Advertisement

ಸಾಗರ: ಭಾರಿ ಮಳೆಗೆ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತ : ಜನ ಸಂಚಾರಕ್ಕೆ ದೋಣಿ ವ್ಯವಸ್ಥೆ

04:01 PM Jul 12, 2022 | Team Udayavani |

ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ಬೀಸನಗದ್ದೆ ಗ್ರಾಮಕ್ಕೆ ತಾತ್ಕಾಲಿಕವಾಗಿ ದೋಣಿ ಸಂಪರ್ಕವನ್ನು ಕಲ್ಪಿಸಲಾಗಿದೆ.

Advertisement

ವಿಪರೀತ ಮಳೆಯಿಂದ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು ಸುಮಾರು 28 ಮನೆಗಳು ಜಲದಿಗ್ಬಂಧನಕ್ಕೆ ಒಳಪಟ್ಟಿದೆ. ಗ್ರಾಮದ ಜನರ ಸಂಚಾರಕ್ಕಾಗಿ ಮಂಗಳವಾರ ಬೆಳಿಗ್ಗೆ ತೆಪ್ಪವೊಂದನ್ನು ಬಿಟ್ಟಿದ್ದು, ಮಧ್ಯಾಹ್ನ ಇಂಜಿನ್ ಬೋಟ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಜನರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ.

ತಾಳಗುಪ್ಪ ಹೋಬಳಿ ವ್ಯಾಪ್ತಿಯ ಬೀಸನಗದ್ದೆ, ತಡಗಳಲೆ, ಸೈದೂರು, ಕೆ.ಜಿ.ಕೊಪ್ಪ, ಹಾರೆಗೊಪ್ಪ, ಅತ್ತಿಸಾಲು, ಕಣಸೆ, ಮಂಡಗಳಲೆ ಸೇರಿದಂತೆ ಸುಮಾರು 3 ಸಾವಿರ ಎಕರೆ ಭತ್ತದ ಫಸಲು ನೀರಿನಲ್ಲಿ ಮುಳುಗಿ ಹೋಗಿದ್ದು ರೈತರು ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ. ಈ ಭಾಗದಲ್ಲಿ ಎರಡರಿಂದ ಮೂರು ಮನೆ ಬಿದ್ದು ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ : ರಬಕವಿಯ ಕಂಠಿ ಬಸವೇಶ್ವರ ದೇವಸ್ಥಾನದ ಹತ್ತಿರ ಗಾಂಜಾ ವಶ, ಇಬ್ಬರ ಬಂಧನ

ಕೊಚ್ಚಿಹೋದ ರಸ್ತೆ: ಪ್ರತಿವರ್ಷ ಬೀಸನಗದ್ದೆ ಗ್ರಾಮ ಜಲದಿಗ್ಭಂಧನಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಸೊರಬ ಶಾಸಕ ಕುಮಾರ ಬಂಗಾರಪ್ಪ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ತಡಗಳಲೆಯಿಂದ ಬೀಸನಗದ್ದೆವರೆಗೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

Advertisement

ಸುಮಾರು ಒಂದು ಕಿಮೀನಷ್ಟು ರಸ್ತೆ ನಿರ್ಮಾಣ ಮಾಡಿ ಎರಡು ಕಡೆ ತಡೆಗೋಡೆ ನಿರ್ಮಿಸಲಾಗಿತ್ತು. ಪ್ರವಾಹದ ರಭಸಕ್ಕೆ ರಸ್ತೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸರ್ಕಾರದ ದುಡ್ಡು ಅಪವ್ಯಯಗೊಂಡಿದೆ.

ಸ್ಥಳಕ್ಕೆ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಬೀಸನಗದ್ದೆ ಗ್ರಾಮಕ್ಕೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ವಿಪರೀತ ಮಳೆಯಿಂದ ಬೀಸನಗದ್ದೆ ಗ್ರಾಮ ಜಲಾವೃತಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರ ಸಂಚಾರಕ್ಕಾಗಿ ಒಂದು ತೆಪ್ಪವನ್ನು ಬಿಡಲಾಗಿತ್ತು. ಹೆಚ್ಚುವರಿಯಾಗಿ ಇನ್ನೊಂದು ಇಂಜಿನ್ ಬೋಟ್ ಬಿಡಲಾಗಿದೆ. ಸದ್ಯ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಇಲ್ಲ. ಪರಿಸ್ಥಿತಿಯನ್ನು ತಾಲ್ಲಕು ಆಡಳಿತ ಕಟ್ಟೆಚ್ಚರದಿಂದ ಗಮನಿಸುತ್ತಿದ್ದು, ಸಂದರ್ಭ ಬಂದರೆ ಗಂಜೀ ಕೇಂದ್ರ ತೆರೆಯಲು ಅಗತ್ಯ ಸಿದ್ದತೆ ನಡೆಸಿಕೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next