Advertisement

ಆಧಾರ್‌ ಷರತ್ತು; ವಂಶವೃಕ್ಷಕ್ಕೆ ತೊಡಕು

01:20 PM Jun 17, 2019 | Naveen |

ಸಾಗರ: ಕಂದಾಯ ಇಲಾಖೆಯ ಕೆಲವು ನಾಡಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಕಡ್ಡಾಯ ಎಂದು ದಾಖಲೆ ಕೇಳುತ್ತಿರುವುದರಿಂದ ವಂಶವೃಕ್ಷ ದೃಢೀಕರಣ ಪಡೆಯಲು ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದು, ಬ್ಯಾಂಕ್‌ ಹಾಗೂ ನ್ಯಾಯಾಲಯದ ಕೆಲಸಗಳಲ್ಲಿಯೂ ಜನರು ಪರದಾಡುವಂತಾಗಿದೆ. ಈ ಸಂಬಂಧ ತಾಳಗುಪ್ಪ ಹಾಗೂ ತುಮರಿ ಭಾಗದ ಸುಳ್ಳಳ್ಳಿ ನೆಮ್ಮದಿ ಕೇಂದ್ರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಂದಾಯ ಇಲಾಖೆ ವಂಶವೃಕ್ಷ ದೃಢೀಕರಣವನ್ನು ಮೂರು ತಲೆಮಾರುಗಳಿಂದ ಪಡೆಯಬೇಕು ಎಂಬ ನಿಯಮ ರೂಪಿಸಿದ್ದು, ಈ ದಾಖಲೆಗೆ ವಂಶವೃಕ್ಷದಲ್ಲಿ ಕಾಣಿಸಿದ ಪ್ರತಿಯೊಬ್ಬರ ಆಧಾರ್‌ ನಂಬರ್‌ ಅಥವಾ ಚುನಾವಣಾ ಗುರುತಿನ ಪತ್ರದ ಎಪಿಕ್‌ ನಂಬರ್‌ ದಾಖಲಿಸಬೇಕು ಎಂದು ಷರತ್ತು ಹಾಕುತ್ತಿದೆ. ಮೃತಪಟ್ಟವರಿದ್ದಲ್ಲಿ ಅವರ ಮರಣ ಪತ್ರವನ್ನು ಕೂಡ ಲಗತ್ತಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇಂದಿನ ವಿಭಕ್ತ ಕುಟುಂಬಗಳ ಸನ್ನಿವೇಶದಲ್ಲಿ ದಾಯಾದಿಗಳ ಆಧಾರ್‌ ಕಾರ್ಡ್‌ ಅಥವಾ ಡೆತ್‌ ಸರ್ಟಿಫಿಕೇಟ್ ಕೇಳುವುದು ಅನುಮಾನಗಳಿಗೆ ಕಾರಣವಾಗಿರುವ, ಕೊಡದಿದ್ದಕ್ಕೆ ಕೈ ಕೈ ಮಿಲಾಯಿಸುವಂತಹ ಘಟನೆಗಳನ್ನು ರಾಜ್ಯದ ವಿವಿಧೆಡೆ ನೋಡುವಂತಾಗಿದೆ. ಇಂತಹ ಪ್ರಕರಣಗಳು ಸಾಗರ ತಾಲೂಕಿನ ತಾಳಗುಪ್ಪ, ಸುಳ್ಳಳ್ಳಿ ಮೊದಲಾದೆಡೆ ನಡೆಯುತ್ತಿವೆ.

ಕೆಲವು ನಾಡಕಚೇರಿಗಳಲ್ಲಂತೂ ಆಧಾರ್‌ ಕಾರ್ಡ್‌ ನಂಬರ್‌ ಜೊತೆಗೆ ಆಧಾರ್‌ ಕಾರ್ಡ್‌ನ್ನು ಲಗತ್ತಿಸುವ ಅಗತ್ಯವನ್ನು ಪ್ರತಿಪಾದಿಸುತ್ತಿರುವುದರಿಂದ ವಂಶವೃಕ್ಷ ದಾಖಲೆ ದೃಢೀಕರಣ ಪಡೆಯಲು ತಲೆಮಾರುಗಟ್ಟಲೆ ಬೆವರು ಸುರಿಸುವಂತಾಗಿದೆ. ಸಾಗರ ತಾಲೂಕಿನ ತಾಳಗುಪ್ಪ, ಸುಳ್ಳಳ್ಳಿ ನಾಡಕಚೇರಿಗಳಲ್ಲಿ ಆಧಾರ್‌ ಕಾರ್ಡ್‌ನ ಪ್ರತಿಯನ್ನೂ ಕೇಳುತ್ತಿರುವುದನ್ನು ಇಲ್ಲಿ ಉದಾಹರಿಸಬಹುದು. ಕೆಲವೊಬ್ಬರ ವಂಶವೃಕ್ಷ ದಾಖಲೆಯಲ್ಲಿ 100ಕ್ಕೂ ಹೆಚ್ಚು ಜನರನ್ನು ಸೇರಿಸಬೇಕಾಗಿರುತ್ತದೆ. ಆದರೆ ಇವರೆಲ್ಲರ ಆಧಾರ್‌ ನಂಬರ್‌ ಹಾಗೂ ಆಧಾರ್‌ ಕಾರ್ಡ್‌ ಒದಗಿಸಕೊಡುವುದು ಸುಲಭ ಸಾಧ್ಯವಲ್ಲ.

