Advertisement

ಕಾಮಗಾರಿ ತ್ವರಿತಕ್ಕೆ ಸೂಚನೆ

07:54 PM Feb 27, 2020 | Naveen |

ಸಾಗರ: ಮಾ. 31ರವರೆಗೆ ಅ ಧಿಕಾರಿಗಳು ಭಾನುವಾರ ಹೊರತುಪಡಿಸಿ ಕರ್ತವ್ಯದ ದಿನಗಳಲ್ಲಿ ರಜೆ ಹಾಕುವಂತಿಲ್ಲ. ಸರ್ಕಾರದಿಂದ ಬಂದಿರುವ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಮಾ. 31ರೊಳಗೆ ಪೂರೈಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಹಣ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ಸ್ಪಷ್ಟ ಸೂಚನೆ ನೀಡಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಚದರವಳ್ಳಿ ಶ್ರೀಧರ್‌ ಅವರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ವಿಶೇಷ ಬೈಕ್‌ ವಿತರಿಸಿ, ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಹಣವಿದ್ದೂ ಕಾಮಗಾರಿ ಮಾಡದೆ ಹೋದಲ್ಲಿ ಸಂಬಂಧಪಟ್ಟ ಇಂಜಿನಿಯರ್‌ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ತೆರೆಯಲು ಅವಕಾಶ ನೀಡಬೇಡಿ. ಶುದ್ಧವಾದ ಶರಾವತಿ ನೀರು ನಗರಕ್ಕೆ ಬರುತ್ತಿದ್ದು ಅದನ್ನು ನಮ್ಮೂರಿನ ಜನ ಕುಡಿಯಬೇಕು. ಅನಗತ್ಯವಾಗಿ ಬೋರ್‌ವೆಲ್‌ ಕೊರೆದು ಅಂತರ್ಜಲ ಬತ್ತಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಹೇಳಿದರು.

ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಪ್ರಮುಖವಾಗಿ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳು ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವ ಗಮನಕ್ಕೆ ತರಲಾಗುತ್ತದೆ. ಹಣವಿದ್ದೂ ಕೆಲಸ ಮಾಡದ ಸ್ಥಿತಿ ಕೆಲವು ಅರಣ್ಯಾ ಧಿಕಾರಿಗಳಿಂದ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಣಪತಿ ಕೆರೆ ಇಕ್ಕೆಲಗಳಲ್ಲಿ ಕೈಗೆತ್ತಿಕೊಂಡಿರುವ ಚಾನಲ್‌ ಕಾಮಗಾರಿಯನ್ನು ತಕ್ಷಣ ಮುಗಿಸಿ. ಜೊತೆಗೆ ಬಿ.ಎಚ್‌. ರಸ್ತೆಯ ಪಕ್ಕದಲ್ಲಿ ಬೃಹತ್‌ ಧ್ವಜಸ್ತಂಭ ನಿರ್ಮಾಣ ಕಾಲಮಿತಿಯೊಳಗೆ ಮುಗಿಸಿ ಮುಂದಿನ ಒಂದು ತಿಂಗಳಿನೊಳಗೆ ಲೋಕಾರ್ಪಣೆಗೊಳ್ಳುವಂತೆ ಆಗಬೇಕು. ಟ್ಯಾಗೂರ್‌ ಕಲ್ಚರಲ್‌ ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ತಕ್ಷಣ ಸಿದ್ದಪಡಿಸುವಂತೆ ನಗರಸಭೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

Advertisement

ಕೆಲವು ಕಡೆಗಳಲ್ಲಿ ಸಿ.ಸಿ. ಕ್ಯಾಮೆರಾ ಗುಣಮಟ್ಟದ ಮರುಪರಿಶೀಲನೆ ಅಗತ್ಯವಾಗಿದೆ. ಬೀದಿ ದೀಪ ಇಲ್ಲದ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಚಿತ್ರಗಳು ಸರಿಯಾಗಿ ಬರುತ್ತಿಲ್ಲ. ಅಂತಹ ಕಡೆಗಳಲ್ಲಿ ಬೀದಿದೀಪ ಅಳವಡಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು. ಮಾರ್ಚ್‌ ಕೊನೆ ವಾರದಲ್ಲಿ ಗಣಪತಿ ಜಾತ್ರೆ ನಡೆಯಲಿದ್ದು, ದೇವಸ್ಥಾನದ ಅಕ್ಕಪಕ್ಕ ಸ್ವತ್ಛಗೊಳಿಸುವುದು ಸೇರಿದಂತೆ ಮಾರಿಕಾಂಬಾ ಜಾತ್ರೆ ಯಶಸ್ಸುಗೊಂಡಂತೆ ಗಣಪತಿ ಜಾತ್ರೆ ಸಹ ಯಶಸ್ಸುಗೊಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು. ಮಾ. 10ಕ್ಕೆ ಆನಂದಪುರದ ಮಾರಿಜಾತ್ರೆ ಪ್ರಾರಂಭಗೊಳ್ಳಲಿದೆ. ಜಾತ್ರೆ ಪ್ರಾರಂಭಗೊಳ್ಳುವುದರೊಳಗೆ ಇಲ್ಲಿನ ಗಾಣಿಗನ ಕೆರೆಯನ್ನು ಸ್ವತ್ಛಗೊಳಿಸಬೇಕು. ಇದಕ್ಕಾಗಿ ಸರ್ಕಾರದಿಂದ 40 ಲಕ್ಷ ರೂ. ಹಣ ತಂದುಕೊಡಲಾಗಿದೆ. ಆದರೆ ಕೆರೆ ಸ್ವತ್ಛತಾ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಜಾತ್ರೆಯೊಳಗೆ ಕೆರೆ ಸ್ವಚ್ಛಗೊಳಿಸದೆ ಹೋದಲ್ಲಿ ನಿಮ್ಮ ತಲೆದಂಡವಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಾಹಣಾಧಿ ಕಾರಿ ಮಂಜುನಾಥ ಸ್ವಾಮಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್‌.ಕೆ. ನಾಗಪ್ಪ, ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ದಿನೇಶ್‌ ಕೆ., ಜಿಲ್ಲಾ ಪರಿಷತ್‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿ. ಲಕ್ಷ್ಮೀನಾರಾಯಣ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next