ಸಾಗರ: ತಾಲೂಕಿನ ವರದಹಳ್ಳಿಯ ದುರ್ಗಾಂಬಾ ದೇಗುಲದ ಸಮೀಪದಲ್ಲಿರುವ ಕಲ್ಮನೆ ಗ್ರಾಪಂ ವ್ಯಾಪ್ತಿಗೆ ಬರುವ ಜಾಜಿಮನೆಯ ವಿ.ಜಿ. ಸುರೇಶ್ ಅವರ ಮನೆಯ ಮುಂದಿನ ಸುಮಾರು 15 ಗುಂಟೆಗಳಷ್ಟು ಜಾಗ ನಿಧಾನವಾಗಿ 25 ಅಡಿಗಳಷ್ಟು ಕುಸಿದಿದ್ದು ಕಳೆದ ವರ್ಷದ ಕೊಡಗಿನ ದುರಂತ ನೆನಪಿಸುವಂತೆ ಮಾಡಿದೆ. ಇದೇ ಕಾಲದಲ್ಲಿ ಮನೆ ಎದುರಿನ ತೋಟದ ಅಡಕೆ ತೋಟ ಭೂಮಿ ಸಮೇತ ಸುಮಾರು ಎರಡು ಮೂರು ಅಡಿಗಳನ್ನು ಮೇಲೆದ್ದಿದ್ದು ಅಡಕೆ ಮರಗಳು ಸಂಪೂರ್ಣ ಬಾಗಿ, ಬಿದ್ದು ನಾಶದ ಹಂತ ತಲುಪಿದೆ.
Advertisement
ಮನೆಯೂ ಜಾರಿ ಹೋದೀತು!ಈ ಜಾಗದಲ್ಲಿ ಸುಮಾರು 20 ವರ್ಷಗಳಿಂದ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿರುವ ಜಾಜಿ ಸುರೇಶ್ ಬುಧವಾರ ಬೆಳಗ್ಗೆ ಎದ್ದು ಮನೆಯ ಹೊರಗೆ ಬಂದಾಗಲಷ್ಟೇ ಭೂಮಿ ಐದು ಅಡಿಗಳನ್ನು ಕುಸಿದಿರುವುದು ಕಂಡುಬಂದಿದೆ. ಯಾವುದೇ ಸದ್ದುಗದ್ದಲವಿಲ್ಲದೆ ಜಾಗ ಕುಸಿದಿದೆ. ಮನೆ ಪಕ್ಕದಲ್ಲಿದ್ದ ಬಾಳೆ ಗಿಡಗಳು, ಸಸಿ ಕಣದಲ್ಲಿರುವ ಅಡಕೆ ಸಸಿಗಳು ಮೊದಲ ಹಂತದಲ್ಲಿ ಐದು ಅಡಿ, ನಂತರ ನಿಧಾನವಾಗಿ 25 ಅಡಿಗಳ ತನಕ ನೇರವಾಗಿಯೇ ಕುಸಿದಿದೆ. ಪ್ರತಿ ದಿನ ತೋಟದ ಪಕ್ಕದಲ್ಲಿ ಓಡಾಡುತ್ತಿದ್ದ ಕಾಲುದಾರಿ ಇದ್ದಕ್ಕಿದ್ದಂತೆ ಕತ್ತರಿಸಿದಂತೆ ಹತ್ತು ಅಡಿಗೂ ಹೆಚ್ಚು ತಗ್ಗಿ ಒಮ್ಮೆಗೇ ಅಚ್ಚರಿ- ಆತಂಕ ಸೃಷ್ಟಿಯಾಗುವಂತೆ ಮಾಡಿದೆ.
Related Articles
Advertisement
ಕೊಡಗಿನ ದುರಂತದಲ್ಲೂ ಕಾಣುವುದು ಆರಂಭಿಕ ಹಂತದಲ್ಲಿ ಆಡಳಿತ ಮಾಡಿದ ನಿರ್ಲಕ್ಷ್ಯ. ವರದಹಳ್ಳಿಯ ಜಾಜಿಮನೆಯಲ್ಲಿ ಸಂಭವಿಸಿರುವ ಭೂ ಕುಸಿತ ಕೊಡಗಿನ ಮಾದರಿಯ ಅಪಾಯಗಳನ್ನು ತೋರಿಸುತ್ತಿದೆ. ಭೂ ಕುಸಿತದ ಘಟನೆ ನಡೆದ 24 ಗಂಟೆಗಳ ನಂತರವೂ ತಾಲೂಕು ಆಡಳಿತದ ಪ್ರಮುಖರಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಭೂಮಿ ಜರಿಯುವ ಬದಲು ಒಳಮುಖನಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಭೂಗರ್ಭ ಶಾಸ್ತ್ರಜ್ಞರು ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಕೊನೆ ಪಕ್ಷ ಈ ಕುಸಿತ ಮುಂದುವರಿಯದಂತೆ ಸಲಹೆ ಸೂಚನೆ ಕೊಟ್ಟು ಅಗತ್ಯ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಮ್ಮಿಕೊಳ್ಳುವಂತೆ ಮಾಡಬೇಕಿತ್ತು. ಆದರೆ ಶಾಸಕರ ಹಿಂದಷ್ಟೇ ಸುತ್ತುವರಿಯುವ ತಹಶೀಲ್ದಾರ್ ಮತ್ತು ರೆವಿನ್ಯೂ ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ ಎಂದು ಸ್ಥಳೀಯರಾದ ಶಶಿಕಾಂತ್ ಮಾಳೆದಿಂಬ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಪಡೆದು ತೆರಳಿರುವುದಷ್ಟೇ ಈವರೆಗೆ ಆಗಿರುವ ಪ್ರಗತಿ.
