Advertisement

ಹೊನ್ನೇಸರ ಶಾಲೆಗೆ ಸಚಿವ ಸುರೇಶ್‌ಕುಮಾರ್‌ ದಿಢೀರ್‌ ಭೇಟಿ

01:00 PM Mar 01, 2020 | Naveen |

ಸಾಗರ: ತಾಲೂಕಿನ ಹೆಗ್ಗೋಡು ಸಮೀಪದ ಹೊನ್ನೇಸರ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಶುಕ್ರವಾರ ದಿಢೀರ್‌ ಭೇಟಿ ನೀಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆವರು ಒರೆಸಿಕೊಳ್ಳುತ್ತಲೇ ಈ ಭೇಟಿಯನ್ನು ನಿರ್ವಹಿಸಿದರು. ನೀನಾಸಂನ ರಂಗಕರ್ಮಿ ಕೆ.ವಿ.ಅಕ್ಷರ ಅವರ ಮೊಮ್ಮಗ ಕೂಡ ಓದುತ್ತಿರುವ ಹಳ್ಳಿ ಮೂಲೆಯ ಹೊನ್ನೇಸರದ ಶಾಲೆಯನ್ನು ಇಂಚು ಇಂಚಾಗಿ ಗಮನಿಸಿದ ಸುರೇಶ್‌ಕುಮಾರ್‌ ತಮ್ಮ ಸಂತಸದ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರವಷ್ಟೇ ಸಾಗರದ ಬಿಇಒ ಕಚೇರಿಯ ಎಲ್ಲ ನೌಕರ ವರ್ಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.

Advertisement

ತಾಲೂಕಿನ ಕೆಳದಿ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ಹೋಗಲು ಸಾಗರಕ್ಕೆ ಆಗಮಿಸುವವರಿದ್ದ ಸುರೇಶ್‌ಕುಮಾರ್‌ ಶಿವಮೊಗ್ಗದಲ್ಲಿ ಜಿಲ್ಲಾ ಶಿಕ್ಷಣಾ ಧಿಕಾರಿಗಳಲ್ಲಿ ವಿಚಾರಿಸಿ, ಸಾಗರದಲ್ಲಿ ಗುರುತಿಸಬಹುದಾದ ಸರ್ಕಾರಿ ಶಾಲೆಗಳ ಪಟ್ಟಿಯನ್ನು ಕೇಳಿದ್ದಾರೆ. ಅಂತಹ ಹತ್ತು ಹಲವು ಊರಿನ ಹೆಸರುಗಳಲ್ಲಿ ಸುರೇಶ್‌ಕುಮಾರ್‌ ಹೊನ್ನೇಸರವನ್ನು ಆರಿಸಿ ಕಾರು ಹತ್ತಿದ್ದಾರೆ. ಏಳೂವರೆಗೆ ಶಿವಮೊಗ್ಗದಿಂದ ಕಾರು ಹತ್ತಿದವರು ನೇರವಾಗಿ ಹೊನ್ನೇಸರದತ್ತ ಮುಖ ಮಾಡಿದ್ದಾರೆ. ಈ ಹಂತದಲ್ಲಿ ಶಾಲಾ ಮುಖ್ಯ ಶಿಕ್ಷಕರಿಂದ ಹಿಡಿದು ಎಲ್ಲರನ್ನೂ ಕೂಡಲೇ ಸುರೇಶ್‌ಕುಮಾರ್‌ರನ್ನು ಬರಮಾಡಿಕೊಳ್ಳುವ ವ್ಯವಸ್ಥೆ ಮಾಡುವಲ್ಲಿ ಸಿದ್ಧಪಡಿಸಲು ಶಿಕ್ಷಣ ಇಲಾಖೆಯವರು ಹರಸಾಹಸಪಟ್ಟಿದ್ದಾರೆ.

ಅವರು ಶಾಲೆಗೆ ಬರುವ ವೇಳೆಗೆ ಹಲವು ಮಕ್ಕಳು ಕೂಡ ಶಾಲೆಗೆ ಬಂದಿದ್ದರು. ಸುರೇಶ್‌ ಕುಮಾರ್‌ ಜಿಲ್ಲಾ ನಿರ್ದೇಶಕರ ಮಾತನ್ನು ಪರೀಕ್ಷಿಸಲು ಹೊರಟಿದ್ದಾರೆ. ಮಕ್ಕಳಲ್ಲಿ ನೀನಾಸಂ ಎಂದರೆ ಏನು ಎಂದು ಅದರ ವಿಸ್ತ್ರತ ಉತ್ತರ ಬಯಸಿದ್ದಾರೆ. ಮಕ್ಕಳಿಂದ ನೀಲಕಂಠ ನಾಟ್ಯ ಸಂಘ ಎಂಬ ಉತ್ತರ ಬಂದ ತಕ್ಷಣ, ನಿಮಗೂ ನೀನಾಸಂಗೂ ಏನಾದರೂ ಸಂಬಂಧವಿದೆಯೇ ಎಂದು ತರ್ಕದ ಪ್ರಶ್ನೆ ಇರಿಸಿದ್ದಾರೆ. ಅಲ್ಲಿನ ಜಾಣ ಮಕ್ಕಳು, ನಾವು ಈ ವರ್ಷ ನೀನಾಸಂನ ವೇದಿಕೆಯ ಮೇಲೆಯೇ ಶಾಲೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ ಎಂದು ಪೂರ್ವ ತಯಾರಿಗಳಿಲ್ಲದ ಉತ್ತರ ನೀಡಿದ್ದಾರೆ.