ವಂಶವೃಕ್ಷ ದಾಖಲೆಯಲ್ಲಿನ ಗೊಂದಲದಿಂದಾಗಿ ಕುಟುಂಬಗಳ ಹಿಸ್ಸೆ ಪತ್ರ, ಬ್ಯಾಂಕ್‌ಗಳಲ್ಲಿನ ಕ್ಲೈಮ್‌ಗಳ ನಿಷ್ಕರ್ಷೆ, ಪೌತಿ ಖಾತಾ ಬದಲಾವಣೆ, ಸಾಮಾನ್ಯ ಖಾತಾ ಬದಲಾವಣೆ, ನ್ಯಾಯಾಲಯದ ತಗಾದೆಗಳಲ್ಲಿನ ಇತ್ಯರ್ಥ ವಿಳಂಬವಾಗುತ್ತದೆ. ಹಲವು ಸಂದರ್ಭಗಳಲ್ಲಿ ಕುಟುಂಬವೊಂದರಲ್ಲಿ ನೂರಕ್ಕೂ ಹೆಚ್ಚು ಜನ ಅಜ್ಜ, ಅಜ್ಜಿ, ಮಕ್ಕಳು, ಮೊಮ್ಮಕ್ಕಳು ವ್ಯವಸ್ಥೆಯಡಿಯಿದ್ದಲ್ಲಿ ಎಲ್ಲರ ಆಧಾರ್‌ ನಂಬರ್‌ ಪಡೆಯುವುದು ದುಃಸ್ಸಾಧ್ಯದ ವಿಚಾರ. ಹಲವರಲ್ಲಿ ಆಧಾರ್‌ ಕಾರ್ಡ್‌ ಅಥವಾ ಎಪಿಕ್‌ ಕಾರ್ಡ್‌ ಇಲ್ಲವೇ ಇಲ್ಲ ಎಂದಾಗಲೂ ವಂಶವೃಕ್ಷ ದೃಢೀಕರಣ ನಿರಾಕರಿಸಲಾಗುತ್ತಿದೆ.

ವಿವಿಧ ಸಂದರ್ಭಗಳಲ್ಲಿ ವಂಶವೃಕ್ಷದಲ್ಲಿ ಮೂರು ತಲೆಮಾರಿನ ಮಾಹಿತಿಯ ಅಗತ್ಯವೇ ಇರುವುದಿಲ್ಲ. ವಿಭಕ್ತ ಕುಟುಂಬಗಳಲ್ಲಿನ ಪೌತಿ ಸಬೂಬು ಖಾತೆ ವರ್ಗಾವಣೆ, ಕೃಷಿ ಕುಟುಂಬದ ಸದಸ್ಯರ ದೃಢೀಕರಣ, ಜೀವಂತ ಕುಟುಂಬ ಸದಸ್ಯರ ದೃಢೀಕರಣ ಸಮಯದಲ್ಲಿ ವಂಶವೃಕ್ಷ ದಾಖಲೆ ಬೇಕು. ವಾಸ್ತವವಾಗಿ ಖಾತೆದಾರರ ಸರಳ ವಾರಸುದಾರರ ವಂಶವೃಕ್ಷದ ದಾಖಲೆ ಈ ದೃಢೀಕರಣ ಒದಗಿಸಲು ಸಾಕಾಗುತ್ತದೆ. ಆದರೆ ಸರ್ಕಾರದ ನಿಯಮ ಜನರನ್ನು ಅಲೆದಾಡುವಂತೆ ಮಾಡಿದೆ.

