Advertisement

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು

03:41 PM Jul 02, 2022 | Team Udayavani |

ಸಾಗರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರವಾಸಿ ಮಂದಿರದ ಎದುರು ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪೇಪರ್ ಹಂಚಲು ಬರುತ್ತಿದ್ದ ಗಣೇಶ್(20) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ನಡೆದಿದೆ.

Advertisement

ಬೆಳಲಮಕ್ಕಿಯ ಸುರೇಶ್ ಮತ್ತು ಉಮ ಅವರ ಪುತ್ರರಾಗಿದ್ದ ಗಣೇಶ್ ಶನಿವಾರ ಬೆಳಿಗ್ಗೆ 5;15 ರ ಸುಮಾರಿಗೆ ಮನೆಯಿಂದ ಸೈಕಲ್ ತೆಗೆದುಕೊಂಡು ಪೇಪರ್ ಹಂಚಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಎದುರು ಬೆಂಗಳೂರಿನಿಂದ ಯಲ್ಲಾಪುರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸೈಕಲ್‌ನ ಮುಂದಿನ ಚಕ್ರವೇ ಬೇರ್ಪಟ್ಟಿದೆ. ಕೂಲಿಕಾರ ಕುಟುಂಬದ ಗಣೇಶ್ ತಂದೆ ಅನಾರೋಗ್ಯಪೀಡಿತರಾಗಿದ್ದರೆ, ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ. ಗಣೇಶ್ ಉತ್ತಮವಾಗಿ ಕೃಷಿ ಕೆಲಸದಲ್ಲೂ ಪಾರಂಗತನಾಗಿದ್ದ.

ಗಣೇಶನ ಜೊತೆ ಇನ್ನೊಂದು ಸೈಕಲ್‌ನಲ್ಲಿ ಪೇಪರ್ ಹಂಚಲು ಬರುತ್ತಿದ್ದ ಇನ್ನೋರ್ವ ಯುವಕ ಕೆಸರಿನಲ್ಲಿ ಹೋಗಿ ಬಿದ್ದಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಗಣೇಶ್ ರಾಜ್ಯಮಟ್ಟದ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದನು. ಅತ್ಯಂತ ನಿಷ್ಠೆಯಿಂದ ಪತ್ರಿಕೆ ವಿತರಣೆ ಮಾಡುತ್ತಿದ್ದ ಗಣೇಶ್ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದ ಯುವಕನಾಗಿದ್ದನು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಪ್ರಥಮ ಬಾರಿಗೆ ದ.ಕ ಭಾಗದಲ್ಲಿ ಭೂಕಂಪನ: ಸುಳ್ಯದ ತೊಡಿಕಾನದ ದೊಡ್ಡಕುಮೇರಿಯಲ್ಲಿ ಕಂಪಿಸಿದ ಭೂಮಿ

Advertisement

Udayavani is now on Telegram. Click here to join our channel and stay updated with the latest news.

Next