ಸಾಗರ: ತಾಲೂಕಿನಲ್ಲಿ 21 ಡೆಂಗ್ಯೂ, 11 ಇಲಿಜ್ವರ ಪ್ರಕರಣ ಪತ್ತೆಯಾಗಿದೆ. ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ಡೆಂಗ್ಯೂ, ಇಲಿಜ್ವರ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಜನರಿಗೆ ಸಾಂಕ್ರಾಮಿಕ ಕಾಯಿಲೆ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ 9 ಮತ್ತು ಗ್ರಾಮಾಂತರ ಪ್ರದೇಶದಲ್ಲಿ12 ಡೆಂಗ್ಯೂ ಜ್ವರ ಪತ್ತೆಯಾಗಿದ್ದರೆ, ಸಿರಿವಂತೆಯಲ್ಲಿ 6, ಅರಲಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 5 ಇಲಿಜ್ವರ ಪ್ರಕರಣ ಪತ್ತೆಯಾಗಿದೆ. ಸೂಕ್ತ ಮುಂಜಾಗೃತೆ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಮಳೆ ವಿಪರೀತವಾಗಿ ಬರುತ್ತಿರುವುದರಿಂದ ಶುದ್ಧ ನೀರು ಮತ್ತು ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಸೇರಿದಂತೆ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ವೈದ್ಯಾಧಿಕಾರಿಗಳು ಅತಿ ಎಚ್ಚರಿಕೆಯಿಂದ ಇರಬೇಕು. ಗ್ರಾಮಾಂತರ ಪ್ರದೇಶದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನಜಾಗೃತಿಗೊಳಿಸುವಂತೆ ಹೇಳಿದರು.
ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಆರೋಗ್ಯ ರಕ್ಷಾ ಸಮಿತಿಯ ಜ್ಯೋತಿ ನಂಜುಂಡಸ್ವಾಮಿ, ವಿನೋದ್‌ರಾಜ್, ಕೃಷ್ಣ ಶೇಟ್ ಇನ್ನಿತರರು ಹಾಜರಿದ್ದರು.