Advertisement

ಶಾಲೆಯಲ್ಲೇ ಮಕ್ಕಳಿಗೆ ಪ್ರಜಾತಂತ್ರದ ಅನುಭವ!

04:41 PM Jun 23, 2019 | Naveen |

ಸಾಗರ: ಇತ್ತೀಚಿನ ದಿನಗಳಲ್ಲಿ ಸಾಗರ ತಾಲೂಕು ಪದೇ ಪದೇ ಚುನಾವಣೆಗಳನ್ನು ಕಾಣುತ್ತಿದೆಯಾದರೂ, ಮಕ್ಕಳಿಗೆ ಚುನಾವಣೆಯ ಮತದಾನದ ದಿನ ರಜೆ ಪಡೆಯುವ ಅನುಭವ ಮಾತ್ರವಿತ್ತು. ಆದರೆ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್ ಆಫ್‌ ಎಕ್ಸಲೆನ್ಸ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಮಕ್ಕಳೇ ಮತದಾರರಾಗಿದ್ದರು, ಅಭ್ಯರ್ಥಿಗಳಾಗಿದ್ದರು ಮತ್ತು ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಯಿತು. ಇದು ಯಾವುದೇ ರೀತಿಯ ಅಣಕು ಚುನಾವಣೆಯಾಗಿರದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕರನ್ನು ಆರಿಸಿಕೊಳ್ಳಲು ನಡೆಸಿದ ಅಪ್ಪಟ ಜನತಾಂತ್ರಿಕತೆಯಾಗಿತ್ತು!

Advertisement

ಜೂ. 10ರಂದು ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. 11ಕ್ಕೆ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ಕೆಲವು ನಿಬಂಧನೆಗಳನ್ನು ದಾಟಿದರೆ ಮಾತ್ರ ನಾಮಪತ್ರ ಸಿಂಧು ಆಗುವ ನಿಯಮ ರೂಪಿಸಲಾಗಿತ್ತು ಎಂದು ಮಾಹಿತಿ ನೀಡುವ ಶಾಲೆಯ ಶಿಕ್ಷಕ, ಮುಖ್ಯ ಚುನಾವಣಾಧಿಕಾರಿ ಸಂದೀಪ್‌ ಶೆಟ್ಟಿ, ಈ ವರ್ಷದ ಚುನಾವಣೆಯಲ್ಲಿ 10ನೇ ತರಗತಿ ಓದುತ್ತಿರುವವರಿಗೆ ಮಾತ್ರ ಅರ್ಹತೆ ಕೊಡಲಾಗಿತ್ತು. ಅವರಲ್ಲೂ 9ರಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದವರು, ಕನಿಷ್ಟ ತಾಲೂಕು ಮಟ್ಟದ ಕ್ರೀಡೆ ಅಥವಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು, ಶಾಲೆಯ ಪ್ರಾರ್ಥನೆ ಹಾಗೂ ಸಂವಿಧಾನದ ಮೂಲ ಆಶಯಗಳ ಅರಿವಿದ್ದವರು ಮಾತ್ರ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾರೆ. ಈ ಬಾರಿ ನಾಮಪತ್ರ ಸಲ್ಲಿಸಿದ ಮೂವರು ಮಕ್ಕಳು ಜೂ. 15ರಂದು ನಡೆದ ಪರಿಶೀಲನೆ ಸಂದರ್ಭದಲ್ಲಿ ಷರತ್ತುಗಳನ್ನು ಸಮರ್ಥವಾಗಿ ಪೂರೈಸಿದರು ಎಂದರು.

ಜೂನ್‌ 17ರಿಂದ ಸ್ಪರ್ಧೆಯಲ್ಲಿದ್ದ ಅಕ್ಷಯಕುಮಾರ್‌, ನೀಲೇಂದ್ರ ಹಾಗೂ ಆತ್ಮಶ್ರೀ ಬಹಿರಂಗ ಪ್ರಚಾರಕ್ಕಿಳಿದರು. ಶುಕ್ರವಾರಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಯಿತು. ಶನಿವಾರ 10ರಿಂದ 11-30ರವರೆಗೆ ಮತದಾನ ನಡೆದರೆ 11-45ಕ್ಕೆ ಮತ ಎಣಿಕೆ ನಡೆಸಿ 12-30ಕ್ಕೆ ಫಲಿತಾಂಶ ಘೋಷಿಸಲಾಯಿತು. ಎಲ್ಲ ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಶಿಕ್ಷಕರಾದ ನವೀನ್‌, ರಾಜೀವ್‌, ಶ್ರೀಧರ್‌ ಭಟ್, ಉಮೇಶ್‌, ಗೌತಮಿ, ಸುನಿಲ್, ಕಾವ್ಯ ಮೊದಲಾದವರು ಚುನಾವಣಾ ಕಾರ್ಯ ನಿರ್ವಹಿಸಿದರು.

