Advertisement
ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಕಸಬಾ ಹೋಬಳಿ ಪ್ರವಾಸ ಮುಗಿಸಿಕೊಂಡು ನಗರಸಭೆಯಲ್ಲಿರುವ ತಮ್ಮ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಕನ್ನಡಾಭಿಮಾನ ಸಂಕಲ್ಪದ ಯಾತ್ರೆಯ ಬೃಹತ್ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿತ್ತು. ಶಾಸಕರು ಸ್ವಲ್ಪ ಹೊತ್ತು ಮೆರವಣಿಗೆ ಸಾಗಲಿ ಎಂದು ಕಾರಿನಲ್ಲಿ ಕಾಯುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರು ಕಚೇರಿಗೆ ಹೋಗಲು ಜಾಗ ಮಾಡಿಕೊಡುವಂತೆ ವಿನಂತಿ ಮಾಡಿದ್ದಾರೆ. ಇದಕ್ಕೆ ಕನ್ನಡ ಸೇನೆಯ ಕೆಲವು ಕಾರ್ಯಕರ್ತರು ಒಪ್ಪಿಗೆ ಸೂಚಿಸಿ ರಸ್ತೆ ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಗಲಾಟೆ ನಡೆದಿದೆ.
Related Articles
Advertisement
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್. ಹಾಲಪ್ಪ, ಊರಿನಲ್ಲಿ ಕೋಮು ಸೌಹಾರ್ದವನ್ನು ಕದಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಇದಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ. ಊರಿನ ನೆಮ್ಮದಿ ಹಾಳು ಮಾಡುವ ಕೃತ್ಯ ನಡೆಸುತ್ತಿರುವವ ಕೆಲವರಿಗೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ದೂಷಿಸಿದರು.
ನಮ್ಮ ಕಾರ್ಯಕರ್ತರು ಸಣ್ಣಪುಟ್ಟ ಮೆರವಣಿಗೆ ಮಾಡಲು ಮುಂದಾದರೆ ಪೊಲೀಸರು ನೂರಾರು ಕಾಯ್ದೆ ಹೇಳುತ್ತಾರೆ. ನಮಗೂ ಕನ್ನಡನಾಡು, ನುಡಿ ಬಗ್ಗೆ ಗೌರವವಿದೆ. ಆದರೆ ಕನ್ನಡಸೇನೆ ಹೆಸರಿನಲ್ಲಿ ಕೆಲವರು ಕನ್ನಡ ಭಾಷೆ ಉಳಿಸುವ ಹೆಸರಿನಲ್ಲಿ ನೂರಾರು ವಾಹನಗಳನ್ನು ರಸ್ತೆಗೆ ತಂದು ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದಾರೆ. ಅಂತಹವರ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಮ್ಮನ್ನು ದೂಷಣೆ ಮಾಡುತ್ತಿರುವುದು ಖಂಡನೀಯ. ನಗರದ ಮಧ್ಯಭಾಗದಲ್ಲಿ ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ನಡೆಯುತ್ತಿದ್ದರೆ ಕೆಲವರು ನಗರದ ಹೊರವಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಇರುವ ಮನೆಗಳ ಎದುರು ಪಟಾಕಿ ಸಿಡಿಸಿ, ಬೈಕ್ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ. ಇದು ಊರಿನಲ್ಲಿ ಅಶಾಂತಿ ಮೂಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ನನ್ನ ವಿರುದ್ದ ಘೋಷಣೆ ಕೂಗಿ, ಅವಹೇಳನಕಾರಿಯಾಗಿ ಮಾತನಾಡಿರುವವರನ್ನು ಬಂಧಿಸುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ರಾಜಿ ಸಂಧಾನ: ಎರಡು ಘಂಟೆಗಳ ಕಾಲ ನಡೆದ ಸಹಾಯಕ ಪೊಲೀಸ್ ಅಧಿಧೀಕ್ಷಕ ಯತೀಶ್ ಎನ್. ನೇತೃತ್ವದಲ್ಲಿ ನಡೆದ ರಾಜಿ ಪಂಚಾಯ್ತಿ ಸಭೆಯಲ್ಲಿ ಮೆರವಣಿಗೆಯ ನೇತೃತ್ವವನ್ನು ಶಾಸಕ ಎಚ್. ಹಾಲಪ್ಪ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಇನ್ನಿತರರು ಇರುತ್ತಾರೆ. ಶಾಸಕರ ವಿರುದ್ಧ ಘೋಷಣೆ ಕೂಗಿದ ಆಲಿ ಎಂಬಾತನನ್ನು ಮೆರವಣಿಗೆಯಿಂದ ಹೊರಗೆ ಇಟ್ಟು, ಕನ್ನಡಾಭಿಮಾನದ ಸಂಕಲ್ಪ ಯಾತ್ರೆಯನ್ನು ಮುಂದುವರಿಸಲು ಸಭೆಯಲ್ಲಿ ತೀರ್ಮಾನವಾಯಿತು.
ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ನಗರವ್ಯಾಪ್ತಿಯಿಂದ ಹೊರಗೆ ಹೋಗುವವರೆಗೂ ಕನ್ನಡ ಪರ ಘೋಷಣೆ ಕೂಗಿ ಎಲ್ಲ ರೀತಿಯ ಗೌರವಾದರಗಳನ್ನು ಕನ್ನಡಾಭಿಮಾನ ಸಂಕಲ್ಪಯಾತ್ರೆಗೆ ನೀಡುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ರಾಜಿ ಸಭೆಯಲ್ಲ್ಲಿ ಬಿಜೆಪಿ ಪ್ರಮುಖರಾದ ಟಿ.ಡಿ. ಮೇಘರಾಜ್, ಆರ್. ಶ್ರೀನಿವಾಸ್, ಚೇತನರಾಜ್ ಕಣ್ಣೂರು, ಗಣೇಶಪ್ರಸಾದ್, ತಾಪಂ ಸದಸ್ಯ ದೇವೇಂದ್ರಪ್ಪ, ತಸ್ರೀಫ್, ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ನಗರಸಭೆಯ ಬಿಜೆಪಿ ಸದಸ್ಯರು ಇದ್ದರು.