ಸಾಗರ: ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಮಂಗನ ಕಾಯಿಲೆ ಸಂಬಂಧ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಇಬ್ಬರು ವೈದ್ಯರನ್ನು ನೇಮಕ ಮಾಡಲಾಗಿದೆ. ರೋಗಿಗಳು ಹೆಚ್ಚಾದರೆ ಹೊರಗೆ ವಿಶೇಷ ವಾರ್ಡ್ ತೆರೆದು ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಭರವಸೆ ನೀಡಿದರು.
ತಾಲೂಕಿನ ಕಾರ್ಗಲ್ ಸಮೀಪದ ಅರಳಗೋಡು ಗ್ರಾಪಂನಲ್ಲಿ ಸೋಮವಾರ ಮಂಗನ ಕಾಯಿಲೆ ಸಂಬಂಧ ಕರೆಯಲಾಗಿದ್ದ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಕೆಎಫ್‌ಡಿ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದರು.
ಮಂಗನ ಕಾಯಿಲೆ ಕಂಡು ಬಂದ ಪ್ರದೇಶಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಮೂಲಕ ಕಾಯಿಲೆ ಬರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಅರಿವು ಮೂಡಿಸುವ ಜಾಥಾವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಬೇಕು. ಈಗಾಗಲೇ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ಸಂಚಾರಿ ವಾಹನ ತಾಲೂಕಿನಾದ್ಯಂತ ಸಂಚರಿಸುತ್ತಿದೆ. ಹಿಂದೆ ಕಾಯಿಲೆ ಕಾಣಿಸಿಕೊಂಡ ಯಾವುದೇ ಭಾಗದಲ್ಲೂ ಈ ಸಾರಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಮಂಗನ ಸಾವು ಸಹ ಸಂಭವಿಸಿಲ್ಲ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ.
ಒಂದೊಮ್ಮೆ ಮಂಗನ ಸಾವು, ಕಾಯಿಲೆಯಂತಹ ಪ್ರಕರಣ ಕಂಡು ಬಂದಲ್ಲಿ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಕ್ಷಣ ತಿಳಿಸಿ ಎಂದರು. ಮಂಗನ ಕಾಯಿಲೆಯನ್ನು ಶಾಶ್ವತವಾಗಿ ದೂರವಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಖುದ್ದಾಗಿ ನಾನೇ ಅರಳಗೋಡು ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
ಸಾರ್ವಜನಿಕರು ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ತಾಪಂ ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿ, ಸ್ಥಳೀಯವಾಗಿ ಅರಣ್ಯ ಇಲಾಖೆ ಮುಂಜಾಗ್ರತೆಯ ಕಾರ್ಯ ಮಾಡಬೇಕು. ರಸ್ತೆಯ ಬದಿಯ ಗಿಡಗಳನ್ನು ಸ್ವಚ್ಛಗೊಳಿಸಿ, ತೆರವುಗೊಳಿಸಬೇಕು. ಭಾನುಕುಳಿ ವ್ಯಾಪ್ತಿ ಉರಳಗಲ್ಲು ವ್ಯಾಪ್ತಿಯಲ್ಲಿ ಮಂಗವೊಂದು ಮೃತಪಟ್ಟಿದ್ದು, ಒಂದು ಕುಟುಂಬದವರು ಜ್ವರ ಪೀಡಿತರಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಇಲಾಖೆಗಳು ಜವಾಬ್ದಾರಿಯುತ ಕೆಲಸ ಮಾಡಬೇಕು ಎಂದರು.
ಸಹಾಯಕ ಆಯುಕ್ತ ಡಾ| ಎಲ್.ನಾಗರಾಜ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣಕುಮಾರ್, ಗ್ರಾಪಂ ಅಧ್ಯಕ್ಷೆ ಬೇಬಿ ರಾಜಪ್ಪ, ಉಪಾಧ್ಯಕ್ಷೆ ಶಿವಮ್ಮ ಮೇಘರಾಜ್, ತಾಪಂ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಲಕ್ಷ್ಮೀ , ರವಿ ಬಿದರೂರು, ಶುಭಾ ಕಾಳಮಂಜಿ, ಡಾ| ರಾಜೇಶ್ ಸುರಗಿಹಳ್ಳ, ಡಾ| ಕಿರಣ, ಡಾ|ಮುನಿವೆಂಕಟರಾಜು ಇನ್ನಿತರರು ಇದ್ದರು. ಪಿಡಿಒ ಪ್ರವೀಣಕುಮಾರ್ ನಿರ್ವಹಿಸಿದರು.