ಸಾಗರ: ಇಲ್ಲಿನ ಜೋಸೆಫ್ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಘೇರಾವ್ ನಡೆಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಪ್ರಾಚಾರ್ಯೆ ಹೊಡೆಯುತ್ತಾರೆ, ಬೈಯುತ್ತಾರೆ ಮತ್ತು ಸರಿಯಾಗಿ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು. ಆವಿನಹಳ್ಳಿಯಲ್ಲಿರಬೇಕಾದ ಈ ಶಾಲೆ ಕಟ್ಟಡ ಕೊರತೆಯಿಂದ ಸಾಗರದಲ್ಲಿ ನಡೆಯುತ್ತಿದ್ದು, 6ರಿಂದ 10ನೇ ತರಗತಿವರೆಗೆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಜೋಸೆಫ್ ನಗರದಿಂದ ತಹಶೀಲ್ದಾರ್ ಕಚೇರಿವರೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನೂರಾರು ವಿದ್ಯಾರ್ಥಿಗಳು ಮೆರವಣಿಗೆ ತೆರಳಿ ಪ್ರಾಚಾರ್ಯರ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪೊಲೀಸರು ಮತ್ತು ಗ್ರೇಡ್-2 ತಹಶೀಲ್ದಾರ್ ಪರಮೇಶ್ವರ್ ಮಧ್ಯಪ್ರವೇಶ ಮಾಡಿ ಬೆಳಿಗ್ಗೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮರಳಿ ವಿದ್ಯಾರ್ಥಿ ನಿಲಯಕ್ಕೆ ಬಂದು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದರು.
ಬೇಳೂರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಂತೆಯೇ ಬಿಜೆಪಿಯ ಕೆಲವು ಪ್ರಮುಖರು ಪ್ರತಿಭಟನಾ ಸ್ಥಳಕ್ಕೆ ಬಂದದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಯಿತು. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿ.ಕೃಷ್ಣಪ್ಪ ಅವರನ್ನು ತಳ್ಳಾಡಿದ ಘಟನೆ ಸಹ ನಡೆಯಿತು. ಒಂದು ಗುಂಪು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಇಸಾಕ್ ಅಹ್ಮದ್ ಅವರನ್ನು ಅಮಾನತ್ತು ಮಾಡಿ ಎಂದು ಪಟ್ಟು ಹಿಡಿದರೆ, ಇನ್ನೊಂದು ಗುಂಪು ಪ್ರಾಚಾರ್ಯೆ ರತ್ನಮ್ಮ ಅವರನ್ನು ಅಮಾನತ್ತು ಮಾಡುವಂತೆ ಘೋಷಣೆ ಕೂಗಿದ ಘಟನೆ ಸಹ ನಡೆಯಿತು.
ಕ್ರಮದ ಭರವಸೆ: ಭಾನುವಾರ ಬೆಳಿಗ್ಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್., ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಒಂದು ಗುಂಪು ಪ್ರಾಚಾರ್ಯೆ ರತ್ನಮ್ಮ ದೌರ್ಜನ್ಯದ ಬಗ್ಗೆ ಆರೋಪಿದರೆ, ಇನ್ನೊಂದು ಗುಂಪು ಮೇಲ್ವಿಚಾರಕ ಇಸಾಕ್ ಅಹ್ಮದ್ ಸರಿಯಾಗಿ ಊಟತಿಂಡಿ ಕೊಡುತ್ತಿಲ್ಲ ಎಂದು ದೂರಿತು. ಸ್ಥಳದಲ್ಲಿದ್ದ ಪೋಷಕರು ಪ್ರಾಚಾರ್ಯರನ್ನು ಮತ್ತು ಮೇಲ್ವಿಚಾರಕರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿದ ಘಟನೆ ಸಹ ನಡೆಯಿತು. ಅಂತಿಮವಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆ. ಅವರಿಗೆ ಸೂಕ್ತ ಕ್ರಮ ಜರುಗಿಸುವ ಹೊಣೆಗಾರಿಕೆ ವಹಿಸಿಕೊಡಲಾಯಿತು.
ಘಟನೆಗೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿರುವ ಮೇಲ್ವಿಚಾರಕ ಇಸಾಕ್ ಅಹ್ಮದ್ ವಿರುದ್ದ ಕ್ರಮ ಜರುಗಿಸುವಂತೆ ಪ್ರಾಚಾರ್ಯೆ ರತ್ನಮ್ಮ ನಗರ ಠಾಣೆಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ತಡರಾತ್ರಿ ಪ್ರತಿಭಟನೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ ಎಂದು ರತ್ನಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ವಾರ್ಡನ್-ಪ್ರಾಚಾರ್ಯೆ ಹೊಂದಾಣಿಕೆ ಕೊರತೆಯೇ ಕಾರಣ :
ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಲು ಪ್ರಾಚಾರ್ಯೆ ಮತ್ತು ಮೇಲ್ವಿಚಾರಕರ ನಡುವಿನ ಹೊಂದಾಣಿಕೆ ಕೊರತೆಯೇ ಕಾರಣವಾಗಿದೆ. ಈ ಕುರಿತು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಲಾಗಿದೆ. ಒಂದು ಗುಂಪು ಪ್ರಾಚಾರ್ಯರ ಪರ ಇದ್ದರೆ, ಇನ್ನೊಂದು ಗುಂಪು ಮೇಲ್ವಿಚಾರಕರ ಪರ ಇದೆ. ವಸತಿ ಶಾಲೆಯಲ್ಲಿ ಯಾವುದೇ ಗುಂಪುಗಾರಿಕೆ ಇರಬಾರದು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಘಟನೆ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ಕೆ. ತಿಳಿಸಿದರು.
ಪೋಷಕರ ಪರವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ಕೆಲವು ದಿನಗಳಿಂದ ಮಕ್ಕಳಿಗೆ ಸರಿಯಾಗಿ ಆಹಾರ ಕೊಡುತ್ತಿಲ್ಲ ಎನ್ನುವ ದೂರುಗಳಿವೆ. ಘಟನೆಗೆ ಕಾರಣವಾಗಿರುವ ಪ್ರಾಂಶುಪಾಲರು ಮತ್ತು ವಾರ್ಡನ್ ಇಬ್ಬರನ್ನೂ ಅಮಾನತ್ತು ಮಾಡಿ ವಿಚಾರಣೆ ನಡೆಸಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.