Advertisement

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಹೈಡ್ರಾಮಾ : ಶಾಸಕರ ಬೆಂಬಲಿಗರಿಂದ ದೈಹಿಕ ಹಲ್ಲೆ?

05:38 PM Mar 17, 2022 | Team Udayavani |

ಸಾಗರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ 56ನೇ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಂಬಂಧ ತೀವ್ರ ಗೊಂದಲದ ವಾತಾವರಣ ಗುರುವಾರ ಸೃಷ್ಟಿಯಾಗಿತ್ತು.

Advertisement

ಬೆಳವಣಿಗೆಗಳ ಕುರಿತು ಖುದ್ದು ಆಸಕ್ತಿ ತೋರಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಅವರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷ, ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಏಕಾಏಕಿ ನೂತನ ಅಧ್ಯಕ್ಷರನ್ನಾಗಿ ಹರನಾಥರಾವ್ ಮತ್ತಿಕೊಪ್ಪ ಅವರನ್ನು ಘೋಷಿಸಿ ಅಧಿಕಾರ ಹಸ್ತಾಂತರವನ್ನೂ ನಡೆಸಿದ ಘಟನೆ ನಡೆದಿದೆ. ಈ ಬೆಳವಣಿಗೆಗಳ ಬೆನ್ನಲ್ಲಿ ಸಭೆಯ ಈ ಮೊದಲಿನ ಬೆಳವಣಿಗೆಗಳನ್ನು ಅಸಿಂಧು ಎಂದು ಘೋಷಿಸಿರುವ ಉಪಾಧ್ಯಕ್ಷ ಎನ್.ಎಚ್.ಶ್ರೀಪಾದಹೆಗಡೆ ನಿಸರಾಣಿ ಪರ್ಯಾಯವಾಗಿ ವಾರ್ಷಿಕ ಸಭೆಯನ್ನು ದಳವಾಯಿ ದಾನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಿ ತಮ್ಮನ್ನು ನೀತನ ಅಧ್ಯಕ್ಷರನ್ನಾಗಿ ಆರಿಸಿದ ಪ್ರಕ್ರಿಯೆ ನಡೆಸಲು ಕೂಡ ಯಶಸ್ವಿಯಾಗಿದ್ದಾರೆ. ಈ ಎಲ್ಲ ಚಟುವಟಿಕೆಗಳ ಹಿನ್ನೆಲೆಯಲ್ಲಿ ಎಂಡಿಎಫ್‌ನ ನೂತನ ಅಧ್ಯಕ್ಷರ ಕುರಿತಾದ ಗೊಂದಲ ಮುಂದುವರೆಯುವಂತಾಗಿದೆ.

