Advertisement

ಸಾಗರ: ಅರಣ್ಯ ಭೂಮಿ ಸಾಗುವಳಿ ಅರ್ಜಿ ವಜಾ; ಧರಣಿ

05:34 PM Jan 27, 2022 | Shwetha M |

ಸಾಗರ: ಅರಣ್ಯ ಭೂಮಿ ಸಾಗುವಳಿ ಅರ್ಜಿಯನ್ನು ವಜಾಗೊಳಿಸುತ್ತಿರುವ ಆಡಳಿತದ ನಿರ್ಧಾರವನ್ನು ಖಂಡಿಸಿ ಗುರುವಾರ ರೈತ ಸಂಘ ಮತ್ತು ಪಾರಂಪರಿಕಾ ಅರಣ್ಯಹಕ್ಕು ಹೋರಾಟ ಸಮಿತಿ ಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಜಿಲ್ಲೆಯಲ್ಲಿ ಅರಣ್ಯಭೂಮಿ ಸಾಗುವಳಿ ಮಾಡಿದವರ ಅರ್ಜಿಯನ್ನು ಅರಣ್ಯ ಹಕ್ಕು ಉಪವಿಭಾಗ ಮಟ್ಟದ ಸಮಿತಿ ವಜಾಗೊಳಿಸುತ್ತಿದೆ. ನಮ್ಮಲ್ಲಿ ಸುಮಾರು ಎರಡೂವರೆ ಸಾವಿರ ಅರ್ಜಿಯನ್ನು ಎಸಿ ವಜಾಗೊಳಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಹಲವು ದಶಕಗಳಿಂದ ಅರಣ್ಯಭೂಮಿಯನ್ನು ಸಾಗುವಳಿ ಮಾಡುತ್ತಾ, ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ರೈತರು ಈಗ ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ. ಉಪವಿಭಾಗಾಧಿಕಾರಿಗಳ ಈ ನಡೆ ಖಂಡನೀಯ ಎಂದರು.

ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದವರ 500ಕ್ಕೂ ಹೆಚ್ಚು ರೈತರ ಅರ್ಜಿ ತಿರಸ್ಕೃತವಾಗಿದೆ. ಈ ಭಾಗದಲ್ಲಿ ಬಹುತೇಕ ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದು 70 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆ ಕಂಡುಕೊಂಡಿದ್ದಾರೆ. 1954-55ರಲ್ಲಿ ಇಲ್ಲಿಗೆ ಬಂದು ಸಾಗುವಳಿ ಮಾಡಿಕೊಂಡಿದ್ದಾರೆ. ಮೂರು ತಲೆಮಾರಿನಿಂದಲೂ ಸಾಗುವಳಿ ಮಾಡಿಕೊಂಡವರಿದ್ದಾರೆ. ಸಾಗುವಳಿ ಮಾಡುತ್ತಿರುವ ರೈತರಿಗೆ ಈತನಕ ಹಕ್ಕುಪತ್ರ ನೀಡಿಲ್ಲ. 2 ಸಾವಿರ ಎಕರೆ ಮೀಸಲಿಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಈತನಕ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡಿಲ್ಲ. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಬಂದಿದೆ. ಆದರೆ ಸಾಗುವಳಿದಾರರಿಗೆ ಈತನಕ ಹಕ್ಕುಪತ್ರ ಕೊಡದ ನಿಷ್ಕ್ರಿಯ ಜನಪ್ರತಿನಿಧಿಗಳು ನಮ್ಮ ನಡುವೆ ಇರುವುದು ಖಂಡನೀಯ ಎಂದರು.

ಕಳೆದ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದು ಪಾರಂಪಾರಿಕ ಅರಣ್ಯ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. 25 ವರ್ಷ ಸಾಗುವಳಿ ಮಾಡಿದರೆ ಹಕ್ಕು ಕೊಡಬಹುದು ಎಂದು ನಿರ್ಧರಿಸಲಾಗಿದೆ. ಈತನಕ ಹಕ್ಕುಪತ್ರ ಕೊಟ್ಟಿಲ್ಲ. ಕಳೆದ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ಹೊರತುಪಡಿಸಿ ಇತರ ಯಾವುದೇ ಜನಪ್ರತಿನಿಧಿಗಳು ಸದನದ ಒಳಗೆ ಅರಣ್ಯಭೂಮಿ ಸಾಗುವಳಿದಾರರ ಬಗ್ಗೆ ಧ್ವನಿ ಎತ್ತಿಲ್ಲ. ಐಎಎಸ್, ಐಎಫ್‌ಎಸ್ ಅಧಿಕಾರಿಗಳಿಗೆ ಅರಣ್ಯ ಭೂಮಿ ಸಾಗುವಳಿದಾರರು, ಮುಳುಗಡೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಹಕ್ಕುಪತ್ರ ಇಲ್ಲದೆ ಇರುವುದರಿಂದ ರೈತರು ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಉಪವಿಭಾಗೀಯ ಮಟ್ಟದ ಅರಣ್ಯಹಕ್ಕು ಸಮಿತಿ ಕೂಡಲೇ ತಿರಸ್ಕೃತವಾದ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಲೆನಾಡು ಭೂಹಕ್ಕು ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿ, ಅರಣ್ಯಭೂಮಿ ಸಾಗುವಳಿದಾರರಿಗೆ ಮತ್ತು ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ವಿಫಲವಾಗಿರುವ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಹಾಲಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಹಿಂದೆ ಯುಪಿಎ ಸರ್ಕಾರ ಇದ್ದಾಗ ಸಂಸದರು ಅರಣ್ಯ ಭೂಮಿ ಮಂಜೂರು ಮಾಡಲು ಇರುವ 75 ವರ್ಷ ಮಿತಿ ತೆಗೆದು, 25 ವರ್ಷಕ್ಕೆ ಇಳಿಸಬೇಕು ಎಂದು ಹೋರಾಟ ಮಾಡಿದ್ದರು. ಈಗ ಅವರದ್ದೇ ಸರ್ಕಾರವಿದ್ದರೂ ಅರಣ್ಯಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಪ್ರಯತ್ನಿಸದೆ ಇರುವುದು ಅವರ ಅಸಮರ್ಥತೆಗೆ ಸಾಕ್ಷಿಯಾಗಿದೆ. 25 ವರ್ಷ ದಾಖಲೆ ಪಡೆದು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಕೊಡಲು ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು, ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶರತ್, ಹೋರಾಟ ಸಮಿತಿಯ ಹುರಳಿ ನಾರಾಯಣಪ್ಪ, ಕನ್ನಪ್ಪ, ಗಣಪತಿಯಪ್ಪ, ರಮೇಶ್ ಕೆ.ಟಿ. ಐಗಿನಬೈಲು, ರವಿ ಬಿಳಿಸಿರಿ, ರಾಜು ದೇವಾಡಿ, ಈಳಿ ಮಂಜುನಾಥ್, ವಸಂತಕುಮಾರ್ ಎನ್.ಡಿ., ಮಹ್ಮದ್ ಖಾಸಿಂ, ಎಲ್.ವಿ.ಸುಭಾಷ್, ವೀರಭದ್ರಪ್ಪ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next