ಶಾಲೆಯನ್ನು ಸುತ್ತಾಡಿ ಕೆಳದಿಯ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ತೆರಳಿದ ಸುರೇಶ್‌ಕುಮಾರ್‌ ಅವರ ಶಾಲೆಯ ಕಲಿಕಾ ವಾತಾವರಣದ ಬಗ್ಗೆ ಪರೋಕ್ಷ ಪ್ರಶಸ್ತಿ ಪತ್ರ ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಯಿತು.

ಟ್ವಿಟ್ಟರ್‌ನಲ್ಲಿ ತಮ್ಮ ಹೊನ್ನೇಸರ ದಿಢೀರ್‌ ಭೇಟಿ ಬಗ್ಗೆ ಸಾಕಷ್ಟು ಸುದೀರ್ಘ‌ವಾಗಿ ಬರೆದ ಸುರೇಶ್‌ಕುಮಾರ್‌, ಸಾಗರದ ಬಳಿಯ ಕೆಳದಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಹೆಗ್ಗೋಡಿನ ಹೊನ್ನೇಸರ ಸರಕಾರಿ ಪ್ರಾಥಮಿಕ ಶಾಲೆಯ ವಿಶೇಷ ತಿಳಿದು ಯಾರಿಗೂ ಹೇಳದೇ ನುಗ್ಗಿದೆ. ಈ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳು ತೋರಿರುವ ಪ್ರೀತಿ ಅನನ್ಯ.

Advertisement

ಶಾಲೆಯಲ್ಲಿ ಸುಮಾರು 220 ಮಕ್ಕಳು ಓದುತ್ತಿದ್ದಾರೆ. ಹತ್ತಿರದಲ್ಲಿಯೇ ಇರುವ ಖಾಸಗಿ ಸಿಬಿಎಸ್‌ಸಿ ಶಾಲೆಯನ್ನೂ ಬಿಟ್ಟು ಈ ಶಾಲೆಗೆ ಸುಮಾರು 25 ಮಕ್ಕಳು ಬಂದು ಸೇರಿದ್ದಾರೆ ಎಂದು ಉಲ್ಲೇಖೀಸಿದ್ದಾರೆ. ಇದೇ ಶಾಲೆಯಲ್ಲಿ ಕೆ.ವಿ. ಸುಬ್ಬಣ್ಣ ಅವರ ಮರಿಮಗ, ಕೆ.ವಿ. ಅಕ್ಷರರ ಮೊಮ್ಮಗ ಈಗ ಓದುತ್ತಿರುವುದು ಕಂಡುಬರುತ್ತದೆ. ಶಾಲೆಯ ಅಡುಗೆ ಮನೆಯಲ್ಲಿ ಬಾಯ್ಲರ್‌ ವ್ಯವಸ್ಥೆ ಇದೆ. ಸಣ್ಣ ಕಂಪ್ಯೂಟರ್‌ ಲ್ಯಾಬ್‌ ಸಹ ಇದೆ. ಗುಲಾಬಿ ಹೆಸರಿನ ಅಲ್ಲಿನ ಆಯಾ ಈಗ ನಿವೃತ್ತಿಗೊಂಡರೂ ತನ್ನದೇ ಶಾಲೆ ಎಂಬ ಅಭಿಮಾನದಿಂದ ಬಂದು ಈಗಲೂ ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಹೆಮ್ಮೆ ತರುವ ಶಾಲೆ ಇದು ಎಂದು ಹೇಳಲು ಸಂತಸವಾಗುತ್ತದೆ ಎಂದು ಸುರೇಶ್‌ಕುಮಾರ್‌ ಮೆಚ್ಚುಗೆಯ ಸುರಿಮಳೆಗರೆದಿದ್ದಾರೆ. ಹೊನ್ನೇಸರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಕಾಂತ್‌ ಸಂಪೆಕೈ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌. ಬಿಂಬಾ, ಮುಖ್ಯ ಶಿಕ್ಷಕ ಎಸ್‌.ಎನ್‌. ಹೆಗಡೆ, ಗ್ರಾಮದ ಪ್ರಮುಖರಾದ ಕೃಷ್ಣಮೂರ್ತಿ ಮೊದಲಾದವರಿಗೆ ಬೆಳಗಿನ ಒತ್ತಡ ಸಂಜೆಯ ವೇಳೆಯ ಸಂಭ್ರಮದ ಹೊಳೆಯಾಗಿ ಬದಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next