ಎಲ್‌ಬಿ ಮತ್ತು ಎಸ್‌ಬಿಎಸ್ ಮಹಾವಿದ್ಯಾಲಯ, ಪ್ರಗತಿ ಸಂಯುಕ್ತ ಶಾಲೆ, ಎಂಡಿಎಫ್ ಸ್ವತಂತ್ರ ವಿಜ್ಞಾನ ಪಿಯು ಕಾಲೇಜು ಸೇರಿದಂತೆ ಬೇರೆಬೇರೆ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಸರ್ವಸದಸ್ಯರ ಸಭೆಯನ್ನು ಇಲ್ಲಿನ ದೇವರಾಜ ಅರಸು ಕಲಾಭವನದಲ್ಲಿ ಕರೆಯಲಾಗಿತ್ತು. ನಿರೀಕ್ಷೆಯಂತೆ ಗೊಂದಲದ ಗೂಡಾಗಿಯೇ ಆರಂಭವಾದ ಸಭೆಯ ಆರಂಭದಲ್ಲಿ ದೈಹಿಕ ಹಲ್ಲೆಯ ಪ್ರಕರಣ ಕೂಡ ನಡೆದಿದೆ. ಶಾಸಕ ಹಾಲಪ್ಪ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಪ್ರವೇಶಕ್ಕೆ ಎಂಡಿಎಫ್ ಕಾರ್ಯದರ್ಶಿ ಜಗದೀಶ್ ಗೌಡ ಅವರು ತಡೆ ಒಡ್ಡಿದ್ದು ಶಾಸಕರ ಬೆಂಬಲಿಗರು ಹಾಗೂ ಶ್ರೀಪಾದಹೆಗಡೆ ಸಂಗಡಿಗರ ನಡುವಿನ ತಳ್ಳಾಟ, ಗುದ್ದಾಟಗಳಿಗೆ ಕೂಡ ದೇವರಾಜ ಅರಸು ಸಭಾಂಗಣದ ಹೊರಭಾಗ ಸಾಕ್ಷಿಯಾಗಬೇಕಾಯಿತು. ಪ್ರಕರಣದಲ್ಲಿ ಗಾಯಗೊಂಡಿದ್ದಾರೆನ್ನಲಾದ ಜಗದೀಶ್ ಗೌಡ ನಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇದನ್ನೂ ಓದಿ : ಪ್ರಮೋದ್ ಸಾವಂತ್ ನೂತನ ಸಂಪುಟದಲ್ಲಿ ಎಂಜಿಪಿ ಮಿತ್ರ ಪಕ್ಷದ ಶಾಸಕರಿಗೂ ಸಿಗಲಿದೆಯೇ ಸ್ಥಾನ ?

Advertisement

ಹೊಡೆದಾಟದ ಘಟನೆ ನಂತರ ಸಭೆ ನಡೆಯುವಂತಹ ಪೂರಕ ವಾತಾವರಣ ಇಲ್ಲದ ಕಾರಣ ಸರ್ವಸದಸ್ಯರ ಸಭೆಯನ್ನು ೧೫ ದಿನಗಳ ಕಾಲ ಮುಂದೂಡಬೇಕು ಎಂದು ಉಪಾಧ್ಯಕ್ಷ ಶ್ರೀಪಾದಹೆಗಡೆ ನಿಸರಾಣಿ ಹಾಗೂ ಅವರ ಬೆಂಬಲಿಗ ಸದಸ್ಯರು ತೀವ್ರ ತರದಲ್ಲಿ ವಾದಿಸಿದರು. ಆದರೆ ಸಭೆ ನಡೆಯಲೇಬೇಕು ಎಂದು ಪಟ್ಟುಹಿಡಿದ ಶಾಸಕ ಹಾಲಪ್ಪ ಹಾಗೂ ಹರನಾಥರಾವ್ ಅಧ್ಯಕ್ಷತೆಯ ಪರವಿದ್ದ ಗುಂಪು ಪ್ರತಿವಾದ ಮಂಡಿಸಿದರು. ಈ ಹಂತದಲ್ಲಿ ಘೋಷಣೆಗಳು ಹೆಚ್ಚಾಗಿ ಸಭೆಯಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಒಂದು ಹಂತದಲ್ಲಿ ಶಾಸಕರೇ ಮೃತ ಸದಸ್ಯರು, ಗಣ್ಯರಿಗೆ ಸಂತಾಪ ಓದುವ ಮೂಲಕ ಸಭೆಯ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ನಂತರವೂ ಗೊಂದಲದ ವಾತಾವರಣವೇ ಮುಂದುವರೆಯಿತು. ಒಂದು ಹಂತದಲ್ಲಿ ಹರನಾಥರಾವ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸಭೆಯ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಘೋಷಿಸಿದರು. ಇದು ಸಭೆಯಲ್ಲಿದ್ದ ಶ್ರೀಪಾದ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಹರನಾಥರಾವ್‌ರನ್ನು ಸಭೆಯಲ್ಲಿಯೇ ಅಭಿನಂದಿಸುವ ಚಟುವಟಿಕೆಯೂ ನಡೆಯಿತು. ಗದ್ದಲದಲ್ಲಿ ಶ್ರೀಪಾದ್ ಹೆಗಡೆಯವರಿಗೂ ಮಾಲಾರ್ಪಣೆ ಮಾಡಿದರು. ಹರನಾಥರಾವ್ ಶ್ರೀನಿವಾಸ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ವೇದಿಕೆಯಿಂದ ನಿರ್ಗಮಿಸಿದ ಶ್ರೀಪಾದ್‌ಹೆಗಡೆ ಬಾವಿಗಿಳಿದು ಸಂಗಡಿಗರ ಜೊತೆಗೆ ಪ್ರತಿಭಟನೆಗಿಳಿದರು.

