Advertisement

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ

02:52 PM Oct 03, 2023 | Team Udayavani |

ಸಾಗರ: ಪಟ್ಟಣದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಚ್.ಸುಧೀಂದ್ರ, ಪವಿತ್ರವಾದ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲೀಂ ಸಮುದಾಯ ಸೋಮವಾರ ಬೃಹತ್ ಮೆರವಣಿಗೆ ಹಮ್ಮಿಕೊಂಡಿತ್ತು. ಮೆರವಣಿಗೆಯಲ್ಲಿ ಹಿಂದೂ ಸಮುದಾಯದ ತೇಜೋವಧೆ ಮಾಡುವ ಹಾಗೂ ಬೆದರಿಕೆಯೊಡ್ಡುವ ರೀತಿಯಲ್ಲಿ ವರ್ತನೆ ಮಾಡಿರುವುದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮಾರಿಕಾಂಬಾ ದೇವಸ್ಥಾನದ ಎದುರು ಮೆರವಣಿಗೆ ಸಾಗುತ್ತಿರುವಾಗ ಮುಸ್ಲೀಂ ಸಮುದಾಯದ ಕೆಲವರು ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಘೋಷಣೆ ಕೂಗಿದ್ದು ಕಂಡು ಬಂದಿದೆ. ಹಿಂದೂ ಧರ್ಮಿಯರನ್ನು ಬೆದರಿಸುವ ರೀತಿಯಲ್ಲಿ ಮೊಳಗಿಸಿರುವ ಘೋಷಣೆಯಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಅಪಾಯ ಇದೆ. ಯಾರೋ ಕೆಲವರು ಮಾಡುವ ಇಂತಹ ಕುಚೇಷ್ಟೆಗಳಿಂದ ಸಮಾಜದ ಸಾಮರಸ್ಯ ಹಾಳಾಗುವ ಜೊತೆಗೆ ಪರಸ್ಪರ ದ್ವೇಷಾಸೂಯೆ ಮೂಡಲು ಕಾರಣವಾಗುತ್ತಿದೆ ಎಂದರು.

ಈಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದೂ ಬಾಂಧವರ ಮನೆಯನ್ನು ಟಾರ್ಗೆಟ್ ಮಾಡಿ ಕಲ್ಲುತೂರಾಟ ನಡೆಸಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಇದನ್ನು ಸಹ ವೇದಿಕೆ ತೀವ್ರವಾಗಿ ಖಂಡಿಸುತ್ತಿದ್ದು, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತದೆ. ಈ ಘಟನೆ ಚರ್ಚೆಯಲ್ಲಿರುವಾಗಲೇ ಸಾಗರ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ಬಾಂಧವರನ್ನು ಭಯಭೀತಗೊಳಿಸುವ ಘೋಷಣೆ ಕೂಗಲಾಗಿದೆ. ಮುಸ್ಲೀಂ ಸಮುದಾಯದ ಹಿರಿಯರು ಇಂತಹವರನ್ನು ಹದ್ದಬಸ್ತಿನಲ್ಲಿರಿಸಬೇಕು. ಪೊಲೀಸ್ ಇಲಾಖೆ ಸೋಮವಾರ ಮೆರವಣಿಗೆಯಲ್ಲಿ ಅನಗತ್ಯ ಘೋಷಣೆ ಕೂಗಿ ಸಮಾಜದ ಶಾಂತಿ ಕದಡುವ ಪ್ರಯತ್ನ ನಡೆಸಿದವರನ್ನು ವಶಕ್ಕೆ ಪಡೆದು ಸೂಕ್ತ ವಿಚಾರಣೆ ನಡೆಸಬೇಕು. ಇಲ್ಲವಾದಲ್ಲಿ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೋಮಲ್ ರಾಘವೇಂದ್ರ, ಐ.ವಿ.ಹೆಗಡೆ, ನಂದೀಶ್ ಸೂರಗುಪ್ಪೆ, ಶ್ರೀಧರ ಸಾಗರ್, ಆಟೋ ಗಣೇಶ್, ಪವನ್ ಮಾಸೂರು, ಸಂತೋಷ್, ಪ್ರತಾಪ್, ಹೇಮಂತ್ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ: Kalaburagi; ವಾರದೊಳಗೆ ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ: ಸಚಿವ ಚಲುವರಾಯಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next