Advertisement

10ರಿಂದ ಚೌಡೇಶ್ವರಿ ಮಹಾಲಸಾ ದೇವಾಲಯದ ವರ್ಧಂತಿ ಉತ್ಸವ

06:22 PM Mar 07, 2020 | Naveen |

ಸಾಗರ: ಶರಾವತಿ ಕಣಿವೆಯ ಶಕ್ತಿ ದೇವತೆ ಚೌಡೇಶ್ವರಿ ಮಹಾಲಸಾ ದೇವಾಲಯದ ಇಪ್ಪತ್ತೆರಡನೇ ವರ್ಧಂತಿ ಉತ್ಸವ ಹಾಗೂ ರಥೋತ್ಸವವು ಮಾ.10ರಿಂದ 13ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯಿಂದ ಜರುಗಲಿದೆ ಎಂದು ಚೌಡೇಶ್ವರಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಎಂ. ಪೈ ತಿಳಿಸಿದರು.

Advertisement

ನಗರದ ಚೌಡೇಶ್ವರಿ ಪ್ರತಿಷ್ಠಾನದ ಸಂಕೀರ್ಣದಲ್ಲಿ ಶುಕ್ರವಾರ ಶ್ರೀದೇವಿಯ ಉತ್ಸವದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಉತ್ಸವದ ಕಾಲದಲ್ಲಿ ಸನ್ನಿಧಿಯಲ್ಲಿ ಪ್ರತಿದಿನ ವಿವಿಧ ತಂಡಗಳಿಂದ ಭಜನಾ ಕಾರ್ಯಗಳು ನಡೆಯಲಿವೆ ಎಂದರು.

ಉತ್ಸವದ ಮೊದಲ ದಿನದಂದು ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸುವುದರೊಂದಿಗೆ ಸಂಜೆ 7 ಗಂಟೆಗೆ ಶರಾವತಿ ಕಣಿವೆ ಪ್ರದೇಶದ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ವಿದ್ಯಾ ರಾಜ ತೀರ್ಥ ಶ್ರೀಪಾದ ವಡೇರ ಹಾಗೂ ಪಟ್ಟ ಶಿಷ್ಯರಾದ ವಿದ್ಯಾ ಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ದೇವಾಲಯದ ಮಹಾದ್ವಾರದ ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ  ರಮಾಡಿಕೊಳ್ಳಲಾಗುವುದು. ಇದುವರೆಗೂ ಜರುಗಿದ 22 ವರ್ಷಗಳ ಜಾತ್ರಾ ಉತ್ಸವದಲ್ಲಿಯೂ ಸಾನ್ನಿಧ್ಯ ವಹಿಸಿ ಆಶೀರ್ವದಿಸಿರುವ ಶ್ರೀಗಳು ಇಲ್ಲಿನ ಭಕ್ತರ ಮೇಲೆ ಇಟ್ಟ ಅಪಾರವಾದ ಕಾಳಜಿಗೆ ಇದು ಸಾಕ್ಷಿಯಾಗಿದೆ ಎಂದರು.

ರಾತ್ರಿ 8 ಗಂಟೆಗೆ ಶ್ರೀ ಮಾರುತಿ ರಂಗಮಂದಿರದಲ್ಲಿ ಪ್ರತಿಷ್ಠಾನದ ವತಿಯಿಂದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯಕ್ಷ ಚೇತನ ಮಹಿಳಾ ಕಲಾ ಬಳಗ ಶಿವಮೊಗ್ಗ ಅವರಿಂದ ಭಸ್ಮಾಸುರ ಮೋಹಿನಿ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿದೆ ಎಂದರು. ಮಾ. 11ರಂದು ಬೆಳಗ್ಗೆ ದೇವರಿಗೆ ಕುಂಭಾಭಿಷೇಕ, ಸಾಮೂಹಿಕ ಗಣಹೋಮ ನಡೆಯಲಿದ್ದು, ಸಂಜೆ ಮಹಾಲಸಾ ದೇವಿಯ ಉತ್ಸವ ಮೂರ್ತಿಯ ರಥೋತ್ಸವ ನಡೆಯಲಿದೆ. ನಂತರ ಶ್ರೀಗಳಿಗೆ ಪಾದಪೂಜೆ ಮತ್ತು ಭಕ್ತಾದಿಗಳಿಗೆ ಶ್ರೀಗಳ ಆಶೀರ್ವಚನ, ರಾತ್ರಿ 9ಕ್ಕೆ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡ ಕುಂದಾಪುರ ಅವರಿಂದ ಮದುಮಗ ಎಂಬ ಹಾಸ್ಯ ನಾಟಕ ಅಭಿನಯವಾಗಲಿದೆ ಎಂದರು.

