ಸಾಗರ: ಹೋಟೆಲ್‌ನ ಹೊರಭಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಮಾಲೀಕರು ಒಳಗೆ ಹೋಗಿ ಕುಡಿಯಿರಿ ಎಂದು ಹೇಳಿದ ವಿಚಾರವಾಗಿ ಗಲಾಟೆ ನಡೆದಿದ್ದು, ಮಾಜಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಅಶೋಕ್ ಹಾಗೂ ಸಂಗಡಿಗರ ವಿರುದ್ಧ ಹೋಟೆಲ್ ಮಾಲೀಕರಾದ ವೀರೇಂದ್ರ ಕರ್ಕಿಕೊಪ್ಪ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವರದಹಳ್ಳಿ ವೃತ್ತದಲ್ಲಿರುವ ಸೌಪರ್ಣಿಕ ಹೋಟೆಲ್‌ನ ಆವರಣದಲ್ಲಿ ಸೋಮವಾರ ರಾತ್ರಿ 8.45ರ ಸುಮಾರಿಗೆ ಮೂವರು ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಇದನ್ನು ಗಮನಿಸಿದ ಹೋಟೆಲ್ ಮಾಲೀಕರ ತಂದೆ ಚಂದ್ರು ಹಾಗೂ ಅವರ ಅಣ್ಣ ಸತೀಶ್, ಕಾರಿನ ಬಳಿ ಹೋಗಿ ಮದ್ಯ ಸೇವಿಸುವುದಾದರೆ ಹೋಟೆಲ್ ಒಳಗೆ ಹೋಗಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆ ಯುವಕರು ಕೂಡಲೇ ಹಲ್ಲೆಗೆ ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಅವರಿಗೂ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ. ಬಳಿಕ ರಾತ್ರಿ 10.30ರ ಸುಮಾರಿಗೆ ತಮ್ಮೊಂದಿಗೆ ಮತ್ತಿಬ್ಬರನ್ನು ಕರೆತಂದ ಅವರು ಹೋಟೆಲ್‌ನಲ್ಲಿ ಊಟ, ಮದ್ಯ ಸೇವಿಸಿ ಹಿಂತಿರುಗಿದ್ದಾರೆ.
ನಂತರ ರಾತ್ರಿ 12.10ರ ವೇಳೆಗೆ ಹೋಟೆಲ್ ಕಾಂಪೋಂಡಿನ ಮುಂಭಾಗಕ್ಕೆ ಬಂದು ಅಲ್ಲಿದ್ದ ಡಿಜಿಟಲ್ ಲೈಟ್ ಬೋರ್ಡ್‌ಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಾರೆ. ಶಬ್ದ ಕೇಳಿ ಹೋಟೆಲ್ ಸಿಬ್ಬಂದಿ ಹೊರಗೆ ಬರುವುದರೊಳಗೆ 5 ಅರೋಪಿಗಳು ಕುಗ್ವೆ ಕಡೆ ಹೋಗಿರುವುದು ಪತ್ತೆಯಾಗಿದೆ ಎಂದು ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿರುವುದಾಗಿ ಉಲ್ಲೇಖಿಸಲಾಗಿದೆ.
ಬರದವಳ್ಳಿಯ ಅಶೋಕ್ ಮರಗಿ, ಜಗದೀಶ್ ಗಾಳಿಪುರ, ಮನೋಜ್ ಗುರಾಲ್‌ಗುಂಡಿ ಜನ್ನೇಹಕ್ಲು, ನವೀನ್ ಕುಗ್ವೆ ಮತ್ತು ಅರುಣ್ ಗಾಳಿಪುರ ಇವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.