ಜಾಜಿಮನೆಯ ಭಾಗದಲ್ಲಿ ಒಟ್ಟು ಮೂರು ಮನೆಗಳಿವೆ. ಈಗ ಆಗಿರುವ ಮೊದಲ ಹಂತದ ಭೂ ಕುಸಿತದ ಹಿಂದೆ ಇನ್ನೊಂದು ದೊಡ್ಡ ಮಟ್ಟದ ಭೂಕುಸಿತವೇನಾದರೂ ಆದರೆ ಮೂರು ಮನೆಗಳು ಆತಂಕಕ್ಕೆ ಒಳಗಾಗುತ್ತವೆ. ಗುಡ್ಡಗಳ ಮಧ್ಯದಲ್ಲಿರುವ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆ ಅಂತಹ ಆತಂಕವನ್ನಂತೂ ತಂದಿದೆ. ಕಲ್ಮನೆ ಗ್ರಾಪಂ ಅಧ್ಯಕ್ಷ ಕುರಿ ಮಂಜಪ್ಪ, ಕಾರ್ಯದರ್ಶಿ ದತ್ತಾತ್ರೇಯ ಮಾವಿನಸರ, ಎಡಜಿಗಳೇಮನೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಬಿ.ಎಸ್., ಸುಧಾಕರ್ ಮತ್ತಿತರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ವೀಕ್ಷಿಸಿದರು.
ಮಳೆಗೆ ಬೆದರಿದ ಹಾಲಪ್ಪ!ಸಾಗರ ವಿಧಾಸಭಾ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಗುರುವಾರ ತಾಲೂಕಿನ ವಿವಿಧೆಡೆ ಆದ ನೆರೆ ಹಾನಿಗಳ ಸಮೀಕ್ಷೆ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಪಟ್ಟಿಯಲ್ಲಿ ವರದಹಳ್ಳಿಯ ಜಾಜಿ ಸುರೇಶ್ ಮನೆಯ ಪರಿಸ್ಥಿತಿಯ ವೀಕ್ಷಣೆಯೂ ಪಟ್ಟಿಯಲ್ಲಿತ್ತು. ಅವರು ತೋಟದ ಎದುರು ದಂಡೆಗೆ ಬರುವ ಸಂದರ್ಭದಲ್ಲಿ ಮಳೆ ಸುರಿಯುತ್ತಿತ್ತು. ಈ ಹಂತದಲ್ಲಿ ಸ್ಥಳಕ್ಕೆ ಭೇಟಿ ನೀಡದೆ ಹಾಲಪ್ಪ ತಮ್ಮ ಮುಂದಿನ ನೆರೆ ವೀಕ್ಷಣೆಗೆ ತೆರಳಿಬಿಟ್ಟರು.ಆ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಅವರಿಗೆ ಅನಾಹುತದ ಅಗಾಧತೆಯನ್ನು ಮನವರಿಕೆ ಮಾಡಿ ಸ್ಥಳಕ್ಕೆ ಭೇಟಿ ಕೊಡುವಂತಾಗಲು ಒತ್ತಾಯಿಸಿದರು. ಇಲ್ಲಿಂದಲೇ ಕಾಣಿಸುತ್ತದೆಯಲ್ಲ ಎಂದು ಹಾಲಪ್ಪ ಕಾರು ಚಾಲಕನಿಗೆ ರೈಟ್ ರೈಟ್ ಹೇಳಿದರು. ಶಾಸಕರು ಬಂದಿದ್ದರೆ ಅವರ ಮೂಲಕ ಭೂ ಗರ್ಭ ಶಾಸ್ತ್ರಜ್ಞರನ್ನು ಸ್ಥಳಕ್ಕೆ ಭೇಟಿ ಕೊಡುವಂತೆ ಮಾಡಬಹುದಿತ್ತು. ಕೊಡಗಿನಂತೆ ಮನೆಗಳೇ ತೇಲಿ ಹೋಗದಂತೆ ಅವರಾದರೂ ಸಲಹೆ ನೀಡುತ್ತಿದ್ದರೇನೋ ಎಂಬ ನಿರೀಕ್ಷೆ ಹೊಂದಿದ್ದ ಸುರೇಶ್ ಹಾಗೂ ಸುಜಾತಾ ದಂಪತಿ ಶಾಸಕರು ಬರುವುದಿಲ್ಲ ಎಂಬುದನ್ನು ಅರಿತು ತೀವ್ರ ನಿರಾಶರಾದರು.