ಸಾಗರ: ಸಾಗರದಲ್ಲಿ ಮಹಿಳಾ ಪೊಲೀಸ್ ಠಾಣೆ ಪ್ರಾರಂಭ ಮಾಡಲು ಸಾಧ್ಯವಿಲ್ಲ. ಜಿಲ್ಲೆಗೆ ಒಂದೇ ಮಹಿಳಾ ಪೊಲೀಸ್ ಠಾಣೆ ಇರುತ್ತದೆ. ಸಾಗರ ಠಾಣೆಗೆ ಅಗತ್ಯವಿದ್ದ ಸಂದರ್ಭದಲ್ಲಿ ಮಹಿಳಾ ಪೊಲೀಸರನ್ನು ನೇಮಕ ಮಾಡಿ ಮಹಿಳೆಯರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಂ. ಅಶ್ವಿನಿ ಭರವಸೆ ನೀಡಿದರು.
ನಗರದ ಶಾರದಾಂಬಾ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಕ್ಷಣ ಸಂಚಾರ ವ್ಯವಸ್ಥೆ ಸರಿಪಡಿಸಲು ನಮ್ಮ ಸಿಬ್ಬಂದಿಗೆ ಟ್ರಾಫಿಕ್ ಧಿರಿಸು ತೊಡಿಸಿ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಮೀಟರ್ ಬಡ್ಡಿಗೆ ಸಂಬಂಧಪಟ್ಟಂತೆ ಮಹಿಳೆಯೊಬ್ಬರು ಆಸ್ಪತ್ರೆ ಸೇರಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇದು ಇಲಾಖೆಯ ಗಮನದಲ್ಲಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಾಗರದಲ್ಲಿ ಗಾಂಜಾ, ಡ್ರಗ್ಸ್ ಬಗ್ಗೆ ಸಾರ್ವಜನಿಕವಾಗಿ ದೂರುಗಳಿವೆ. ಮೆಡಿಕಲ್ ಶಾಪ್‌ಗ್ಳಲ್ಲಿ ಕೆಮ್ಮಿನ ಔಷಧ ರೂಪದಲ್ಲಿ ನಿಷೇಧಿತ ಔಷಧಿಯನ್ನು ಮಾರಾಟ ಮಾಡುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಶಾಲಾ- ಕಾಲೇಜು ಬಿಡುವ ಸಂದರ್ಭದಲ್ಲಿ ಆಸುಪಾಸು, ಬಸ್ ನಿಲ್ದಾಣ ಇನ್ನಿತರ ಕಡೆಗಳಲ್ಲಿ ಹೆಚ್ಚುವರಿ ಪೊಲೀಸರ ನೇಮಕ ಮಾಡಿ, ಪುಂಡಪೋಕರಿಗಳನ್ನು ನಿಯಂತ್ರಿಸುವ ಕೆಲಸ ಮಾಡಲಾಗುತ್ತದೆ. ರೌಡಿಸಂಗೆ ನಮ್ಮ ಜಿಲ್ಲೆಯಲ್ಲಿ ಅವಕಾಶವಿಲ್ಲ. ಮಾಹಿತಿ ನೀಡಿದರೆ ಎಂತಹ ಬಲಾಡ್ಯರು ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅಪಘಾತಗಳ ಸಂಖ್ಯೆ ಹೆಚ್ಚಿ ಅನಾಹುತಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ವಾಹನ ಸವಾರರು ಹೆಚ್ಚು ಜಾಗ್ರತೆಯಿಂದ ಇರಬೇಕು. ಅಪಘಾತಗಳು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಹೆಲ್ಮೆಟ್ ಕಡ್ಡಾಯ ಧರಿಸಬೇಕು. ಪೊಲೀಸರು ಹೆಲ್ಮೆಟ್ ಧರಿಸದೆ ಇದ್ದಾಗ ಕೇಸು ಹಾಕುತ್ತಾರೆ. ಕೇಸು ಹಾಕುವುದರ ಹಿಂದಿನ ಉದ್ದೇಶ ನಿಮ್ಮ ಪ್ರಾಣ ರಕ್ಷಣೆ ಅಡಗಿದೆ ಎಂದು ತಿಳಿಸಿದರು.
ಮರಳು ಸಮಸ್ಯೆ ನಿವಾರಣೆ ಬಗ್ಗೆ ಒಂದು ಸಮರ್ಥ ಕಾನೂನು ರೂಪಿಸುವ ಅಗತ್ಯವಿದೆ. ಪೊಲೀಸ್ ಇಲಾಖೆಗೆ ಮರಳು ಹೊರತುಪಡಿಸಿ ಸಾಕಷ್ಟು ಕೆಲಸ ಇರುತ್ತದೆ. ಮರಳು ಸಮಸ್ಯೆಯಿಂದಾಗಿ ಪೊಲೀಸರು ಹೆಚ್ಚು ಒತ್ತಡ ಅನುಭವಿಸುವಂತೆ ಆಗಿದೆ. ತ್ಯಾಗರ್ತಿ ಮತ್ತು ತುಮರಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಶಾಲೆಗಳ ಎದುರು ಬ್ಯಾರಿಕೇಡ್ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಸಭೆಯಲ್ಲಿ ಟಿ.ಡಿ. ಮೇಘರಾಜ್, ಲಕ್ಷ್ಮಣ ಸಾಗರ್, ದೂಗೂರು ಪರಮೇಶ್ವರ್, ಗಣೇಶಪ್ರಸಾದ್, ತಾರಾಮೂರ್ತಿ, ಶಿವಾನಂದ ಕುಗ್ವೆ, ತಾಹೀರ್, ಜಮೀಲ್, ಸೈಯದ್ ಜಾಕೀರ್, ರಾಜಶೇಖರ್, ಚೇತನರಾಜ ಕಣ್ಣೂರು ಇನ್ನಿತರರು ಮಾತನಾಡಿದರು. ಎಎಸ್‌ಪಿಯತೀಶ್ ಎನ್., ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಮಹಾಬಲೇಶ್ ನಾಯ್ಕ, ಹೇಮಂತಕುಮಾರ್, ಪೌರಾಯುಕ್ತ ಎಸ್. ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ರಾಜು ಇನ್ನಿತರರು ಇದ್ದರು.