ಸಭೆಯ ಮುಕ್ತಾಯ ಘೋಷಿಸಿದ ಶ್ರೀನಿವಾಸ್, ಹರನಾಥರಾವ್ ಹಾಗೂ ಶಾಸಕ ಹಾಲಪ್ಪ ಎಂಡಿಎಫ್ ಕಚೇರಿಗೆ ತೆರಳಿ ಅಧಿಕಾರ ಹಸ್ತಾಂತರವನ್ನು ಪರಸ್ಪರ ಮಾಲಾರ್ಪಣೆ ಮಾಡುವ ಮೂಲಕ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್, ನನ್ನೆದುರು ಹರನಾಥರಾವ್ ಅವರ ಹೆಸರಿನ ಹೊರತು ಉಳಿದ ಯಾರ ಹೆಸರೂ ಅಧ್ಯಕ್ಷ ಸ್ಥಾನಕ್ಕೆ ಇಲ್ಲದಿದ್ದ ಕಾರಣ ಅವರನ್ನೇ ಅಧ್ಯಕ್ಷರನ್ನಾಗಿ ಘೋಷಿಸಿದ್ದೇನೆ. ಬಾಹ್ಯ ಶಕ್ತಿ, ದುಷ್ಟಶಕ್ತಿಗಳು ಗುಪ್ತವಾಗಿ ಸೇರಿ ಎಂಡಿಎಫ್ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯುವ ಪ್ರಯತ್ನ ನಡೆಸಿವೆ. ಸಂಸ್ಥೆಗೆ ಸೇರಿದ ೧೬ ಎಕರೆ ಜಾಗದತ್ತ ರಿಯಲ್ ಎಸ್ಟೇಟ್ ಮಾಫಿಯಾ ಕಣ್ಣುಹಾಕಿರುವ ಕಾರಣವೂ ಈ ಬೆಳವಣಿಗೆಗಳ ಹಿಂದೆ ಇರಬಹುದು. ಸಭೆಯಲ್ಲಿ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ನಾನೇ ಆಗಮಿಸಿದರೂ ಅದನ್ನು ತಡೆಯುವಲ್ಲಿ ಸಫಲನಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಹಾಲಪ್ಪ, ಎಲ್‌ಬಿ ಕಾಲೇಜು ನಾನು ಓದಿದ ಸಂಸ್ಥೆಯಾಗಿದೆ. ಇಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ಅಧ್ಯಕ್ಷರು ಸಭೆ ನಡೆಯುತ್ತಿರುವ ಕುರಿತು ಮಾಹಿತಿ ನೀಡಿ ಹಾಜರಾಗುವಂತೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ನಾನು ಪಾಲ್ಗೊಂಡಿದ್ದೆ. ಶ್ರೀಪಾದ ಹೆಗಡೆ ತಾವು ಆಕಾಂಕ್ಷಿ ಎಂದಿದ್ದರು. ಅವರಿಗೆ ಮುಂದೆ ಅವಕಾಶವಿದೆ ಎಂದು ಸಮಾಧಾನ ಹೇಳಿದ್ದೆ. ಮೂರು ತಲೆಮಾರುಗಳನ್ನು ಒಳಗೊಂಡಂತೆ ಸಂಸ್ಥೆಯ ಆಡಳಿತ ಮಂಡಳಿಯನ್ನು ರೂಪಿಸಬೇಕು ಎಂಬುದು ನನ್ನ ಇಚ್ಛೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next