Advertisement

ರಾಜಧಾನಿಗೆ ಲಿಂಗನಮಕ್ಕಿ ನೀರು ಪ್ರಸ್ತಾಪ‌ ಕೈ ಬಿಡಿ

12:27 PM Jun 26, 2019 | Naveen |

ಸಾಗರ: ಲಿಂಗನಮಕ್ಕಿ ಅಣೆಕಟ್ಟಿನಿಂದ ಬೆಂಗಳೂರಿಗೆ ನೀರು ಒಯ್ಯುವ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಸಂಘದ ಅಧ್ಯಕ್ಷ ಜಿ.ನಾಗೇಶ್‌ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಲಿಂಗನಮಕ್ಕಿ ಆಣೆಕಟ್ಟಿಗೆ ಹರಿದು ಬರುವ ಪ್ರದೇಶದಲ್ಲಿ ಮಳೆ ಪ್ರಮಾಣ ತೀರಾ ಕುಸಿದಿದೆ. ಶೇ. 40ರಷ್ಟು ಹೂಳು ತುಂಬಿದ್ದರಿಂದ ಡ್ಯಾಂನ ನೀರಿನ ಸಾಮರ್ಥ್ಯ ಸಹ ಕುಸಿದಿದೆ. ಇರುವ ನೀರು ವಿದ್ಯುತ್‌ ಉತ್ಪಾದನೆಗೆ ಸಾಕಾಗುವುದಿಲ್ಲವೇನೋ ಎನ್ನುವ ದುಃಸ್ಥಿತಿ ಇರುವಾಗ ರಾಜ್ಯ ಸರ್ಕಾರ ಇಲ್ಲದ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆಗೆ ಡಿಪಿಆರ್‌ ತಯಾರಿಸಲು ಹೇಳಿರುವುದು ಹಾಸ್ಯಾಸ್ಪದ ಸಂಗತಿ. ಸರ್ಕಾರ ಬೆಂಗಳೂರಿಗೆ ನೀರು ಒದಗಿಸಲು ಪರ್ಯಾಯ ಮಾರ್ಗ ಯೋಚಿಸಬೇಕು. ಮಲೆನಾಡಿಗರ ಜೀವನಾಡಿಯಾಗಿರುವ ಶರಾವತಿ ನದಿ ನೀರು ಒಯ್ಯುವ ಆಲೋಚನೆಯಿಂದ ಹೊರಗೆ ಬರಬೇಕು ಎಂದು ಹೇಳಿದರು.

ಪತ್ರಕರ್ತ ಸಂತೋಷಕುಮಾರ್‌ ಕಾರ್ಗಲ್ ಮಾತನಾಡಿ, ಈಗಾಗಲೇ ಶರಾವತಿ ಕಣಿವೆ ಪ್ರದೇಶವಾದ ಹೆನ್ನಿ, ವಡನ್‌ಬೈಲ್ ಇನ್ನಿತರ ಕಡೆಗಳಲ್ಲಿ ಬಾವಿ ಬತ್ತಿ ಹೋಗಿದೆ. ಮಳೆ ಪ್ರಮಾಣ ತೀರ ಕುಸಿದಿದೆ. ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಇರುವ ನೀರನ್ನು ಶರಾವತಿ ಕಣಿವೆ ಪ್ರದೇಶದ ಕೊರತೆ ಇರುವ ಭಾಗಗಳಿಗೆ ಹರಿಸುವ ಯೋಜನೆ ಸರ್ಕಾರ ರೂಪಿಸಬೇಕು. ಲಿಂಗನಮಕ್ಕಿ ಡ್ಯಾಂನಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಕಣಿವೆ ಪ್ರದೇಶದ ಜನರ ತೀವ್ರ ವಿರೋಧವಿದೆ ಎಂದರು.

