‍ಯಾಂಪ್ ವ್ಯವಸ್ಥೆ ಮಾಡದೆ ಇರುವುದರಿಂದ ಅಂಗವಿಕಲ ಮತದಾರರನ್ನು ಮತದಾನಕ್ಕೆ ಕರೆದೊಯ್ಯಲು ಸಂಬಂಧಿಕರು ಸಮಸ್ಯೆ ಎದುರಿಸುವಂತೆ ಆಯಿತು. ವಾರ್ಡ್ ನಂ. 5ರಲ್ಲಿ ಅಂಗವಿಕಲರೊಬ್ಬರನ್ನು ರ್‍ಯಾಂಪ್ ಮೂಲಕ ವೀಲ್ಚೇರ್‌ನಲ್ಲಿ ಮೇಲೆ ಹತ್ತಿಸುವಾಗ ಬಿದ್ದಿರುವ ಘಟನೆ ಸಹ ನಡೆದಿದೆ.
31 ವಾರ್ಡ್‌ಗಳಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ನಕಲಿ ಮತದಾರರನ್ನು ಪತ್ತೆ ಹಚ್ಚುವುದೇ ಅಭ್ಯರ್ಥಿಗಳಿಗೆ ಸವಾಲಿನ ಕೆಲಸವಾಗಿತ್ತು. ವಾರ್ಡ್ ನಂ. 17ರ ಬೆಳಲಮಕ್ಕಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯಲ್ಲಿ 100ಕ್ಕೂ ಹೆಚ್ಚು ಮತದಾರರನ್ನು ಅನಧಿಕೃತವಾಗಿ ಸೇರ್ಪಡೆ ಮಾಡಿರುವುದರ ಕುರಿತು ವ್ಯಾಪಕ ವಿರೋಧ ವ್ಯಕ್ತವಾಯಿತು.
ಈ ಭಾಗದ ಬಿಜೆಪಿ ಮುಖಂಡರು ಸುಮಾರು 50 ಜನರ ಪಟ್ಟಿ ಮಾಡಿ ಇವರು ನಮ್ಮ ವಾರ್ಡ್‌ನ ಮತದಾರರು ಅಲ್ಲ. ಜೊತೆಗೆ ಇವರು ಸಾಗರದಲ್ಲಿ ವಾಸವಿಲ್ಲದೆ ಶಿಕಾರಿಪುರ, ಶಿರಾಳಕೊಪ್ಪ ಇನ್ನಿತರ ತಾಲೂಕಿನಲ್ಲಿ ವಾಸವಿದ್ದಾರೆ. ಆದರೆ ಇವರ ಮತ ಈ ವಾರ್ಡ್‌ಗೆ ಸೇರಿಕೊಂಡಿದೆ. ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆಲ್ಲಲು ಅನಧಿಕೃತವಾಗಿ ಕೆಲವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ದೂರಿದರು. ಈ ಬಗ್ಗೆ ಚುನಾವಣೆ ಅಧಿಕಾರಿಗಳಿಗೆ ದೂರು ನೀಡಿದ್ದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೌಡಿ ಶೀಟರ್‌ಗಳಿಂದ ಕಿರುಕುಳ: 30ನೇ ವಾರ್ಡಿನಲ್ಲಿ ರೌಡಿ ಶೀಟರ್‌ಗಳು ಪಕ್ಷದ ಅಭ್ಯರ್ಥಿಗಳಿಗೆ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು ಪೊಲೀಸ್ ರಕ್ಷಣೆ ಪಡೆಯಲಾಗಿದೆ. ಅವರ ಮೇಲೆ ಕ್ರಮಕ್ಕೂ ಒತ್ತಾಯಿಸಲಾಗಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪೂರಕವಾದ ವಾತಾವರಣವಿದೆ. ಪಕ್ಷವು 20ರಿಂದ 21 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.