ಸಾಗರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಆಡಳಿತ ನೆರೆಯಿಂದ ಆದ ಹಾನಿಯನ್ನು ಸರಿಪಡಿಸುವ ಒಂದು ಕಾಮಗಾರಿಯನ್ನೂ ಈತನಕ ಕೈಗೆತ್ತಿಕೊಂಡಿಲ್ಲ ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ದೂರಿದ್ದಾರೆ.
ಇಲ್ಲಿನ ತಾಪಂ ಸದಸ್ಯರ ನೇತೃತ್ವದಲ್ಲಿ ನೆರೆ ಕಾಮಗಾರಿ ಕೈಗೊಳ್ಳದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಕರೂರು ಭಾರಂಗಿ, ಆವಿನಹಳ್ಳಿ, ಕಸಬಾ, ಆನಂದಪುರ ಹೋಬಳಿಯಲ್ಲಿ ನೆರೆಯಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಮುಖ್ಯಮಂತ್ರಿಗಳು ಸಾಗರಕ್ಕೆ ಭೇಟಿ ನೀಡಿದಾಗ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದ್ದರೂ ಈತನಕ ಹಣ ಬಿಡುಗಡೆ ಮಾಡಿಲ್ಲ. ಹಣ ಇದೆ ಎಂದು ಹೇಳಲಾಗುತ್ತಿದ್ದರೂ ಯಾವುದೇ ಒಂದು ಸಣ್ಣ ಪರಿಹಾರ ಕಾಮಗಾರಿಯನ್ನು ಕೈಗೊಂಡಿಲ್ಲ. ನೆರೆಯಿಂದ ಆದ ಹಾನಿಯನ್ನು ಸರಿಪಡಿಸುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ಅಡಕೆಗೆ ವ್ಯಾಪಕ ಕೊಳೆರೋಗ ಬಂದಿದೆ. ಕಳೆದ ವರ್ಷ ತಾಪಂ ಶ್ರಮದಿಂದಾಗಿ ಜಿಲ್ಲೆಯಲ್ಲಿ ಅಡಕೆ ಬೆಳೆಗಾರರಿಗೆ ಕೊಳೆರೋಗಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 9 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಬಿಡುಗಡೆ ಮಾಡಿರುವ ಹಣ ರೈತರಿಗೆ ಸರಿಯಾಗಿ ತಲುಪಿಲ್ಲ. ಈ ಬಾರಿ ಸಹ ಇದೇ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 10 ಕೋಟಿ ರೂ. ಬಿಡುಗಡೆ ಮಾಡಬೇಕು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ತಕ್ಷಣ ನೆರೆಯಿಂದ ಆದ ಹಾನಿಯನ್ನು ಸರಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳದೆ ಹೋದಲ್ಲಿ ಪಕ್ಷದಿಂದ ಅಹೋರಾತ್ರಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ ಮಾತನಾಡಿ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ನೆರೆಯಿಂದಾಗಿ ಅತಿಹೆಚ್ಚು ಜಿಲ್ಲೆಗಳು ಸಂಪೂರ್ಣ ನಾಶವಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತಿದ್ದರೂ ಅದಕ್ಕೆ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವನ್ನು ನೆರೆಯಿಂದ ಹಾನಿಗೊಳಗಾದವರಿಗೆ ಪುನರ್ವಸತಿ ಕಲ್ಪಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ರಾಜ್ಯದಲ್ಲಿ ರೈತರು, ಹಿಂದುಳಿದವರು, ದಲಿತ ಜನಾಂಗದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸರ್ಕಾರಕ್ಕೆ ಜನರ ಏಳಿಗೆ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ತುರ್ತು ಸಂದರ್ಭದಲ್ಲಿ ನೀಡಬೇಕಾದ ಅನುದಾನವನ್ನು ಸಹ ನೀಡುತ್ತಿಲ್ಲ. ನರೇಂದ್ರ ಮೋದಿ ಅವರು ಇನ್ನೆರಡು ಮೂರು ದಿನಗಳಲ್ಲಿ ರಾಜ್ಯಕ್ಕೆ ಬರುತ್ತಾರೆ. ಆದರೆ ಅವರು ರಾಜ್ಯದ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವ ಬದಲು ಚಂದ್ರಯಾನ-2 ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಜನರ ನೆಮ್ಮದಿಯನ್ನು ಭಾವನಾತ್ಮಕ ವಿಷಯ ಮುಂದಿರಿಸಿಕೊಂಡು ಹಾಳು ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ ನೆರೆಹಾನಿಗೆ ಸಂಬಂಧಪಟ್ಟಂತೆ ತಾಲೂಕಿಗೆ ಹಣ ಬಿಡುಗಡೆ ಮಾಡಿಲ್ಲ. ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕಣ್ಣೆತ್ತಿ ನೋಡಿಲ್ಲ ಎಂದು ಆರೋಪಿಸಿದರು.
ಪ್ರಮುಖರಾದ ತಸ್ರೀಫ್, ಮಹಾಬಲ ಕೌತಿ, ಮೈಕೆಲ್ ಡಿಸೋಜ, ಪ್ರೇಮ್ ಸಾಗರ್, ಮಧುಮಾಲತಿ, ಎನ್. ಲಲಿತಮ್ಮ, ಕೆ. ಹೊಳೆಯಪ್ಪ, ಭರ್ಮಪ್ಪ ಅಂದಾಸುರ, ಎಸ್. ಲಿಂಗರಾಜ್, ತುಕಾರಾಮ್ ಸಿರವಾಳ ಇನ್ನಿತರರು ಇದ್ದರು.