ಸಾಗರ: ಸಾಗರ ನಗರಸಭೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿಯ ವ್ಯವಸ್ಥೆಯ ಏರಿಳಿತಗಳು ಹಾಲಿ ಸದಸ್ಯರನ್ನು ಮತ್ತೂಮ್ಮೆ ಅದೇ ವಾರ್ಡ್‌ನಿಂದ ಸ್ಪರ್ಧಿಸಲು ಅವಕಾಶ ನೀಡದೆ ಗೊಂದಲ ಉಂಟು ಮಾಡಿದ್ದು, ಹಲವಾರು ಹಾಲಿ ಸದಸ್ಯರು ಸ್ಪರ್ಧೆಯಿಂದಲೇ ಹೊರಗುಳಿಯುವಂತಾಗಿದೆ.
ಸಾಗರ ಪುರಸಭೆಯಿಂದ ನಗರಸಭೆ ಆದಾಗ ಮಹಿಳಾ ಮೀಸಲಾತಿಯು 11 ಸ್ಥಾನಗಳಿಗೆ ಇತ್ತು. ಈ ಬಾರಿ ಅದನ್ನು 15ಕ್ಕೆ ಹೆಚ್ಚಿಸಲಾಗಿದೆ. ಆದ್ದರಿಂದ ವಾರ್ಡ್‌ಗಳ ಮೀಸಲಾತಿಗಳು ಕೂಡ ಬದಲಾದವು. ಇದರಿಂದ ಹಾಲಿ ಸದಸ್ಯರಿಗೆ ಬೇರೆ ಬೇರೆ ವಾರ್ಡ್‌ಗಳಲ್ಲಿ ಟಿಕೆಟ್ ಕಲ್ಪಿಸಲು ಪಕ್ಷಗಳು ಪರದಾಡಿದ್ದರಿಂದ ಹಿಂದೆಂದೂ ಕಂಡರಿಯದಷ್ಟು ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಯಿತು.
ಕಾಂಗ್ರೆಸ್‌ನಿಂದ ಕಳೆದ ಬಾರಿ ಮೊದಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಐ.ಎನ್. ಸುರೇಶಬಾಬು ಕಣದಲ್ಲಿದ್ದರೆ ನಗರಸಭೆಯ ಕಳೆದ ಆಡಳಿತದ ಕೊನೆಯ ಅಧ್ಯಕ್ಷರಾಗಿದ್ದ ವೀಣಾ ಪರಮೇಶ್ವರ, ಅವರಿಗಿಂತ ಮೊದಲು ಅಧಿಕಾರ ಮಾಡಿದ್ದ ಬಿ.ಬಿ. ಫಸಿಹಾ ಮತ್ತು ಕಾಂಗ್ರೆಸ್ ಮೊದಲ ನಗರಸಭೆ ಅಧ್ಯಕ್ಷ ಖ್ಯಾತಿಯ ಗಣಾಧಿಧೀಶ ಟಿಕೆಟ್ ವಂಚಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಸೈಯದ್ ಇಕ್ಬಾಲ್, ಮರಿಯಾ ಲೀಮಾ, ಸರಸ್ವತಿ, ಗ್ರೇಸಿ ಡಯಾಸ್ ಅವಕಾಶ ವಂಚಿತರಾಗಿದ್ದಾರೆ.
ಕಾಗೋಡು ತಿಮ್ಮಪ್ಪ ಅವರು ಕಳೆದ ಬಾರಿ ಶಾಸಕರಾಗಿ ಸ್ಪೀಕರ್, ಸಚಿವ ಹುದ್ದೆಗಳ ಪ್ರಭಾವ ಹೊಂದಿದ್ದರೂ ಸಾಗರ ನಗರಸಭೆಯ ಅಧಿಕಾರದ ಕಚ್ಚಾಟ ತಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಐದು ವರ್ಷಗಳ ಅವಧಿಗೆ ಐವರು ಅಧ್ಯಕ್ಷರು, ಐವರು ಉಪಾಧ್ಯಕ್ಷರಾದರು. ಆಡಳಿತ ನಡೆಸುವುದಕ್ಕಿಂತ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಮಾಜಿ ಅಧ್ಯಕ್ಷರು ಎನ್ನಿಸಿಕೊಳ್ಳುವ ಗೌರವ ಪಡೆಯುವುದೇ ಹೆಚ್ಚುಗಾರಿಕೆ ಎನ್ನುವಂತಾಗಿತ್ತು.
ನಗರಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಎನ್. ಲಲಿತಮ್ಮ, ಎನ್. ಉಷಾ ಇಬ್ಬರೂ ಮತ್ತೆ ಚುನಾವಣಾ ಕಣದಲ್ಲಿದ್ದಾರೆ. ಲಲಿತಮ್ಮ ಈ ಹಿಂದೆ ಎರಡು ಬಾರಿ ಪುರಸಭಾ ಸದಸ್ಯರಾಗಿ ಕೆಲಸ ಮಾಡಿದ ಅನುಭವವಿದ್ದರೆ ಉಷಾ ಎರಡು ಸಲ ಪುರಸಭೆಗೆ ಆಯ್ಕೆಯಾಗಿ ಪುರಸಭಾ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಐ.ಎನ್. ಸುರೇಶಬಾಬು ಮೊದಲ ಬಾರಿ ಜನತಾದಳ, ಎರಡನೇ ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರೆ ಮೂರನೇ ಬಾರಿ ತಮ್ಮ ವಾರ್ಡ್‌ನಲ್ಲಿಯೇ ಹ್ಯಾಟ್ರಿಕ್‌ಗಾಗಿ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ. ಕಳೆದ ಬಾರಿ ನಗರಸಭೆಯಲ್ಲಿ ಸದಸ್ಯರಾಗಿದ್ದ ಸುಂದರಸಿಂಗ್, ಫ್ರಾನ್ಸಿಸ್ ಗೋಮ್ಸ್, ತಶ್ರೀಫ್ ಮೂರನೇ ಬಾರಿ ಅಖಾಡದಲ್ಲಿದ್ದರೆ ಒಂದು ಬಾರಿ ನಗರಸಭಾ ಸದಸ್ಯರಾಗಿದ್ದ ತಶ್ರೀಫ್ ಸಹೋದರ ಬಷೀರ್ ಕೂಡ ಕಣದಲ್ಲಿದ್ದಾರೆ. ಕಳೆದ ಬಾರಿ ಅವರು ಅನಿರೀಕ್ಷಿತವಾಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರವಿ ಜಂಬಗಾರು ವಿರುದ್ಧ ಪರಾಭವಗೊಂಡಿದ್ದರು. ನಗರಸಭೆಯ ಚುನಾವಣೆಯಲ್ಲಿ ಈ ಬಾರಿ ತಶ್ರೀಫ್ ಮತ್ತು ಬಷೀರ್ ಸಹೋದರರು ಕಣದಲ್ಲಿದ್ದು 23 ಮತ್ತು 24 ವಾರ್ಡ್‌ಗಳಲ್ಲಿ ಸ್ಪರ್ಧೆಯೊಡ್ಡಿದ್ದಾರೆ. ಇನ್ನು ಎನ್.ಜಿ.ಪೈ ಸಾಗರದ ಹಿರಿಯ ಕಾಂಗ್ರೆಸ್ಸಿಗರು. ಹಲವು ಬಾರಿ ಪುರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಇವರ ತಂದೆಯವರೂ ಕೂಡ ನಗರಸಭಾ ಅಧ್ಯಕ್ಷರಾಗಿ ಜನಮನ್ನಣೆ ಗಳಿಸಿದ್ದರು. ಮತ್ತೆ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ.
ಶಾಸಕ ಹಾಲಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಟಿ.ಡಿ. ಮೇಘರಾಜ್ ಕಳೆದ ನಗರಸಭೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದ ಸಮಯದಲ್ಲಿ ಪ್ರಥಮ ನಗರಸಭೆಯನ್ನು ಪ್ರಥಮವಾಗಿ ಬಿಜೆಪಿ ತೆಕ್ಕೆಗೆ ತಂದ ಕೀರ್ತಿ ಇವರದು. ಪುರಸಭಾ ಸದಸ್ಯರಾಗಿಯೂ ಚುನಾಯಿತರಾಗಿದ್ದ ಅವರು ಮತ್ತೂಮ್ಮೆ ನಗರಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಾಕಣದಲ್ಲಿದ್ದಾರೆ. ಬಿಜೆಪಿಯಲ್ಲಿ ನಗರಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಆರ್. ಶ್ರೀನಿವಾಸ್, ಅರವಿಂದ ರಾಯ್ಕರ್, ವಿ. ಮಹೇಶ್ ಎರಡನೇ ಬಾರಿ ಕಣದಲ್ಲಿದ್ದರೆ, ಎಸ್.ಎಲ್. ಮಂಜುನಾಥ್ ಎರಡು ಬಾರಿ ಜೆಡಿಎಸ್‌ನಿಂದ ಗೆಲುವು ಸಾಧಿಸಿ ಈ ಬಾರಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಎರಡು ಬಾರಿ ನಗರಸಭೆಯ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾದ ಸಂತೋಷ್ ಶೇಟ್ ಟಿಕೆಟ್ ವಂಚಿತರಾಗಿದ್ದಾರೆ.
ಈ ರೀತಿಯ ಟಿಕೆಟ್ ವಂಚನೆ ಬಂಡಾಯಕ್ಕೂ ಕಾರಣವಾಗಿದೆ. ಕಾಂಗ್ರೆಸ್‌ನ ಹಿಂದನ ಬಾರಿಯ ಸದಸ್ಯ ಶ್ರೀನಾಥ್, ನಾಮಕರಣ ಸದಸ್ಯರಾಗಿದ್ದ ತಾರಾಮೂರ್ತಿ, ನಿಸಾರ್ ಅಹಮದ್ ಕುಂಜಾಲಿ ಮೊದಲಾದ ಕಾಂಗ್ರೆಸ್ಸಿಗರು, ಎಸ್.ವಿ. ಕೃಷ್ಣಮೂರ್ತಿ, ಕಸ್ತೂರಿ ನಾಗರಾಜ್, ತುಕಾರಾಂ ಮೊದಲಾದ ಬಿಜೆಪಿ ಮಾಜಿ ಸದಸ್ಯರು ಕಣದಲ್ಲಿದ್ದಾರೆ.