ಸಾಗರ: ನಿಧಾನವಾಗಿ ಮಂಗನ ಕಾಯಿಲೆ ತಾಲೂಕಿನಲ್ಲಿ ತನ್ನ ಪ್ರಭಾವ ತೋರಿಸುವ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಶನಿವಾರ ಸಂಜೆಯ ವೇಳೆಗೆ ಇನ್ನೊಂದು ಕೆಎಫ್‌ಡಿ ಪಾಸಿಟಿವ್ ಪ್ರಕರಣ ತಾಲೂಕಿನ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇಲ್ಲಿನ ಬಿಳಿಗಾರು ಆರೋಗ್ಯ ಉಪಕೇಂದ್ರದ ಕೊಂಜುವಳ್ಳಿಯ ಸ್ವಾಮಿ ತಿಮ್ಮಾನಾಯ್ಕ (43) ಅವರಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆಯ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ವೈರಸ್ ಸೋಂಕು ಖಚಿತಪಟ್ಟ ಹಿನ್ನೆಲೆಯಲ್ಲಿ ಜ್ವರಪೀಡಿತ ಸ್ವಾಮಿ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಕೆಎಫ್‌ಡಿ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮಿ ಅವರಿಗೆ ಮೂರು ಬಾರಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ. ಸ್ವಾಮಿ ಅವರ ಆರೋಗ್ಯ ಸುಧಾರಿಸುತ್ತಿದ್ದು ಯಾವುದೇ ಜೀವಭಯವಿಲ್ಲ ಎಂದು ಹೇಳಲಾಗಿದೆ.
ಈ ನಡುವೆ ಹೈ ಅಲರ್ಟ್ ಘೋಷಿಸಿಕೊಂಡಿರುವ ಆರೋಗ್ಯ ಇಲಾಖೆ ಮೂರು ತಂಡಗಳಾಗಿ ಭಾನುವಾರ ಬಿಳಿಗಾರು, ಅರಲಗೋಡು, ಕೊಂಜುವಳ್ಳಿ, ಗುಬ್ಬಗೋಡು, ಹಾಲುಗೋಡು ಮೊದಲಾದ ಭಾಗಗಳ 80 ಮನೆಗಳಲ್ಲಿ ಸರ್ವೆ ನಡೆಸಿದೆ. ಈ ಸಂದರ್ಭದಲ್ಲಿ ಕಂಡುಬಂದ ಮೂರು ಜ್ವರದ ಪ್ರಕರಣಗಳಲ್ಲಿ ರಕ್ತದ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಈ ಮೂರು ಜ್ವರಪೀಡಿತರು ಕೆಎಫ್‌ಡಿಯ ಮೂರು ಲಸಿಕೆಗಳನ್ನು ತೆಗೆದುಕೊಂಡಿರುವುದು ಕಂಡುಬಂದಿದೆ.
ಮತ್ತೊಮ್ಮೆ ಈ ಭಾಗಗಳಲ್ಲಿ ಡಿಎಂಪಿ ತೈಲ ವಿತರಿಸಿ ಜಾಗೃತಿ ಪ್ರಚಾರ ಕೈಗೊಳ್ಳಲಾಗಿದೆ. ಈ ತಂಡಗಳನ್ನು ಕಾರ್ಗಲ್‌ನಿಂದ ಡಾ| ಸೈಯದ್, ಅರಲಗೋಡಿನಿಂದ ಡಾ| ಕಿರಣ್ ಹಾಗೂ ಸಾಗರದಿಂದ ತಾಲೂಕು ವೈದ್ಯಾಧಿ ಕಾರಿ ಡಾ| ಮುನಿ ವೆಂಕಟರಾಜು ಮುನ್ನಡೆಸಿದ್ದರು. ಕಳೆದ ಬಾರಿ 23 ಜನರ ಸಾವಿಗೆ ತುತ್ತಾಗಿದ್ದ ಅರಳಗೋಡು ಭಾಗದಲ್ಲಿ ಈ ವರ್ಷ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅರಳಗೋಡು ಪಿಎಚ್‌ಸಿಗೆ ಸರಾಸರಿ 6ರಿಂದ 7 ಅನಾರೋಗ್ಯದ ಪ್ರಕರಣಗಳು ಬರುತ್ತಿದ್ದರೂ ಆತಂಕಕಾರಿ ಜ್ವರದ ಲಕ್ಷಣ ಕಂಡುಬರುತ್ತಿಲ್ಲ. ಶೇ. 95ರಷ್ಟು ಕೆಎಫ್‌ಡಿ ಪ್ರತಿಬಂಧಕ ಲಸಿಕೆ ತೆಗೆದುಕೊಂಡಿರುವುದರಿಂದ ಸಮಸ್ಯೆ ಸಂಪೂರ್ಣ ಹತೋಟಿಯಲ್ಲಿದೆ. ಈ ಬೆಳವಣಿಗೆಗಳು ನಮಗೆ ಸಮಾಧಾನ ತಂದಿದೆ ಎಂದು ಟಿಎಚ್‌ಒ ಡಾ| ರಾಜು ತಿಳಿಸಿದರು.
ಮಂಗ ಸಾವು
ಉಳ್ಳೂರು ಸಮೀಪದ ಬಾಳೆಗುಂಡಿಯ ಶಿವಪ್ಪ ಬಂಗಾರಪ್ಪ ಬಾಳೆಗುಂಡಿ ಅವರ ಮನೆಯ ಸಮೀಪ ಭಾನುವಾರ ಮಂಗವೊಂದು ಮೃತಪಟ್ಟಿದೆ. ಮಧ್ಯಾಹ್ನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗವನ್ನು ಗ್ರಾಮಸ್ಥರು ಗಮನಿಸಿದ್ದಾರೆ.
ಸಂಜೆಯ ನಾಲ್ಕೂವರೆಯ ವೇಳೆಗೆ ಮಂಗ ಕೊನೆಯುಸಿರೆಳೆದಿದೆ. ಪಶುವೈದ್ಯ ಸಹಾಯಕ ನಿರ್ದೇಶಕ ಡಾ| ಎನ್.ಎಚ್. ಶ್ರೀಪಾದರಾವ್ ಮಂಗದ ಶವ ಪರೀಕ್ಷೆ ನಡೆಸಿದರು. ಗ್ರಾಪಂ ಸದಸ್ಯ ಅಶೋಕ್, ಅರಣ್ಯ ಇಲಾಖೆಯ ಜಗನ್ನಾಥ್, ಆರೋಗ್ಯ ಇಲಾಖೆಯ ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು. ಮಂಗನ ದಹನ ಹಾಗೂ ಮೆಲಾಥಿಯಾನ್ ಪುಡಿ ಸಿಂಪಡಣೆ ಕಾರ್ಯ ನಡೆಸಲಾಯಿತು. ಹರುಡಿಕೆ ಬಳಿ ಒಂದು ಮಂಗ ಸತ್ತಿದ್ದು ದಹನ ಮಾಡಲಾಯಿತು.