ಚುನಾವಣಾ ವೀಕ್ಷಕರಾಗಿ ಪಾಲ್ಗೊಂಡ ಉಪ ಪ್ರಾಚಾರ್ಯ ಅರವಿಂದ್‌ ಗುರ್ಜರ್‌, ಮಕ್ಕಳಿಗೆ ಮತ ಹಾಕಲು ಮತಪತ್ರಗಳನ್ನು ಒದಗಿಸಲಾಗಿತ್ತು. ಅದರಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಹೆಸರು ಮಾತ್ರ ನಮೂದಾಗಿತ್ತು. ಮತದಾನ ಮಾಡಿದ ಮಕ್ಕಳ ಬೆರಳಿಗೆ ಶಾಹಿ ಕೂಡ ಹಾಕಲಾಗಿತ್ತು. ಮತದಾನದ ನಂತರ ಮತ ಪೆಟ್ಟಿಗೆಯನ್ನು ಸ್ಟ್ರಾಂಗ್‌ ರೂಂಗೆ ತೆಗೆದುಕೊಂಡು ಹೋಗಲಾಗಿತ್ತು. ಈ ನಡುವಿನ ಸಮಯದಲ್ಲಿ ನಾನು ಮಕ್ಕಳಿಗೆ ಬೇರೆ ಬೇರೆ ದೇಶಗಳ ಚುನಾವಣಾ ವ್ಯವಸ್ಥೆ, ಜನಪ್ರತಿನಿಧಿಗಳಾಗುವವರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದೆ ಎಂದರು.

ಚುನಾವಣೆಯಲ್ಲಿ ಚಲಾವಣೆಯಾದ 460 ಮತಗಳಲ್ಲಿ ಅಕ್ಷಯಕುಮಾರ್‌ 253 ಮತಗಳನ್ನು ಪಡೆದು ಶಾಲಾ ನಾಯಕರಾಗಿ ಚುನಾಯಿತರಾದರು. ನೀಲೇಂದ್ರ 186 ಮತಗಳನ್ನು ಹಾಗೂ 15 ಮತಗಳನ್ನು ಆತ್ಮಶ್ರೀ ಪಡೆದರು. ಆರು ಮತಗಳು ತಿರಸ್ಕೃತವಾದವು. ಮತಪತ್ರದಲ್ಲಿ ನೋಟಾ ಆಯ್ಕೆ ಇರಲಿಲ್ಲ. ಸಂದೀಪ್‌ ಶೆಟ್ಟಿ ಶಾಲೆಯ ಚುನಾವಣೆಯ ಗಂಭೀರತೆಯ ಬಗ್ಗೆ ಮಾತನಾಡಿ, ಆಯ್ಕೆಯಾದ ಶಾಲಾ ನಾಯಕ ಶಾಲೆಯ ಶಿಸ್ತು, ಹೊಸದರ ಅಳವಡಿಕೆ ಮೊದಲಾದ ಪ್ರಮುಖ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ಅಥವಾ ವಿರೋಧ ಮಂಡಿಸಲು ಅವಕಾಶವಿದೆ. ಅವರು ಶಾಲೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೂಡ ನೀಡಬಹುದು. ಅಧಿಕಾರಾವಧಿಯ ಒಂದು ವರ್ಷದಲ್ಲಿ ಶಾಲೆಯ ಎಲ್ಲ ಚಟುವಟಿಕೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಅವರು ಪ್ರತಿನಿಧಿಸುತ್ತಾರೆ. ಮುಂದಿನ ಒಂದು ವಾರದಲ್ಲಿ ಪ್ರತಿ ತರಗತಿಯ ನಾಯಕರನ್ನು ಆರಿಸಿ ಶಾಲಾ ಸಂಸತ್ತು ರೂಪಿಸಲಾಗುತ್ತದೆ. ಮುಂದಿನ ಶನಿವಾರ ಅವರೆಲ್ಲರೂ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ತಿಳಿಸಿದರು.

Advertisement

ಚುನಾವಣೆ ಭ್ರಷ್ಟಾಚಾರ ರಹಿತವಾಗಿತ್ತು. ಹಣವಲ್ಲದಿದ್ದರೂ ಮಕ್ಕಳಿಗೆ ಚಾಕಲೇಟ್, ಜ್ಯೂಸ್‌, ಐಸ್‌ಕ್ರೀಮ್‌ ತರಹದ ಹಂಚಿಕೆ ಇರಲಿಲ್ಲ. ಅಷ್ಟಕ್ಕೂ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪರೀಕ್ಷೆಯಲ್ಲಿಡುವ ವಿಜಿಲೆನ್ಸ್‌ ಕೂಡ ಈ ಚುನಾವಣೆಯಲ್ಲಿತ್ತು!

Advertisement

Udayavani is now on Telegram. Click here to join our channel and stay updated with the latest news.

Next