Advertisement

ಬೆಳಗ್ಗೆ ಜನ ಬರಲ್ಲ; ಸಂಜೆ ಬೀಗ ತೆಗೆಯಲ್ಲ!

05:37 PM Apr 19, 2019 | Naveen |

ಸಾಗರ: ನಗರದ ಹೊರವಲಯದ ವರದಹಳ್ಳಿ ರಸ್ತೆಯಲ್ಲಿ ಹೆಲಿಪ್ಯಾಡ್‌ ಎದುರಿನ ಪವಿತ್ರ ವನವನ್ನು ಅದನ್ನು ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಜನ ಬಳಕೆಗೆ ಬಿಡದೆ ಸಂರಕ್ಷಿತ
ಅರಣ್ಯದ ಮಾದರಿಯಲ್ಲಿ ನೋಡಿಕೊಳ್ಳುತ್ತಿದೆ ಎಂಬ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ
ಮಾಡಿ ಅಪರೂಪದ ಮರ ಗಿಡಗಳು, ನೀರಿನ ಝರಿ, ಪಾದಚಾರಿ ಮಾರ್ಗ, ಚಿಣ್ಣರ ಆಟದ ಉಪಕರಣಗಳು, ವಿಶ್ರಾಂತಿ ಕಟ್ಟೆ,
ಚಾವಡಿ ಮೊದಲಾದವುಗಳನ್ನು ನಿರ್ಮಾಣ ಮಾಡಿರುವ ಅರಣ್ಯ ಇಲಾಖೆ ಸಂಜೆ 5-45 ಆಗುತ್ತಿದ್ದಂತೆ ಒಳಬರುವ ಜನರನ್ನೂ ತಳ್ಳಿ
ಬೀಗ ಹಾಕುತ್ತಿರುವುದರಿಂದ ಪಾರ್ಕ್‌ ಕೇವಲ ದೂರದಿಂದ ಜನರ ಕಣ್ಣು ತಂಪು ಮಾಡುವುದಕ್ಕೆ ಸೀಮಿತವಾಗಿದೆ.

ಪವಿತ್ರ ವನದ ಎದುರಿನ ಗೇಟ್‌ನಲ್ಲಿಯೇ ಸಾರ್ವಜನಿಕರ ಪ್ರವೇಶ ಅವಧಿಯ ಫಲಕ ಕಾಣುತ್ತಿದ್ದು, ಬೆಳಗ್ಗೆ 10ರಿಂದ ಸಂಜೆ ಆರರವರೆಗೆ ಮಾತ್ರ ಪ್ರವೇಶ ಎಂಬ ಸೂಚನೆ ಕಾಣುತ್ತದೆ. ಬೆಳಗಿನ ಅವಧಿಯಲ್ಲಿ ಸಾರ್ವಜನಿಕರು ಇತ್ತ ಸುಳಿಯುವುದಿಲ್ಲ. ಈ ಮುನ್ನ ಹತ್ತಿರದ ವಿದ್ಯಾರ್ಥಿ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮರದ ಆಶ್ರಯದಡಿ
ಓದುವುದಕ್ಕಾಗಿ ಬರುತ್ತಿದ್ದರೂ ಈಗ ಪರೀಕ್ಷೆ ಮುಗಿದಿರುವುದರಿಂದ ಅವರು ಬರುವುದಿಲ್ಲ. ಮಧ್ಯಾಹ್ನದ ಬಿಸಿಲು ಇಳಿದು ತುಸು ಸುತ್ತಾಡ ಬಯಸುವ ವೃದ್ಧರು, ಮಕ್ಕಳು ಇತ್ತ ಬರುವ ಸಮಯದಲ್ಲಿ ಗೇಟ್‌ ಗೆ ಹಾಕಿದ ಬೀಗ ನೋಡಿ ನಿರಾಶರಾಗುವ
ಪರಿಸ್ಥಿತಿ ಪ್ರತಿದಿನದ ದೃಶ್ಯವಾಗಿದೆ.

ಸಾಗರ ನಗರದ ವಿಶೇಷಗಳ ಹೊರತಾಗಿ ನಗರದೊಳಗೆ ವ್ಯವಸ್ಥಿತ ಪಾರ್ಕ್‌ನ ಕೊರತೆ ಎದ್ದು ಕಾಣುತ್ತದೆ. ನೆಹರೂ ಮೈದಾನದ
ಪಕ್ಕದಲ್ಲಿನ ನಗರಸಭೆಯ ಉದ್ಯಾನವನ ನಿರ್ವಹಣೆಯಿಲ್ಲದೆ ಜಾನುವಾರುಗಳ ಮೇವು ತಾಣವಾಗಿದೆ. ಶಾಸಕ ಎಚ್‌.
ಹಾಲಪ್ಪ ಇದರತ್ತ ವಕ್ರದೃಷ್ಟಿ ಬೀರಿದ್ದು, ಇದೇ ಜಾಗದಲ್ಲಿ ರಂಗಮಂದಿರ ನಿರ್ಮಾಣದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಗರದ ಇತರ ಕೆಲವು ಭಾಗಗಳಲ್ಲಿ ವಾಕಿಂಗ್‌ ಟ್ರಾಕ್‌ ಲಭ್ಯವಿದೆಯಾದರೂ ಅತ್ಯುತ್ತಮ ಹಸಿರು ವಾತಾವರಣ ಮಾತ್ರ ವರದಹಳ್ಳಿ ರಸ್ತೆಯ
ಪವಿತ್ರ ವನದಲ್ಲಿ ಮಾತ್ರ ಲಭ್ಯ.

ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಚೇರಿ ಸಮಯದ ಅನ್ವಯ ಪಾರ್ಕ ನಿರ್ವಹಣೆಯಾಗುತ್ತಿರುವುದರಿಂದ ಈ ಸಮಸ್ಯೆ ಕಾಡುತ್ತಿದೆ. ಜನಪರವಾಗಿರಬೇಕಾದ ಅರಣ್ಯ ಇಲಾಖೆ ಸಬೂಬುಗಳನ್ನು ಹೇಳದೆ ಕೊನೆಪಕ್ಷ ರಾತ್ರಿ 8 ರವರೆಗಾದರೂ ಉದ್ಯಾನವನದ ಗೇಟ್‌ ತೆರೆದಿರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next