Advertisement

16ರಿಂದ ಹೊಸಗುಂದ ಉತ್ಸವ- ಲಕ್ಷ ದೀಪೋತ್ಸವ

12:34 PM Nov 14, 2019 | Naveen |

ಸಾಗರ: ತಾಲೂಕಿನ ಐತಿಹಾಸಿಕ ಹೊಸಗುಂದ ಉಮಾಮಹೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಹಾಗೂ ಹೊಸಗುಂದ ಉತ್ಸವವನ್ನು ನ. 16, 17 ಮತ್ತು 18ರಂದು ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಅತ್ಯಂತ ವೈಷಿಷ್ಠ್ಯ ಪೂರ್ಣವಾಗಿ ಆಯೋಜಿಸಲಾಗಿದ್ದು, ಶೃಂಗೇರಿ ಶಂಕರಮಠದ ಡಾ| ವಿ.ಆರ್‌. ಗೌರಿಶಂಕರ್‌ ಮಾರ್ಗದರ್ಶನ ಹಾಗೂ ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ಸಿ.ಎಂ.ಎನ್‌. ಶಾಸ್ತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ನ. 16ರಂದು ಬೆಳಗ್ಗೆ 10-30ಕ್ಕೆ ಹೊಸಗುಂದ ಉತ್ಸವದ ಉದ್ಘಾಟನೆ ನಡೆಯಲಿದೆ. ನಂತರ “ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದಳೆಯುವ ಬಗೆ’ ವಿಚಾರ ಕುರಿತು ಧರ್ಮಸ್ಥಳ ಮಂಜುನಾಥೇಶ್ವರ ಧಮೋತ್ಥಾನ ಟ್ರಸ್ಟ್‌ ವತಿಯಿಂದ ಈತನಕ ಸಂರಕ್ಷಿಸಲ್ಪಟ್ಟ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಂಜೆ 6ರಿಂದ 7 ಗಂಟೆಯವರೆಗೆ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಬಿ.ಟಾಕಪ್ಪ ಅವರ ಮಾರ್ಗದರ್ಶನದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ನಂತರ ಗಂಗಾವತಿ ಪ್ರಾಣೇಶ್‌ ಮತ್ತು ತಂಡದವರಿಂದ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 17ರಂದು ಬೆಳಗ್ಗೆ 10-30ಕ್ಕೆ ಸಾವಯವ ಕೃಷಿ, ಬದುಕು, ಆಹಾರ ಕ್ಷೇತ್ರದಲ್ಲಿ ಸಾವಯವ ಭೋಜನ, ಸಾವಯವ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಕೃಷಿ ಹಾಗೂ ಬದುಕು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಸಂಜೆ 6ರಿಂದ ಜಾನಪದ ಸಂಭ್ರಮ, ಸಂಜೆ 7ರಿಂದ ಝೀ
ಕನ್ನಡ ಸರಿಗಮಪ ಖ್ಯಾತಿಯ ಹನುಮಂತ, ಚೆನ್ನಪ್ಪ, ಸುಹಾನ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಅನುಶ್ರೀ ನಿರೂಪಿಸಲಿದ್ದಾರೆ ಎಂದು ಹೇಳಿದರು.

18ರಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೆ ಪರಿಸರ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಹೊಸಗುಂದದ ಪರಿಸರ, ದೇವರ ಕಾಡಿನಲ್ಲಿರುವ ಅಪರೂಪದ ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸಲಾಗುತ್ತದೆ. ಸಂಜೆ 6ಕ್ಕೆ ಉಮಾಮಹೇಶ್ವರ ದೇವರಿಗೆ ಪ್ರಥಮ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಜಾನಪದ ಸಂಭ್ರಮ ನಡೆಯಲಿದ್ದು, ನಂತರ ಖ್ಯಾತ ಮೃದಂಗ ವಾದಕ ಆನೂರು ಅನಂತಕೃಷ್ಣ ಶರ್ಮ ಮತ್ತು ಸ್ಯಾಕ್ಸೋಫೋನ್‌ ವಾದಕ ಶ್ರೀಧರ ಸಾಗರ್‌ ಮತ್ತು ತಂಡದವರಿಂದ ವಾದ್ಯ ಸಂಗೀತ, ರಾತ್ರಿ 10ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

Advertisement

ಸೇವಾ ಟ್ರಸ್ಟ್‌ನ ಗಿರೀಶ್‌ ಕೋವಿ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಹಾಗೂ ಹೊಸಗುಂದ ಉತ್ಸವ ನಡೆಸಲಾಗುತ್ತಿದ್ದು, ಪರಿಸರದ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ. ಹೊಸಗುಂದ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೇವಾ ಟ್ರಸ್ಟ್‌ ಅಗತ್ಯ ಕ್ರಮ ಕೈಗೊಂಡಿದೆ. ಕೆರೆ ನಿರ್ಮಾಣ, ಇಂಗುಗುಂಡಿ ನಿರ್ಮಾಣ, ದೇವರ ಕಾಡು ರಕ್ಷಣೆ, ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಕಾರ್ಯಕ್ರಮ ನಡೆಸಲು ಸ್ಥಳೀಯ ಗ್ರಾಪಂನಿಂದ ಅನುಮತಿ ಪಡೆಯಲಾಗಿದೆ. ಸುತ್ತ ಊರಿನ ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬಸವರಾಜ ಗೌಡ ಹೆಡತ್ರಿ, ಎಂ. ನಾಗರಾಜ್‌, ಗಣಪತಿ ಶೆಟ್ಟಿ, ರವಿಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next