ಬೆಂಗಳೂರು: ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವರು ಟಿಕಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರುತ್ತಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಮಗಳು ಡಾ.ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಡಾ.ರಾಜನಂದಿನಿ ಸಾಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್ ನೀಡದೆ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಡಾ.ರಾಜನಂದಿನಿ ಬುಧವಾರ ಮಾಜಿ ಸಿಎಂ ಬಿಎಸ್ ವೈ ಅವರನ್ನು ಭೇಟಿಯಾಗಿದ್ದರು.
ಇದನ್ನೂ ಓದಿ: ಮಹಾನ್ ನಾಯಕರೊಬ್ಬರಿಂದ ನನಗೆ ಟಿಕೆಟ್ ತಪ್ಪಿದೆ: ಎಸ್.ಐ.ಚಿಕ್ಕನಗೌಡ
ಆ ಬಳಿಕ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯಾಧಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಈ ವೇಳೆ ಟೆನ್ನಿಸ್ ಆಟಗಾರ್ತಿಯಾದ ತೀರ್ಥ ಇಸ್ಕಾ, ಪ್ರಮುಖರಾದ ರತ್ನಾಕರ ಹೊನಗೋಡು, ಭೈರಪ್ಪ, ರಮೇಶ್ ಮತ್ತು ಅವರ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.
ಈ ವೇಳೆ ಸಿಟಿ ರವಿ, ಭಗವಂತ ಖೂಬಾ, ಸಿದ್ದರಾಜು, ಹರತಾಳು ಹಾಲಪ್ಪ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
ಸಾಗರ ಕ್ಷೇತ್ರದಿಂದ ಡಾ.ರಾಜನಂದಿನಿ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಟಿಕೆಟ್ ಗಾಗಿ ಬಾರೀ ಲಾಬಿ ನಡೆಸಿದ್ದರು. ಕಾಗೋಡು ಸೋದರ ಅಳಿಯ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರಿಗೆ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.