12ರಂದು ಬೆಳಗ್ಗೆ ನವಚಂಡಿ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀ ದೇವಿಗೆ ಸರ್ವಾಲಂಕಾರ ಪೂಜೆ ನೆರವೇರಲಿದೆ ಎಂದರು. ಸಂಜೆ ನಾಗಚೌಡೇಶ್ವರಿಯ ಪಲ್ಲಕ್ಕಿ ಉತ್ಸವ
ನಡೆಯಲಿದ್ದು, ರಾತ್ರಿ ಸ್ಥಳೀಯ ಹಾಗೂ ಅತಿಥಿ ಕಲಾವಿದರನ್ನೊಳಗೊಂಡ ಸಾಂಸ್ಕೃತಿಕ ನೃತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದರು. ಉತ್ಸವದ ಕೊನೆಯ ದಿನವಾದ 13ರಂದು ಮಧ್ಯಾಹ್ನ ದರುಶನ ಪಾತ್ರಿಗಳಿಂದ ಶ್ರೀ ಸಿದ್ಧ ಪುರುಷನ ಆವಾಹನೆಯೊಂದಿಗೆ ಭಕ್ತರಿಗೆ ಪ್ರಸಾದ ತರಣೆ, ಸಂಜೆ ಶ್ರೀ ಚೌಡೇಶ್ವರಿ ದೇವಿಯ ಅದ್ಧೂರಿ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಚಿಣ್ಣರ ಕೃಷ್ಣವೇಷ ಪ್ರದರ್ಶನ ಹಾಗೂ ಶರಾವತಿ ಕಣಿವೆ ಪ್ರದೇಶದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು.

Advertisement

ಧರ್ಮದರ್ಶಿ ಮಂಡಲ ಪ್ರಮುಖರಾದ ಶಿವಾನಂದ ಪ್ರಭು ಮಾತನಾಡಿ, ಉತ್ಸವದ ನಾಲ್ಕು ದಿನಗಳ ಕಾಲ ಶ್ರೀದೇವಿಯ ಕ್ಷೇತ್ರಕ್ಕೆ ಆಗಮಿಸುವ ಸಮಸ್ತ ಭಕ್ತಾದಿಗಳಿಗೆ ಪ್ರಸಾದ ಭೋಜನ ರೂಪದಲ್ಲಿ ಮಹಾ ಅನ್ನಸಂತರ್ಪಣಾ ಕಾರ್ಯ ನಡೆಯಲಿದೆ. ದೇವಾಲಯದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಅನ್ನಸಂತರ್ಪಣೆಯನ್ನು ಆರಂಭಿಸಲಾಗಿದ್ದು, ಏನೂ ಕೊರತೆ ಉಂಟಾಗದಂತೆ ಪ್ರತಿನಿತ್ಯ ಭಕ್ತರಿಗೆ ಅನ್ನಪ್ರಸಾದವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಪ್ರಮುಖರಾದ ಅಜಿತ್‌ ಮಹಾಲೆ, ಮೋಹನ್‌ ಎಂ. ಪೈ, ಸತೀಶ್‌ ಮಹಾಲೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next