Advertisement

ದೂರು ದಾಖಲು: ಈಗಾಗಲೇ ಸಾಗರದಲ್ಲಿ ನಡೆಯುತ್ತಿರುವ ವಂಶವೃಕ್ಷ ದಾಖಲೆ ಗೊಂದಲದ ಕುರಿತು ಸಾಗರ ತಾಲೂಕಿನ ವಿವಿಧ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಂಶವೃಕ್ಷ ದಾಖಲೆಗೆ ಅರ್ಜಿದಾರರ ಆಧಾರ್‌ ನಂಬರ್‌ ಪಡೆದುಕೊಳ್ಳಬೇಕೆಂದೂ, ಉಳಿದಂತೆ ಪೌತಿ ಖಾತೆ ಬದಲಾವಣೆ, ಕೃಷಿ ಕುಟುಂಬ ದೃಢೀಕರಣ, ಜೀವಂತ ಸದಸ್ಯರ ದೃಢೀಕರಣ ಪತ್ರ ನೀಡಿಕೆ ಸಂದರ್ಭದಲ್ಲಿ ಒಂದು ತಲೆಮಾರಿನ ವಂಶವೃಕ್ಷ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಿದ್ದು, ತಾಲೂಕಿಗೆ ಭೇಟಿ ಇತ್ತ ಸಂದರ್ಭದಲ್ಲಿ ಗೊಂದಲ ನಿವಾರಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಸಮಸ್ಯೆಯಲ್ಲಿಯೇ ಸಂಭಾವನೆಯಿದೆ!
ವಂಶವೃಕ್ಷ ದಾಖಲೆಗಳನ್ನು ಒದಗಿಸುವ ತಂತ್ರಾಂಶ ಆಧಾರ್‌ ಕಾರ್ಡ್‌ ನಂಬರ್‌ನ್ನು ಕೊಡಬೇಕೆಂದು ಕಡ್ಡಾಯ ಮಾಡುವುದಿಲ್ಲ. ಈ ತಂತ್ರಾಂಶದಲ್ಲಿ ಆಧಾರ್‌ ಅಲ್ಲದೆ ಪಡಿತರ, ಶಾಲಾ ದಾಖಲೆ ಮೊದಲಾದ ವಿವಿಧ ದಾಖಲೆಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಇಲ್ಲಿ ನಿರ್ದಿಷ್ಟ ಸಂಖ್ಯೆ ಬದಲು ಯಾವುದೇ ಸಂಖ್ಯೆ ನೀಡಿದರೂ ದಾಖಲೆಯ ನೋಂದಣಿಯಾಗುತ್ತದೆ. ಆಧಾರ್‌ ಎಂದು ಆಯ್ಕೆ ಮಾಡಿದರೆ ಸರಿಯಾದ ಆಧಾರ್‌ ಸಂಖ್ಯೆ ಅಲ್ಲ ಎಂತಾದರೆ ಮಾಹಿತಿ ಉಣಿಸುವಿಕೆ ಮುಂದೆ ಹೋಗುವುದಿಲ್ಲ. ಬಹುತೇಕ ಹೋಬಳಿಗಳ ನೆಮ್ಮದಿ ಕೇಂದ್ರದಲ್ಲಿ ಅರ್ಜಿದಾರನ ಆಧಾರ್‌ ಹೊರತಾಗಿ ಉಳಿದವರ ಆಧಾರ್‌ ಬಗ್ಗೆ ಕಡ್ಡಾಯ ಎಂದು ಹೇಳಲಾಗುತ್ತಿಲ್ಲ. ಆದರೆ ಆಧಾರ್‌ ಬೇಕೇ ಬೇಕು ಎನ್ನುವುದು, ಅರ್ಜಿದಾರ ಬೇರೆ ಏನಾದರೂ ಮಾಡಲು ಸಾಧ್ಯವೇ ಎಂದು ಕೇಳುವುದು ಮತ್ತು ಅದಕ್ಕಾಗಿ ‘ವೆಚ್ಚ’ ಭರಿಸಲು ಸಿದ್ದನಾಗುವುದು ನಡೆಯುವುದರಿಂದ ಹಣ ಕಮಾಯಿಯ ಮಾರ್ಗವಾಗಿಯೇ ಆಧಾರ್‌ ಕಡ್ಡಾಯದ ಗುಮ್ಮವನ್ನು ಮುಂದಿಡಲಾಗುತ್ತದೆ ಎಂದು ಕಂದಾಯ ಇಲಾಖೆಯ ಮೂಲಗಳೇ ಸ್ಪಷ್ಟಪಡಿಸುತ್ತವೆ.
Advertisement

Udayavani is now on Telegram. Click here to join our channel and stay updated with the latest news.

Next