Advertisement

28.79 ಲಕ್ಷ ರೂ. ಸಾಲ ವಿನಾಯ್ತಿ ನೀಡಿದ ಕೆನರಾ ಬ್ಯಾಂಕ್‌

04:02 PM Jun 30, 2019 | Naveen |

ಸಾಗರ: ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೆನರಾ ಬ್ಯಾಂಕ್‌ನ ಕ್ಷೇತ್ರೀಯ ಕಾರ್ಯಾಲಯ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 70 ಪ್ರಕರಣಗಳು ಇತ್ಯರ್ಥಗೊಂಡಿವೆ.

Advertisement

ವಿವಿಧ ಯೋಜನೆಗಳಡಿ ಸಾಲ ಪಡೆದಿದ್ದು ಅವಧಿ ಮೀರಿದರೂ ಅದನ್ನು ತೀರಿಸದ 553 ಮಂದಿಗೆ ಲೋಕ ಅದಾಲತ್‌ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳುವಂತೆ ನೋಟಿಸ್‌ ನೀಡಲಾಗಿತ್ತು. ಈ ಪೈಕಿ 110 ಸಾಲಗಾರರು ಹಾಜರಾಗಿದ್ದು 70 ಸಾಲಗಾರರ ಪ್ರಕರಣ ರಾಜಿ ಸಂಧಾನದ ಮೂಲಕ ಬಗೆಹರಿದಿದೆ. ಒಟ್ಟು 28.79 ಲಕ್ಷ ರೂ.ದಷ್ಟು ಮೊತ್ತದ ವಿನಾಯ್ತಿಯನ್ನು ಸಾಲಗಾರರಿಗೆ ಬ್ಯಾಂಕ್‌ನ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧಿಧೀಶ ಜಿ. ರಾಘವೇಂದ್ರ ಮಾತನಾಡಿ, ಬ್ಯಾಂಕ್‌ಗಳಿಂದ ಸಾಲ ಪಡೆದವರು ನಿಗದಿತ ಅವಧಿಯಲ್ಲಿ ತೀರುವಳಿ ಮಾಡದೆ ಇದ್ದಾಗ ಬ್ಯಾಂಕ್‌ನವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೆ ಸಾಲಗಾರರು ಸಾಲದ ಮೊತ್ತದ ಜೊತೆಗೆ ಬಡ್ಡಿ, ನ್ಯಾಯಾಲಯದ ಖರ್ಚು ವೆಚ್ಚಗಳನ್ನು ಕೂಡ ಪಾವತಿಸಬೇಕಾಗುತ್ತದೆ. ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಂಡರೆ ಸಾಲದ ಮೊತ್ತದಲ್ಲೂ ವಿನಾಯ್ತಿ ದೊರಕುತ್ತದೆ ಎಂದು ತಿಳಿಸಿದರು.

ಬಹುತೇಕ ಪ್ರಕರಣಗಳಲ್ಲಿ ಸಾಲಗಾರರಿಗೆ ನಿಗದಿತ ಅವಧಿಯಲ್ಲಿ ಸಾಲವನ್ನು ತೀರುವಳಿ ಮಾಡುವ ಉದ್ದೇಶವಿದ್ದರೂ ಅನಿವಾರ್ಯವಾಗಿ ಎದುರಾಗುವ ಕಷ್ಟ ಕಾರ್ಪಣ್ಯಗಳಿಂದ ಅದು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಈ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ಎದುರಿಸುವುದಕ್ಕಿಂತ ರಾಜಿ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ನ್ಯಾಯಾಧೀಶರಾದ ಸೈಯದ್‌ ಅಫ್ರ್ರಾತ್‌ ಇಬ್ರಾಹಿಂ ಮಾತನಾಡಿ, ಇತರ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಯಾರ ಪರವಾಗಿ ತೀರ್ಪು ಬರುತ್ತದೆ ಎಂದು ಮೊದಲೇ ಹೇಳಲು ಸಾಧ್ಯವಿಲ್ಲ. ಆದರೆ ಬ್ಯಾಂಕ್‌ಗಳು ದಾಖಲಿಸುವ ಪ್ರಕರಣಗಳಲ್ಲಿ ತಾಂತ್ರಿಕವಾಗಿ ಯಾವುದೇ ಲೋಪ ಇಲ್ಲದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಂಕ್‌ ಗಳ ಪರವಾಗಿಯೇ ತೀರ್ಪು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಾಲಗಾರರು ಸಾಧ್ಯವಾದಷ್ಟು ಬ್ಯಾಂಕ್‌ನವರು ವ್ಯಾಜ್ಯ ದಾಖಲಿಸುವ ಮುನ್ನವೇ ರಾಜಿ ಮಾಡಿಕೊಳ್ಳುವುದು ಸುರಕ್ಷಿತ ಕ್ರಮ ಎಂದು ತಿಳಿಸಿದರು.

Advertisement

ಕೆನರಾ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕ ವಾಸುದೇವ ಮೊಗೇರ, ಸಾಗರ ಶಾಖೆಯ ಹಿರಿಯ ಪ್ರಬಂಧಕರಾದ ಎಚ್.ಎಸ್‌. ಪ್ರಭಾ, ಕಾರ್ಗಲ್ ಶಾಖೆಯ ಪ್ರಬಂಧಕ ರಮೇಶ್‌ ಎಚ್. ತಾಳಗುಪ್ಪ ಶಾಖೆಯ ಪ್ರಬಂಧಕ ಮಂಜುನಾಥ, ಆನಂದಪುರ ಶಾಖೆಯ ವಿನಾಯಕ, ಬ್ಯಾಂಕ್‌ನ ಅಧಿಕಾರಿಗಳಾದ ಎಸ್‌. ಸುರೇಶ್‌, ಶಿಲ್ಪನಾ, ವೈಶಾಲಿ, ವಕೀಲರಾದ ಕೆ.ಜಿ. ರಾಘವೇಂದ್ರ, ಸತೀಶ್‌ ಕುಮಾರ್‌, ವಿ. ಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next