ಪತ್ರಕರ್ತ ಎಸ್‌.ವಿ. ಹಿತಕರ ಜೈನ್‌ ಮಾತನಾಡಿ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಮಧ್ಯಂತರ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತುಮಕೂರು ಕ್ಷೇತ್ರವ್ಯಾಪ್ತಿಯಲ್ಲಿ ಜನರ ಮತ ಪಡೆಯಲು ಯೋಜನೆ ರೂಪಿಸಿದಂತೆ ಕಾಣುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ತಯಾರು ಮಾಡುತ್ತಿರುವುದರ ಹಿಂದೆ ನೀರು ಹರಿಸುವುದಕ್ಕಿಂತ ಯಾರಧ್ದೋ ವೈಯಕ್ತಿಕ ಹಿತಾಸಕ್ತಿ ಅಡಗಿದಂತೆ ಕಾಣುತ್ತಿದೆ. ಸರ್ಕಾರ ತಕ್ಷಣ ಯೋಜನೆಗೆ ಡಿಪಿಆರ್‌ ತಯಾರಿಸುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎಚ್.ಬಿ. ರಾಘವೇಂದ್ರ, ಮಲೆನಾಡು ಭಾಗದಲ್ಲಿ ಮಳೆ ಕೊರತೆಯಿಂದಾಗಿ ಗ್ರಾಮಾಂತರ ಪ್ರದೇಶಗಳ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತೆ ಆಗಿದೆ. ಸರ್ಕಾರ ಮಲೆನಾಡು ಭಾಗದ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಅಗತ್ಯವಾದ ನೀರು ಪೂರೈಕೆ ಮಾಡಲು ಯೋಜನೆ ರೂಪಿಸುವುದನ್ನು ಬಿಟ್ಟು, ಶರಾವತಿ ನದಿಯ ಲಿಂಗನಮಕ್ಕಿ ಆಣೆಕಟ್ಟಿನಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಅವೈಜ್ಞಾನಿಕವಾದ ಯೋಜನೆ ರೂಪಿಸಿರುವುದು ಖಂಡನೀಯ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ನೀರು ಹರಿಸುವ ಸಂಬಂಧ ಸಮಗ್ರ ಯೋಜನಾ ವರದಿ ತಯಾರು ಮಾಡಿ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅಸಾಧ್ಯವಾದ ಯೋಜನೆಗೆ ಡಿಪಿಆರ್‌ ತಯಾರು ಮಾಡುವ ನೆಪದಲ್ಲಿ ಮಲೆನಾಡಿನ ಜಲಮೂಲಕ್ಕೆ ಕನ್ನ ಹಾಕಬೇಡಿ ಎಂದು ತಿಳಿಸಿದರು.

Advertisement

ಸಂಘದ ಪ್ರಧಾನ ಕಾರ್ಯದರ್ಶಿ ರವಿನಾಯ್ಡು, ಉಪಾಧ್ಯಕ್ಷ ಗಣಪತಿ ಶಿರಳಗಿ, ಖಜಾಂಚಿ ಎಂ.ಜಿ. ರಾಘವನ್‌, ಪತ್ರಕರ್ತರಾದ ಎ.ಡಿ. ರಾಮಚಂದ್ರ, ಎ.ಡಿ. ಸುಬ್ರಹ್ಮಣ್ಯ, ಎಂ. ರಾಘವೇಂದ್ರ, ಮೃತ್ಯುಂಜಯ ಚಿಲುಮೆಮಠ, ಕೆ.ಎನ್‌. ವೆಂಕಟಗಿರಿ, ಲೋಕೇಶಕುಮಾರ್‌, ಗಿರೀಶ್‌ ರಾಯ್ಕರ್‌, ರಮೇಶ್‌ ಗುಂಡೂಮನೆ, ರಾಜೇಶ್‌ ಬಡ್ತಿ, ಮಹೇಶ್‌ ಹೆಗಡೆ, ರಾಘವೇಂದ್ರ ಶರ್ಮ, ಆರ್‌. ಜಗನ್ನಾಥ್‌, ಬಿ.ಡಿ. ರವಿಕುಮಾರ್‌, ಮಲ್ಲಿಕಾರ್ಜುನ್‌, ಚಂದ್ರಶೇಖರ್‌, ವಸಂತ, ಉಮೇಶ್‌, ಇಮ್ರಾನ್‌, ನಾಗರಾಜ್‌, ಯೋಗೀಶ್‌ ಭಟ್ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next